
ಮಂಜುನಾಥ ನಾಗಲೀಕರ್
ಬೆಂಗಳೂರು(ಫೆ.11): ಶತ್ರು ರಾಷ್ಟ್ರಗಳ ರೇಡಾರ್ ಕಣ್ತಪ್ಪಿಸಿ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನ 'ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್' (ಎಎಂಸಿಎ) ದೇಶಿಯವಾಗಿ ಅಭಿವೃದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವಿಮಾನಗಳು ಬೆಂಗಳೂರಿನ ಮಂಡೂರು ಬಳಿಯ ರಕ್ಷಣಾ ಪಡೆಯ 20 ಎಕರೆ ಜಾಗದಲ್ಲಿ ಸ್ಥಾಪಿಸಲಾಗುವ ಹೊಸ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿರುವುದು ವಿಶೇಷ.
ದೇಶದ ರಕ್ಷಣಾ ಮತ್ತು ಸಂಶೋಧನೆ ಇಲಾಖೆಯಡಿ ಬರುವ 'ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ'ಯು (ಎಡಿಎ) ಈ ವಿಮಾನದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ವಿಮಾನದ ನೈಜ ಮಾದರಿಯನ್ನು ಮೊದಲ ಬಾರಿ 'ಏರೋ ಇಂಡಿಯಾ-2025'ರ ಭಾರತ ಪೆವಿಲಿಯನ್ ನಲ್ಲಿ ಅನಾವರಣಗೊಳಿಸಲಾಗಿದೆ. ಸದ್ಯ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ 5ನೇ ತಲೆಮಾರಿನ ಫೈಟರ್‌ಜೆಟ್ ಹೊಂದಿವೆ. ಇಂತಹ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಲು ಭಾರತ ದಾಪುಗಾಲು ಇಟ್ಟಿದೆ. ಈ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಜೊತೆಗೆ ವಾಯು ಪಡೆಯ ಅಗತ್ಯ ನೀಗಿಸಲು ಈ ಯೋಜನೆ ಮಹತ್ವದ್ದಾಗಿದೆ.
ಬೆಂಗ್ಳೂರಲ್ಲಿ ವಿಮಾನ ಹಾರಾಟ, ಜನರ ಪರದಾಟ!
2028ರ ವೇಳೆಗೆ ಮೊದಲ ವಿಮಾನ:
'ಲಘು ಯುದ್ಧ ವಿಮಾನ ತೇಜಸ್ ಅನ್ನು ನಿರ್ಮಾಣ ಮಾಡಲು ನಮಗೆ 2 ದಶಕಗಳಿಗೂ ಹೆಚ್ಚು ಕಾಲ ಬೇಕಾಯಿತು. ತೇಜಸ್ ಈಗಾಗಲೇ ಸೇನೆಗೆ ಸೇರ್ಪಡೆಗೊಂಡಿದೆ. ತೇಜಸ್ ನಿರ್ಮಾಣ ವೇಳೆಗಿನ ಸಂಶೋಧನೆಗಳು, ಅನುಭವದ ಆಧಾರದ ಮೇರೆಗೆ ಈಗ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನದ ಸುಧಾರಣೆ ಮತ್ತು ಬದಲಾವಣೆ ಮೂಲಕ ವೇಗವಾಗಿ ಎಎಂಸಿಎಯನ್ನು ಅಭಿವೃದ್ಧಿಪಡಿಸಬಹುದು. 2028ರಲ್ಲಿ ಪ್ರೊಟೋ ಟೈಪ್ ನಿರ್ಮಿಸಿ ಹಾರಾಟ ನಡೆಸಿ 2034ರ ವೇಳೆಗೆ ಭಾರತೀಯ ವಾಯುಸೇನೆಗೆ 18 ವಿಮಾನಗಳ ಒಂದು ಸ್‌ಕ್ವಾಡ್ರನ್ ಅನ್ನು ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಆರಂಭಿಕ ಅಂದಾಜು ವೆಚ್ಚ 15 ಸಾವಿರ ಕೋಟಿ ರು. ಆಗಿದೆ' ಎಂದು ಎಡಿಎ ಅಧಿಕಾರಿಯೊಬ್ಬರು ತಿಳಿಸಿದರು.
Aero India 2025: ಬೆಂಗ್ಳೂರಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋ ಆರಂಭ
ಭಾರತದಲ್ಲೇ ಉತ್ಪಾದನೆ ಮಾಡುವುದರಿಂದ ವೆಚ್ಚ ಉಳಿತಾಯ, ಉದ್ಯೋಗ ಸೃಷ್ಟಿ, ರಕ್ಷಣಾ ಕ್ಷೇತ್ರದ ಉದ್ಯಮಗಳ ಬೆಳವಣಿಗೆಯಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ರಫ್ತು ಸಾಧ್ಯವಾದರೆ ಭಾರತಕ್ಕೆ ಅಪಾರ ಆದಾಯ ಬರಲಿದೆ ಎಂದು ಅಧಿಕಾರಿ ಹೇಳಿದರು.
ಎಎಂಸಿಎ ಯುದ್ಧ ವಿಮಾನದ ವೈಶಿಷ್ಟ್ಯಗಳು
* ಈ ವಿಮಾನ 2 ಎಂಜಿನ್, ಒಬ್ಬ ಪೈಲಟ್ ಹಾರಾಟ ನಡೆಸಬಹುದು.
* ಈ ಅತ್ಯಾಧುನಿಕ ವಿಮಾನದ ತೂಕ 25 ಟನ್ ಆಗಿದೆ. ಅಂದರೆ ತೂಕ ಕಡಿಮೆ ಇದೆ
* ಗಂಟೆಗೆ 2,500 ಕಿ.ಮೀ ವೇಗದಲ್ಲಿ ಈ ಯುದ್ಧ ವಿಮಾನ ಸಂಚರಿಸಲಿದೆ.
* 1,600 8.2 2 5,300 ಕಿ.ಮೀ ದೂರದವರೆಗೆ ಹಾರಾಟ ನಡೆಸಬಲ್ಲುದು.
* ಕ್ಷಿಪಣಿ, ಬಾಂಬ್, ರಾಕೆಟ್‌ಗಳನ್ನು ಬಚ್ಚಿಟ್ಟುಕೊಂಡು ಹಾರಾಟ ನಡೆಸುವ ವ್ಯವಸ್ಥೆ ಇದೆ.
* ಕಂಪ್ಯೂಟರ್ ಮೂಲಕ ವಿಮಾನದ ಸಂಪೂರ್ಣ ವ್ಯವಸ್ಥೆಯ ಮಾನಿಟರಿಂಗ್ ಸಾಧ್ಯವಿದೆ
* ಶತ್ರುರಾಷ್ಟ್ರಗಳ ರೇಡಾರ್ ಕಣ್ಣಪ್ಪಿಸುವ ಅತ್ಯಾಧುನಿಕ ತಂತ್ರಜ್ಞಾನಗಳು ಇದರಲ್ಲಿವೆ.
* ಕೃತಕ ಬುದ್ಧಿಮತ್ತೆ(ಎಐ) ಆಧರಿತ ಎಲೆಕ್ಟ್ರಾನಿಕ್ ಪೈಲಟ್ ಸಿಸ್ಟಂ ಅಳವಡಿಸಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ