
ಬೆಂಗಳೂರು(ಸೆ. 27): ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ ಸೇರಿದಂತೆ ಒಟ್ಟಾರೆ ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಗಳಿಗೆ ರಾಜ್ಯ ಸರ್ಕಾರವು ಸಂಪೂರ್ಣ ಸಾಥ್ ನೀಡಲಿದ್ದು, ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂತೆ ಸಂಶೋಧನೆಗಳು ನಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಚ್‌ಎಎಲ್ ಕೇಂದ್ರದಲ್ಲಿ ಮಂಗಳವಾರ ನಡೆದ ‘ಏಕೀಕೃತ ಕ್ರಯೋಜೆನಿಕ್ ಎಂಜಿನ್ ಉತ್ಪಾದನೆ ಕೇಂದ್ರ’ (ಐಸಿಎಂಎಫ್) ಉದ್ಘಾಟನೆ ಹಾಗೂ ರಾಷ್ಟ್ರೀಯ ವೈರಾಣು ಸಂಸ್ಥೆಯ ದಕ್ಷಿಣ ವಲಯದ ಎನ್‌ಐವಿ ಪ್ರಯೋಗಾಲಯ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
HAL ನಿಂದ ಒಂದೇ ಸೂರಿನಡಿ ರಾಕೆಟ್ ಎಂಜಿನ್ ಉತ್ಪಾದನೆ
ಬೆಂಗಳೂರು ದೇಶದ ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದ ಹಬ್ ಆಗಿ ಬದಲಾಗಿದೆ. ದೇಶದ ಶೇ.65ರಷ್ಟುಏರೋಸ್ಪೇಸ್ ರಫ್ತು ಹಾಗೂ ಶೇ.60 ರಷ್ಟುರಕ್ಷಣಾ ಸಾಮಗ್ರಿ ಉತ್ಪಾದನೆ ಬೆಂಗಳೂರಿನಲ್ಲೇ ಆಗುತ್ತದೆ. ವಿಜ್ಞಾನ, ಆರೋಗ್ಯ ಹಾಗೂ ಸಂಶೋಧನೆ ಕ್ಷೇತ್ರದಲ್ಲೂ ಕರ್ನಾಟಕವೇ ಮುಂದಿದೆ. ಇದಕ್ಕೆ ಪೂರಕವಾಗಿ ಏರೋಸ್ಪೇಸ್, ಆರ್ ಅಂಡ್ ಡಿ, ರಕ್ಷಣಾ ನೀತಿಗಳನ್ನು ಜಾರಿ ಮಾಡಿದ್ದು, ಸರ್ಕಾರದಿಂದ ಎಲ್ಲಾ ರೀತಿಯ ಸಂಶೋಧನೆಗಳಿಗೂ ಅಗತ್ಯ ಸಹಕಾರ ನೀಡಲಾಗುವುದು. ಇದಕ್ಕಾಗಿಯೇ ನಮ್ಮ ಸರ್ಕಾರದ ಘೋಷವಾಕ್ಯವೂ ‘ನವ ಭಾರತಕ್ಕಾಗಿ ನವ ಕರ್ನಾಟಕ’ ಎಂದೇ ಇದೆ ಎಂದು ಹೇಳಿದರು.
Light Combat Helicopter: ರಾಜಸ್ಥಾನ ಗಡಿಯಲ್ಲಿ ಸ್ವದೇಶಿ ಅಟ್ಯಾಕ್ ಹೆಲಿಕಾಪ್ಟರ್ ನಿಯೋಜಿಸಲಿರುವ ಏರ್‌ಫೋರ್ಸ್!
ನಾವು ಈಗಾಗಲೇ ನೂರಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸಿದ್ದೇವೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಘಟ್ಟಕ್ಕೆ ಬಂದಿದ್ದೇವೆ. ಕಳೆದ 4-5 ದಶಕಗಳಿಂದ ಕ್ರಯೋಜೆನಿಕ್ ಎಂಜಿನ್ ಪ್ರಪಂಚದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಆದರೆ ಕೆಲವೇ ದೇಶಗಳಲ್ಲಿ ಇದರ ಅಭಿವೃದ್ಧಿ ಸಾಧ್ಯವಾಗಿದೆ. ಅದರ ಸಂಶೋಧನೆಯೇ ಒಂದು ಸಾಧನೆ. ಇಸ್ರೋ ಈ ವಿಷಯದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಐಸಿಎಂಎಫ್ ಉದ್ಘಾಟನೆ ಹಾಗೂ ಬೆಂಗಳೂರಿನ ವೈರಾಣು ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರಾದ ಡಾ. ಭಾರತಿ ಪವಾರ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಎಚ್‌ಎಎಲ್ ಅಧ್ಯಕ್ಷ ಅನಂತಕೃಷ್ಣನ್, ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ಹಲವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ