
ಬೆಂಗಳೂರು (ಜೂ.19): ವಾರಾಂತ್ಯದ ರಜೆ ಹಾಗೂ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ದೇಗುಲಗಳಲ್ಲಿ ಮಹಿಳೆಯರ ದಂಡೇ ಕಂಡು ಬರುತ್ತಿದೆ. ಧರ್ಮಸ್ಥಳ, ಗೋಕರ್ಣ, ಸುಬ್ರಹ್ಮಣ್ಯ, ಉಡುಪಿ, ಶೃಂಗೇರಿ, ಕೊಲ್ಲೂರು, ಮಹದೇಶ್ವರ ಬೆಟ್ಟ, ಸವದತ್ತಿ ಸೇರಿದಂತೆ ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಶನಿವಾರಕ್ಕಿಂತಲೂ ಹೆಚ್ಚಿದ ಮಹಿಳಾ ಭಕ್ತಾದಿಗಳು ಭಾನುವಾರ ಕಂಡುಬಂದರು.
ಬಸ್ಸು ಹತ್ತುವ ವೇಳೆ ಕೆಲವೆಡೆ ನೂಕುನುಗ್ಗಲು ಉಂಟಾಗಿದ್ದು, ತಳ್ಳಾಟ-ನೂಕಾಟದಿಂದ ವೃದ್ಧರು, ಮಕ್ಕಳು, ಕಂದಮ್ಮಗಳನ್ನು ಎತ್ತುಕೊಂಡ ತಾಯಂದಿರು ಪ್ರಯಾಸಪಡಬೇಕಾಯಿತು. ಸೀಟಿಗಾಗಿ ಜಗಳ ನಡೆಸುತ್ತಿರುವುದು ಎಲ್ಲೆಡೆ ಮಾಮೂಲಿಯಾಗಿ ಕಂಡು ಬಂತು. ದೂರದ ಊರುಗಳಿಂದ ಬಂದ ಮಹಿಳೆಯರು, ಬಸ್‌ನಲ್ಲಿಯೇ ತಮ್ಮ ಒದ್ದೆಬಟ್ಟೆಗಳನ್ನು ಒಣಗಲು ಹಾಕಿದ ದೃಶ್ಯ ಕೆಲವೆಡೆ ಕಂಡುಬಂತು. ಕೆಲವೆಡೆ ಮಹಿಳೆಯರನ್ನು ಮಹಿಳೆಯರೇ ಕಿಟಕಿಯೊಳಗೆ ತಳ್ಳಿ ಬಸ್ ಹತ್ತಿಸಿದ್ದು ಕೂಡ ಕಂಡುಬಂತು.
ಬಡವರಿಗೆ ಕೊಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ: ಸಚಿವ ಚಲುವರಾಯಸ್ವಾಮಿ
ಹೆಚ್ಚುವರಿ ಬಸ್‌ಗಳ ಸಂಚಾರ: ಶಾಲೆ-ಕಾಲೇಜುಗಳಿಗೆ ಭಾನುವಾರ ರಜೆ ಇದ್ದು, ಕೆಎಸ್‌ಆರ್‌ಟಿಸಿಯ ಸ್ಕೂಲ್ ಟ್ರಿಪ್ ಇರದ ಕಾರಣ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಭಾನುವಾರ ಹೆಚ್ಚಿನ ಬಸ್‌ಗಳನ್ನು ಬಿಡಲಾಗಿತ್ತು. ಬೆಂಗಳೂರಿನಿಂದ 70 ವಿಶೇಷ ಬಸ್‌ಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಧರ್ಮಸ್ಥಳಕ್ಕೆ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಕ್ಷೇತ್ರದ ಬಸ್ ನಿಲ್ದಾಣ, ರಥಬೀದಿ, ದೇವಳದ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯ ಮೊದಲಾದ ಕಡೆ ಅಧಿಕ ಸಂಖ್ಯೆಯಲ್ಲಿ ಮಹಿಳಾ ಭಕ್ತರೇ ಕಂಡು ಬಂದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಿಂದ 25 ಜನರ ಮಹಿಳೆಯರ ತಂಡ ಇದೇ ಮೊದಲ ಬಾರಿಗೆ ಧರ್ಮಸ್ಥಳ, ಕುಕ್ಕೆಗೆ ಆಗಮಿಸಿದ್ದು, ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ಹರ್ಷ ವ್ಯಕ್ತಪಡಿಸಿದರು.
ವಿಶ್ವ ಪರಂಪರೆ ತಾಣ ಹಂಪಿಗೆ ವೀಕೆಂಡ್ ಹಿನ್ನೆಲೆಯಲ್ಲಿ 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನದಿ ತೀರದಲ್ಲಿ ಬಂದೋಬಸ್‌್ತ ಕೈಗೊಂಡಿದ್ದರು. ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟ, ಆದಿ ಚುಂಚನಗಿರಿ, ಮೇಲುಕೋಟೆ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನಕ್ಕೆ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿದರು. ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟ, ಮೇಲುಕೋಟೆ, ಆದಿ ಚುಂಚನಗಿರಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿತ್ತು.
ಮಳವಳ್ಳಿ ಬಸ್ ನಿಲ್ದಾಣದಿಂದ ಮಹದೇಶ್ವರ ಬೆಟ್ಟಕ್ಕೆ 30, ಮಂಡ್ಯದಿಂದ ಮಲೆಮಹದೇಶ್ವರ ಬೆಟ್ಟಕ್ಕೆ 20, ಆದಿ ಚುಂಚನಗಿರಿಗೆ 8 ಹಾಗೂ ಮೇಲುಕೋಟೆಗೆ 4 ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿತ್ತು. ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಗುರುಬಸವೇಶ್ವರ ದೇವರ ದರ್ಶನಕ್ಕಾಗಿ ಮಹಿಳೆಯರು ಬೆಳಗಿನಿಂದಲೇ ಆಗಮಿಸಿದ್ದು, ಹರಪನಹಳ್ಳಿಯಿಂದ ಕೊಟ್ಟೂರಿಗೆ ಒಟ್ಟಾರೆ 70ಕ್ಕೂ ಹೆಚ್ಚು ಬಸ್‌ಗಳನ್ನು ಬಿಡಲಾಯಿತು. ವಿಜಯಪುರ ಜಿಲ್ಲೆ ಯಲಗೂರ ಆಂಜನೇಯನ ದರ್ಶನಕ್ಕೆ ಭಾನುವಾರ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಕೇಸರಿಬಾತು, ಅನ್ನಸಾರು ಪ್ರಸಾದ ಸೇವಿಸಿದರು. ಈ ಪೈಕಿ ಶೇ.80ರಷ್ಟುಮಹಿಳಾ ಭಕ್ತರಿದ್ದುದು ಕಂಡುಬಂತು.
ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಈ ಮಧ್ಯೆ, ಹೂವಿನಹಡಗಲಿ ಬಸ್ ನಿಲ್ದಾಣದಿಂದ ಹೊರಟ 12 ಬಸ್ಸುಗಳಿಗೆ ಬಾಗಿಲೇ ಇರಲಿಲ್ಲ. ಆದರೂ, ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಈ ಬಸ್‌ಗಳನ್ನೇ ಬಿಡಲಾಯಿತು. ಇದೇ ವೇಳೆ, ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನ, ದೇವಲ ಗಾಣಗಾಪುರ ದತ್ತಾತ್ರೆಯ ದೇವಸ್ಥಾನ, ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ, ಹರಿಹರ ತಾಲೂಕು ಉಕ್ಕಡಗಾಯತ್ರಿಯ ದರ್ಶನಕ್ಕೆ ಬೆಳಗ್ಗೆಯಿಂದಲೇ ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ