Covid Crisis: ಏಪ್ರಿಲ್‌ನಲ್ಲಿ ಕೋವಿಡ್‌ಗೆ 5 ಬಲಿ: ಅತಿ ಕನಿಷ್ಠ

Published : May 03, 2022, 03:25 AM IST
Covid Crisis: ಏಪ್ರಿಲ್‌ನಲ್ಲಿ ಕೋವಿಡ್‌ಗೆ 5 ಬಲಿ: ಅತಿ ಕನಿಷ್ಠ

ಸಾರಾಂಶ

ದುರ್ಬಲವಾದ ಕೊರೋನಾ, ಬಹುತೇಕರಿಗೆ ಲಸಿಕೆ ನೀಡಿಕೆ, ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ, ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಪರಿಣಾಮ ರಾಜ್ಯದಲ್ಲಿ ಈಗ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ.

ರಾಕೇಶ್‌ ಎನ್‌.ಎಸ್‌.

ಬೆಂಗಳೂರು (ಮೇ.03): ದುರ್ಬಲವಾದ ಕೊರೋನಾ (Coronavirus), ಬಹುತೇಕರಿಗೆ ಲಸಿಕೆ (Vaccine) ನೀಡಿಕೆ, ಆಸ್ಪತ್ರೆಗಳಲ್ಲಿ (Hospitals) ಉತ್ತಮ ಸೌಲಭ್ಯ, ಆರೋಗ್ಯದ (Health) ಬಗ್ಗೆ ಜನರಲ್ಲಿ ಕಾಳಜಿ ಪರಿಣಾಮ ರಾಜ್ಯದಲ್ಲಿ (Karnataka) ಈಗ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಏಪ್ರಿಲ್‌ ತಿಂಗಳಲ್ಲಿ ಅತ್ಯಂತ ಕನಿಷ್ಠ 5 ಜನರು ಮೃತರಾಗಿದ್ದಾರೆ. ಇದು 2020ರ ಮಾರ್ಚ್ ಬಳಿಕ ತಿಂಗಳೊಂದರಲ್ಲಿ ದಾಖಲಾದ ಕನಿಷ್ಠ ಸಂಖ್ಯೆಯ ಸಾವು (Death) ಆಗಿದೆ. 

ಏಪ್ರಿಲ್‌ 4 ಮತ್ತು 6ರಂದು ಬೆಂಗಳೂರು ನಗರದಲ್ಲಿ ತಲಾ ಒಬ್ಬರು, ಏ.8ರಂದು ಗದಗದಲ್ಲಿ ಒಬ್ಬರು ಮತ್ತು ಏ.30ರಂದು ಬೆಳಗಾವಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಮೊದಲ ಬಾರಿಗೆ ಕಾಣಿಸಿಕೊಂಡ 2020ರ ಮಾರ್ಚ್‌ನಲ್ಲಿ ಮೂವರು ಮೃತರಾಗಿದ್ದರು. ನಂತರದ ಏಪ್ರಿಲ್‌ನಲ್ಲಿ 21 ಜನರು ಮೇ ತಿಂಗಳಲ್ಲಿ 22 ಸಾವು ಸಂಭವಿಸಿತ್ತು. ನಂತರದ ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಜನರು ಕೋರೊನಾಗೆ ಬಲಿಯಾಗುತ್ತಿದ್ದರು. ಸೋಂಕು ಪ್ರಕರಣ ಏರಿಕೆಯೊಂದಿಗೆ ಸಾವಿನ ಸಂಖ್ಯೆ ಹೆಚ್ಚಳ ಕಂಡು ಬಂದಿತ್ತು. 

Covid Crisis: ಕೋವಿಡ್‌ ನಿಯಂತ್ರಣಕ್ಕಾಗಿ ಧಾರವಾಡದಲ್ಲಿ ಜೈವಿಕ ಲ್ಯಾಬ್‌: ಪ್ರಹ್ಲಾದ್‌ ಜೋಶಿ

ಅದರಲ್ಲೂ ಎರಡನೇ ಅಲೆ ತೀವ್ರವಾಗಿದ್ದ 2021ರ ಮೇ ತಿಂಗಳಿನಲ್ಲಿ ಬರೋಬ್ಬರಿ 15,523 ಮಂದಿ ಮೃತಪಟ್ಟಿದ್ದರು. 2022ರ ಜನವರಿಯಲ್ಲಿ ಆರಂಭವಾದ ಮೂರನೇ ಅಲೆ ವೇಳೆ ಸೋಂಕಿನ ಪ್ರಕರಣ ವೇಗವಾಗಿ ಏರಿಕೆ ಆಗಿದ್ದರೂ ಹೆಚ್ಚಿನ ಸಾವು ಸಂಭವಿಸಿರಲಿಲ್ಲ. ಮೂರನೇ ಅಲೆಗೆ ಕಾರಣವಾಗಿದ್ದ ಕೊರೋನಾದ ರೂಪಾಂತರಿ ತಳಿ ‘ಓಮಿಕ್ರೊನ್‌’ ವೇಗವಾಗಿ ಹಬ್ಬಿದ್ದರೂ ಶ್ವಾಸಕೋಶಕ್ಕೆ ಹಾನಿ ಮಾಡುವ ಕ್ಷಮತೆ ಇರಲಿಲ್ಲ, ಹೀಗಾಗಿ ಸಾವಿನ ಸಂಖ್ಯೆ ಕಡಿಮೆ ಆಗಿದೆ. ಜತೆಗೆ ಕೋವಿಡ್‌ಗೆ ಸುಲಭ ತುತ್ತಾಗಿದ್ದ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದರಿಂದ ಮೂರನೇ ಅಲೆ ಅಷ್ಟೊಂದು ಮಾರಣಾಂತಿಕವಾಗಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ.

ಮೂರನೇ ಅಲೆ ಉತ್ತುಂಗದಲ್ಲಿದ್ದ ಫೆ. 2 ರಂದು 81 ಮಂದಿ ಮೃತರಾಗಿದ್ದು ಒಂದು ದಿನದ ಗರಿಷ್ಠ ಸಾವು. ಜತೆಗೆ ಇದೇ ತಿಂಗಳಲ್ಲಿ ಫೆಬ್ರವರಿ ತಿಂಗಳಲ್ಲಿ 952 ಜನರು ಸಾವಿಗೀಡಾಗಿರುವುದು ಸಹ ಮೂರನೇ ಅಲೆಯ ಗರಿಷ್ಠ ಸಾವಿನ ಪ್ರಕರಣವಾಗಿದೆ. ಈ ವರ್ಷದ ಏಪ್ರಿಲ್‌ 30ರವರೆಗೆ ರಾಜ್ಯದಲ್ಲಿ ಒಟ್ಟಾರೆ 40,059 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 16,962 ಮಂದಿ ಮೃತಪಟ್ಟಿದ್ದಾರೆ. ಸದ್ಯ ದೈನಂದಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕಡಿಮೆಯೇ ಇದೆ. 11 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು ಈ ಪೈಕಿ ಒಬ್ಬರು ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗ, ಇಬ್ಬರು ತೀವ್ರ ನಿಗಾ ವಿಭಾಗ, ಮೂವರು ಆಮ್ಲಜನಕ ಯುಕ್ತ ಹಾಸಿಗೆ ಮತ್ತು ಐವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Covid Crisis: ಇನ್ಮುಂದೆ ಮಾಸ್ಕ್‌ ಧರಿಸದಿದ್ರೆ 250 ದಂಡ..!

ಮೇ ತಿಂಗಳಲ್ಲಿ 15,523 ಜನರು ಬಲಿ: ಕಳೆದ ವರ್ಷದ ಮೇ ತಿಂಗಳಲ್ಲಿ ಅತ್ಯಧಿಕ 15,523 ಸಾವು ದಾಖಲಾಗಿತ್ತು. ಸರಾಸರಿ 500ಕ್ಕೂ ಹೆಚ್ಚು ಮಂದಿ ಮರಣವನ್ನಪ್ಪಿದ್ದರು. ರಾಜ್ಯದಲ್ಲಿ ಈವರೆಗೆ 40,059 ಕೋವಿಡ್‌ ಸಾವು ಸಂಭವಿಸಿದ್ದು ಇದರಲ್ಲಿನ ಶೇ.40 ರಷ್ಟು ಸಾವು ಇದೊಂದೇ ತಿಂಗಳಲ್ಲಿ ಘಟಿಸಿತ್ತು. ಮೇ 23ಕ್ಕೆ ಒಂದು ದಿನದ ಸಾರ್ವಕಾಲಿಕ ಗರಿಷ್ಠ 626 ಸಾವು ವರದಿಯಾಗಿತ್ತು. ಹಾಗೆಯೇ ದಾಖಲೆಯ 10.81 ಲಕ್ಷ ಪ್ರಕರಣಗಳು ವರದಿಯಾಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ