* ಬಂಧಿತ ಎಸ್‌ಐ ಟಾಪರ್‌ನಿಂದ ಮಾಹಿತಿ
* ಹಗರಣ ಬಯಲಾದ್ದರಿಂದ ತಂದೆಗೆ ಆಘಾತ
* ಮಾಗಡಿ ತಾಲೂಕಿನ ಅಭ್ಯರ್ಥಿಯ ಕರ್ಮಕಾಂಡ ಬೆಳಕಿಗೆ
ಬೆಂಗಳೂರು(ಮೇ.03): ತಮ್ಮ ಪುತ್ರನನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್(PSI) ಮಾಡಲು ಒಂದೂವರೆ ಎಕರೆ ಅಡಿಕೆ ತೋಟ ಮಾರಿ, ಪರಿಚಯಸ್ಥರಿಂದ ಸಾಲಸೋಲ ಮಾಡಿ ಸುಮಾರು .60 ಲಕ್ಷ ವ್ಯಯಿಸಿದ್ದ ಮಾಗಡಿ(Magadi) ತಾಲೂಕಿನ ಅಭ್ಯರ್ಥಿಯೊಬ್ಬರ ತಂದೆ, ನೇಮಕಾತಿ ಅಕ್ರಮ ಬಯಲಾದ ದಿನ ಆಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಸಂಗತಿ ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ(PSI recruitment Scam) ಪ್ರಕರಣ ಸಂಬಂಧ ಮಾಗಡಿ ತಾಲೂಕಿನ ಅಭ್ಯರ್ಥಿ ಎಚ್.ಯು.ರಘುವೀರ್(HU Raghuveer) ಬಂಧಿತನಾಗಿದ್ದು(Arrest), ಪೊಲೀಸರ(Police) ವಿಚಾರಣೆ ವೇಳೆ ತನ್ನ ಮನೆಯ ಕಷ್ಟವನ್ನು ಆತ ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಹೇಳಿಕೆ ಮೇರೆಗೆ ಆರೋಪಿಯಿಂದ ಹಣ ಪಡೆದವರ ಪತ್ತೆಗೆ ಸಿಐಡಿ ಮುಂದಾಗಿದೆ.
ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ
ಮಾಗಡಿ ತಾಲೂಕಿನ ತಮ್ಮ ಊರಿನ ಸಮೀಪದ ಹ್ಯಾಂಡ್ ಪೋಸ್ಟ್ ಸರ್ಕಲ್‌ನಲ್ಲಿ ದಿನಸಿ ಅಂಗಡಿಯನ್ನು ರಘುವೀರ್ ತಂದೆ ಇಟ್ಟಿದ್ದಾರೆ. ತಮ್ಮ ಒಬ್ಬನೇ ಮಗನನ್ನು ಸರ್ಕಾರಿ ಉದ್ಯೋಗಸ್ಥನಾಗಿಸಲು ಕನಸು ಕಂಡಿದ್ದ ಅವರು, ಪಿಎಸ್‌ಐ ನೇಮಕಾತಿ ಬಗ್ಗೆ ಗೊತ್ತಾದ ಬಳಿಕ ಮಗನನ್ನು ಪಿಎಸ್‌ಐ ಮಾಡಲು ಯತ್ನಿಸಿದರು. ಆಗ ಬೆಂಗಳೂರಿನ ತಮ್ಮ ಸಂಬಂಧಿ ಮೂಲಕ ಪ್ರಭಾವಿ ವ್ಯಕ್ತಿಯೊಬ್ಬರು ರಘುವೀರ್ ತಂದೆಗೆ ಪರಿಚಯವಾಗಿದ್ದಾರೆ. ನಿಮ್ಮ ಮಗನನ್ನು ಪಿಎಸ್‌ಐ ಮಾಡಬೇಕಾದರೆ 50 ರಿಂದ 60 ಲಕ್ಷ ಖರ್ಚಾಗಲಿದೆ ಎಂದಿದ್ದಾರೆ.
ಈ ಮಾತಿಗೆ ಒಪ್ಪಿದ ಅವರು, ಕೊನೆಗೆ ತಮ್ಮೂರಿನಲ್ಲಿದ್ದ ಒಂದೂವರೆ ಎಕರೆ ಅಡಿಕೆ ತೋಟ ಸೇರಿದಂತೆ ಕೃಷಿ ಜಮೀನು(Agricultural Land) ಮಾರಾಟ ಮಾಡಿದ್ದಲ್ಲದೆ ಪರಿಚಯಸ್ಥರಿಂದ ಸಾಲ ಮಾಡಿ ಹಣ ಹೊಂದಿಸಿ ಬೆಂಗಳೂರಿನ ಪ್ರಭಾವಿ ವ್ಯಕ್ತಿಗೆ ಕೊಟ್ಟಿದ್ದರು. ಅಂತೆಯೇ ಪಿಎಸ್‌ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ ರಘುವೀರ್‌ಗೆ 7ನೇ ರಾರಯಂಕ್ ಸಿಕ್ಕಿತು. ಇದರಿಂದ ತಂದೆಯ ಆನಂದಕ್ಕೆ ಪಾರವೇ ಇರಲಿಲ್ಲ. ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಊರಿನಲ್ಲಿ ಪುತ್ರ ಪಿಎಸ್‌ಐ ಆದ ಎಂದು ಹೇಳಿ ಸಂಭ್ರಮ ಪಟ್ಟಿದ್ದರು. ಆದರೆ ಈ ಸಡಗರ ಹೆಚ್ಚು ದಿನ ಉಳಿಯಲಿಲ್ಲ. ಕೆಲ ದಿನಗಳ ಹಿಂದೆ ಪಿಎಸ್‌ಐ ನೇಮಕಾತಿ ಅಕ್ರಮ ಬಯಲಾಗಿದೆ. ಕಲಬುರಗಿಯಲ್ಲಿ(Kalaburagi) ಆರೋಪಿಗಳ ಬಂಧನ ವಿಚಾರ ತಿಳಿದು ಅವರಿಗೆ ಆಘಾತವಾಗಿದೆ. ಬಳಿಕ ಹದಿನೈದು ದಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಬಂದಿದ್ದಾರೆ ಎಂದು ತಿಳಿದು ಬಂದಿದೆ.