
ಬೆಂಗಳೂರು (ಮೇ.03): ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ನನ್ನ ಏಳಿಗೆ ಸಹಿಸಲು ಆಗುತ್ತಿಲ್ಲ. ಅಶ್ವತ್ಥನಾರಾಯಣ ಮುಖ್ಯಮಂತ್ರಿಯಾಗಿ ಬಿಡುತ್ತಾನೆ ಎನ್ನುವ ಭಯ ಇದೆ. ಹೀಗಾಗಿಯೇ ಅವರು ಹಲವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಕಟ್ಟು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr CN Ashwath Narayan) ವಾಗ್ದಾಳಿ ನಡೆಸಿದ್ದಾರೆ. ನನ್ನ ಸಾಧನೆಗಳನ್ನು ಸಹಿಸಿಕೊಳ್ಳಲು ವಿರೋಧಿಗಳಿಗೆ ಆಗುತ್ತಿಲ್ಲ. ಹೀಗಾಗಿ ಮಸಿ ಮೆತ್ತುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ (PSI Scam) ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಮಾಡಿದ ಆರೋಪಕ್ಕೆ ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಅವರು, ನಾನು ಜನಸೇವಕನಾಗಲು ರಾಜಕಾರಣಕ್ಕೆ ಬಂದವನು. ನನ್ನ ಜೀವನ ಅತ್ಯಂತ ಪಾರದರ್ಶಕವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವುದನ್ನು ನೋಡಿಕೊಂಡೇ ವಿರೋಧಿಗಳು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ. ಸತೀಶ್ ನನ್ನ ಅಣ್ಣ ಎನ್ನುವುದು ನಿಜ. ಆದರೆ, ಈ ದರ್ಶನ ಗೌಡ ಯಾರೆನ್ನುವುದೂ ನನಗೆ ಗೊತ್ತಿಲ್ಲ. ನಾನು ಅವನನ್ನು ನೋಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
PSI Recruitment Scam: ಧೈರ್ಯವಿದ್ರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಲಿ: ಜಗದೀಶ್ ಶೆಟ್ಟರ್
ನಮ್ಮ ಬಗ್ಗೆ ಅವರಿಗೆ ಭಯ ಇರಲಿ: ತನಿಖೆಯ ವರದಿ ಬರಲಿ. ಉಪ್ಪು ತಿಂದವನು ನೀರು ಕುಡಿದೇ ಕುಡೀತಾನೆ. ಒಂದು ಹೇಳಿಕೆ ನೀಡಲು ಧೈರ್ಯ, ಸ್ಥೈರ್ಯ ಬೇಕು. ಅವರ ನಿರಾಧಾರ ಹೇಳಿಕೆಗೆ ನನ್ನ ಪ್ರತಿಕ್ರಿಯೆ ಕೇಳಿದ್ದೇ ತಪ್ಪು. ಶಿವಕುಮಾರ್ ಬಾಯಲ್ಲಿ ಹೇಳಿಕೆ ಬರುತ್ತದೆ ಎಂದರೆ ಅದರಲ್ಲಿ ದುರುದ್ದೇಶ ಇದೆ ಎಂದರ್ಥ. ಅಶ್ವತ್ಥನಾರಾಯಣ ಮುಖ್ಯಮಂತ್ರಿಯಾಗಿ ಬಿಡುತ್ತಾನೆ ಎನ್ನುವ ಭಯ ಇದೆ. ನಮ್ಮ ನಾಯಕತ್ವ ಗುಣದ ಭಯ ಅವರಿಗೆ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೆಸಬೇಕು ಎಂದು ಹೇಳುವವನು ನಾನು.
ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿರುವವರನ್ನು ಕೂಡ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಈಗಾಗಲೇ ವಿಚಾರಣೆ ಆರಂಭವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಮೊದಲು ಡಿಕೆಶಿ ವಿರುದ್ಧ ವಿ.ಎಸ್.ಉಗ್ರಪ್ಪ ಆರೋಪ ಮಾಡಿದ್ದರು. ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಡಿಕೆಶಿ ಕಡುಭ್ರಷ್ಟ ಎಂದು ಹೇಳಿದ್ದರು. ಇಂತಹ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡಿರುವುದು ಎಷ್ಟು ಸರಿ. ಇಂತಹ ನೂರು ಆರೋಪ ಮಾಡಿದರೂ ಏನೇನೂ ಆಗುವುದಿಲ್ಲ. ನೂರು ಜನ್ಮವೆತ್ತಿ ಬಂದರೂ ನನ್ನ ಹೆಸರಿಗೆ ಮಸಿ ಬಳಿಯಲಾಗಲ್ಲ. ಉಗ್ರಪ್ಪ, ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಡಿಕೆಶಿ ಬಂಡವಾಳ ಬಿಚ್ಚಿಡುತ್ತೇನೆ: ಡಿ.ಕೆ.ಶಿವಕುಮಾರ್ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಅವರ ಬಂಡವಾಳ ಬಿಚ್ಚಿಡುತ್ತೇನೆ. ಇವತ್ತಿನಿಂದಲೇ ಬಂಡವಾಳ ಬಿಚ್ಚಿಡುತ್ತೇನೆ. ಶಿವಕುಮಾರ್ ಕೊಳಕಿನ ಜಾಲ ಬಹಿರಂಗ ಮಾಡುತ್ತೇನೆ ಎಂದು ಇದೇ ವೇಳೆ ಸಚಿವರು ಗುಡುಗಿದರು.
PSI Recruitment Scam: ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ, ಕಾಂಗ್ರೆಸ್ ಆರೋಪ!
ಎಂತಹ ಸ್ಥಿತಿಯಲ್ಲಿಯೂ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಸಂಸ್ಕೃತಿ ನಮಗೆ ಗೊತ್ತಿಲ್ಲ. ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ, ಅಧಿಕಾರ ದುರ್ಬಳಕೆ ಪದ್ಧತಿ ಇಲ್ಲ. ನಮ್ಮದು ಡಿ.ಕೆ.ಶಿವಕುಮಾರ್ ಕುಟುಂಬ ಅಲ್ಲ. ಇಂದಿನಿಂದಲೇ ಅವರ ಬಂಡವಾಳ ಬಿಚ್ಚಿಡುತ್ತೇನೆ. ಶಿವಕುಮಾರ್ ಕೊಳಕಿನ ಜಾಲ ಬಹಿರಂಗ ಮಾಡುತ್ತೇನೆ
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ