
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಜೂ.28): ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದ 6 ಲಕ್ಷಕ್ಕೂ ಅಧಿಕ ರೈತರು ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’ಯ 23ನೇ ಕಂತಿನಿಂದ ವಂಚಿತರಾಗಿದ್ದಾರೆ.
ಭೂಮಿ ಹೊಂದಿರುವ ಎಲ್ಲ ರೈತರಿಗೂ 4 ತಿಂಗಳಿಗೊಮ್ಮೆ 2 ಸಾವಿರ ರುಪಾಯಿಯಂತೆ ವರ್ಷಕ್ಕೆ ₹6 ಸಾವಿರ ನೀಡುವ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಈಗಾಗಲೇ 22 ಕಂತುಗಳು ಬಿಡುಗಡೆಯಾಗಿದ್ದು, ಜೂ.20 ರಂದು 23ನೇ ಕಂತಿನ ಹಣ ಸಹ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಜಮೆಯಾಗಿದೆ.
ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ 46,69,841 ರೈತರು ಅರ್ಹರಾಗಿದ್ದು, ಇದರಲ್ಲಿ ಬರೋಬ್ಬರಿ 3,80,428 ರೈತರು ಇ-ಕೆವೈಸಿ ಮಾಡಿಸದೇ ಇರುವುದರಿಂದ ಆರ್ಥಿಕ ನೆರವಿನಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ, 2,27,384 ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದೇ ಇರುವುದರಿಂದ ಯೋಜನೆಯಿಂದ ಹೊರಗೆ ಉಳಿಯುವಂತಾಗಿದೆ.
ರಾಜ್ಯದಲ್ಲಿ ಕೃಷಿ ಇಲಾಖೆಯು ಕಿಸಾನ್ ಸಮ್ಮಾನ್ ಯೋಜನೆಯ ನೋಡೆಲ್ ಏಜೆನ್ಸಿಯಾಗಿದ್ದು, ಅಧಿಕಾರಿಗಳ ಮೂಲಕ ರೈತರಿಗೆ ಮಾಹಿತಿ ನೀಡಿ ಹಣ ಬರುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ಹೊಂದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಎಂದರೆ ಬೆಳಗಾವಿ ಜಿಲ್ಲೆಯಲ್ಲಿ 41,459 ರೈತರಿಗೆ ಹಣ ಪಾವತಿಯಾಗಿಲ್ಲ. ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು 41,082 ರೈತರು ಹಣದಿಂದ ವಂಚಿತರಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ 29,910 ಅನ್ನದಾತರಿಗೆ ಹಣ ಸಂದಾಯವಾಗಿಲ್ಲ.
ಮೂರು ವಿಧಾನಗಳ ಮೂಲಕ ಇ-ಕೆವೈಸಿ ಮಾಡಿಸಬಹುದು. ಪಿಎಂ ಕಿಸಾನ್ ಪೋರ್ಟಲ್(https://pmkisan.gov.in/) ಮತ್ತು ಮೊಬೈಲ್ ಅಪ್ಲಿಕೇಷನ್‌ನಲ್ಲಿ ಆಧಾರ್ ಲಿಂಕ್ ಮಾಡಿದ ಸಕ್ರಿಯ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಆಧಾರಿತವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ನಾಗರಿಕ ಸೇವಾ ಕೇಂದ್ರಗಳು ಮತ್ತು ರಾಜ್ಯ ಸೇವಾ ಕೇಂದ್ರ(ಎಸ್‌ಎಸ್‌ಕೆ)ಕ್ಕೆ ಆಧಾರ್ ಕಾರ್ಡ್ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ತೆಗೆದುಕೊಂಡು ಹೋಗಿ ಬಯೋಮೆಟ್ರಿಕ್ ನೀಡಿ ಸಹ ಇ-ಕೆವೈಸಿ ಮಾಡಿಸಬಹುದು. ಇದಲ್ಲದೆ, ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಮುಖಚರ್ಯೆ ಆಧಾರಿತ(ಫೇಸ್ ರೆಕಗ್ನೇಷನ್) ಇ-ಕೆವೈಸಿ ಪೂರ್ಣಗೊಳಿಸಬಹುದು. 24 ಗಂಟೆ ಬಳಿಕ ಇ-ಕೆವೈಸಿಯು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಆಗಲಿದ್ದು, ನಂತರ ಪರಿಶೀಲಿಸಬಹುದು.
ಪ್ರಮುಖ 10 ಜಿಲ್ಲೆಯ ಪಿಎಂ ಕಿಸಾನ್ ಫಲಾನುಭವಿಗಳ ಮಾಹಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ