ರಾಜ್ಯದಲ್ಲಿ ಮತ್ತೆ 60 ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ!

By Kannadaprabha NewsFirst Published Nov 21, 2020, 7:32 AM IST
Highlights

ರಾಜ್ಯದಲ್ಲಿ ಮತ್ತೆ 60 ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ| ಬೆಂಗಳೂರಲ್ಲಿ ನಿನ್ನೆ 19, ಚಿತ್ರದುರ್ಗದಲ್ಲಿ 16 ಕೇಸ್‌ ಪತ್ತೆ| ಕಾಲೇಜು ಆರಂಭವಾಗಿ 4 ದಿನದಲ್ಲಿ ಸಂಖ್ಯೆ 123ಕ್ಕೇರಿಕೆ

ಬೆಂಗಳೂರು(ನ.21): ರಾಜ್ಯಾದ್ಯಂತ ಪದವಿ ಮತ್ತು ಸ್ನಾತಕೋತ್ತರ ತರಗತಿಗಳು ಪುನಾರಂಭಗೊಂಡ ಬೆನ್ನಲ್ಲೇ ಕೊರೋನಾ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಶುಕ್ರವಾರವೊಂದೇ ದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 60 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳ ಸಂಖ್ಯೆ ನಾಲ್ಕು ದಿನಗಳಲ್ಲಿ 123ಕ್ಕೇರಿದೆ. ಕಾಲೇಜು ಆರಂಭವಾದಂದಿನಿಂದ ಈವರೆಗೆ ಒಟ್ಟಾರೆ 163 ವಿದ್ಯಾರ್ಥಿಗಳು, ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಾಲೇಜು ಆರಂಭದ 2 ದಿನಕ್ಕೆ 70 ವಿದ್ಯಾರ್ಥಿಗಳಿಗೆ ಸೋಂಕು

ರಾಜ್ಯಾದ್ಯಂತ ಅಂತಿಮ ಪದವಿ, ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಮಂಗಳವಾರದಿಂದಲೇ ಆರಂಭವಾಗಿದೆ. ಸರ್ಕಾರದ ಸೂಚನೆಯಂತೆ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಕಾಲೇಜು ಸಿಬ್ಬಂದಿಗೆ ಕೋವಿಡ್‌ ಟೆಸ್ಟ್‌ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಇದೀಗ ಕೋವಿಡ್‌ ಪರೀಕ್ಷೆಗೊಳಗಾದವರ ವರದಿ ಒಂದೊಂದಾಗಿಯೇ ಬಹಿರಂಗವಾಗುತ್ತಿದ್ದು ಈವರೆಗೆ ಪರೀಕ್ಷೆ ಮಾಡಿಸಿಕೊಂಡ ವಿದ್ಯಾರ್ಥಿಗಳಲ್ಲಿ ಕೋವಿಡ್‌ಗೆ ತುತ್ತಾದವರ ಸಂಖ್ಯೆ ನೂರರ ಗಡಿ ದಾಟಿರುವುದು ಆಘಾತ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟುಹೆಚ್ಚಳವಾಗುವ ಆತಂಕ ಮನೆ ಮಾಡಿದೆ.

ವಿದ್ಯಾರ್ಥಿಗಳು ಬಂದರೂ ಕಲಿಸಲು ಉಪನ್ಯಾಸಕರಿಲ್ಲ..!

ಬೆಂಗಳೂರಲ್ಲಿ ಶುಕ್ರವಾರ 19, ಚಿತ್ರದುರ್ಗದಲ್ಲಿ 16, ಉಡುಪಿಯಲ್ಲಿ 7, ಚಾಮರಾಜನಗರದಲ್ಲಿ 10, ರಾಮನಗರದಲ್ಲಿ 4, ಧಾರವಾಡದಲ್ಲಿ 3, ಕೋಲಾರದಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಬೆಂಗಳೂರಲ್ಲಿ 13, ಬೆಳಗಾವಿಯಲ್ಲಿ 6, ಧಾರವಾಡದಲ್ಲಿ 4 ಮತ್ತು ಗದಗದಲ್ಲಿ ಒಬ್ಬ ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕಾಲೇಜು ಆರಂಭವಾದ ಬಳಿಕ ರಾಜ್ಯದಲ್ಲಿ ಕೋವಿಡ್‌ಗೆ ತುತ್ತಾದ ವಿದ್ಯಾರ್ಥಿಗಳ ಅತೀ ಹೆಚ್ಚಿನ ಪ್ರಕರಣ ಬೆಂಗಳೂರಲ್ಲಿ ಪತ್ತೆಯಾಗಿದ್ದು, ಈವರೆಗೆ ರಾಜಧಾನಿಯಲ್ಲಿ 62 ವಿದ್ಯಾರ್ಥಿಗಳು, 27 ಸಿಬ್ಬಂದಿ ಸೇರಿ ಒಟ್ಟು 89 ಮಂದಿಯಲ್ಲಿ ಸೋಂಕು ಬೆಳಕಿಗೆ ಬಂದಿದೆ. ಇನ್ನು ಚಿತ್ರದುರ್ಗದಲ್ಲಿ 17, ಬಳ್ಳಾರಿಯಲ್ಲಿ 7, ಚಾಮರಾಜನಗರ, ಚಾಮರಾಜನಗರ ತಲಾ 10 ವಿದ್ಯಾರ್ಥಿಗಳು, ಸಿಬ್ಬಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಗುರುವಾರವಷ್ಟೇ ರಾಜ್ಯದಲ್ಲಿ 77ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಲ್ಲಿ ಕೋವಿಡ್‌ ಪತ್ತೆಯಾಗಿತ್ತು.

click me!