ಶಿಕ್ಷಕಿ ವಿರುದ್ಧ ಪೋಕ್ಸೋ ಪ್ರಕರಣ: ವಿದ್ಯಾರ್ಥಿ ಜತೆ ಟೀಚರ್‌ ಚೆಲ್ಲಾಟಕ್ಕೆ ಹೈಕೋರ್ಟ್‌ ಕಿಡಿ

By Kannadaprabha NewsFirst Published Jul 30, 2024, 8:51 AM IST
Highlights

ಶಿಕ್ಷಕಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಮೌಖಿಕವಾಗಿ ನಿರಾಕರಿಸಿರುವ ಹೈಕೋರ್ಟ್‌, ಆರೋಪಗಳನ್ನು ಕೈಬಿಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಿಕ್ಷಕಿಗೆ ಸಲಹೆ ನೀಡಿದೆ.

ಬೆಂಗಳೂರು(ಜು.30):  ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಜೊತೆ ಅಸಹಜ ರೀತಿಯಲ್ಲಿ ಪೋಟೋ-ವಿಡಿಯೋ ತೆಗೆಸಿಕೊಂಡ ಮುಖ್ಯ ಶಿಕ್ಷಕಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ಶಿಕ್ಷಕಿಗೆ ಇಂತಹ ಕೆಲಸ ಅನಪೇಕ್ಷಿತ. ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎನ್ನಬಹುದೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.

ಶಿಕ್ಷಕಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಮೌಖಿಕವಾಗಿ ನಿರಾಕರಿಸಿರುವ ಹೈಕೋರ್ಟ್‌, ಆರೋಪಗಳನ್ನು ಕೈಬಿಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಿಕ್ಷಕಿಗೆ ಸಲಹೆ ನೀಡಿದೆ.

Latest Videos

ನಂದಿನಿ ಹಾಲಿನ ದರ ಏರಿಕೆಗೆ ಹೈಕೋರ್ಟ್‌ ಅಸ್ತು: ತಜ್ಞರ ಅನಿಸಿಕೆ, ನಿರ್ದಿಷ್ಟ ನೀತಿಯಂತೆ ಏರಿಕೆ

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಮುಖ್ಯ ಶಿಕ್ಷಕಿ ಪುಷ್ಪಲತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶೈಕ್ಷಣಿಕ ಪ್ರವಾಸದ ವೇಳೆ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಜತೆ ಕೆಲ ಪೋಟೋ ತೆಗೆದುಕೊಂಡ ಕಾರಣ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪ್ರಕರಣದ ದಾಖಲೆಗಳನ್ನು ಓದಿದ್ದೇನೆ. ಶಿಕ್ಷಕಿ ಏಕೆ ಹಾಗೆ ಮಾಡಿದ್ದಾರೆ? ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಡ್ಯೂಯೆಟ್‌ ಹಾಡುತ್ತಿದ್ದರೆ, ಇದು ಶಿಕ್ಷಕಿ ಮಾಡುವ ಕೆಲಸವೇ ಎಂದು ಖಾರವಾಗಿ ಪ್ರಶ್ನಿಸಿದರು.

ಅರ್ಜಿದಾರರ ಪರ ವಕೀಲರು, ಪೋಟೋಗಳು ಅಸಹಜವಾಗಿಯೇ ಇವೆ. ಆದರೆ, ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ತಾಯಿ-ಮಗನ ಸಂಬಂಧವಿದೆ. ವಿದ್ಯಾರ್ಥಿಗೆ ಅರ್ಜಿದಾರರು ಕೇರ್ ಟೇಕಿಂಗ್‌ ಶಿಕ್ಷಕಿಯಾಗಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಕ್ಕೆ ನ್ಯಾಯಮೂರ್ತಿಗಳು ಅವು ಕೇರ್‌ ಟೇಕಿಂಗ್‌ ಚಿತ್ರಗಳೇ ಎಂದು ಮರು ಪ್ರಶ್ನಿಸಿದರು.

ಮುಂದುವರೆದ ಅರ್ಜಿದಾರರು ಪರ ವಕೀಲರು, ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ಯಾವುದೇ ಲೈಂಗಿಕ ಉದ್ದೇಶವಿರಲಿಲ್ಲ. ಅರ್ಜಿದಾರರ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್‌ 8 ಮತ್ತು 12 ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್‌ ತೀರ್ಪು ಪ್ರಕಾರ ಸೆಕ್ಷನ್‌ 8 ಮತ್ತು 12 ಅಡಿಯ ಅಪರಾಧ ಅನ್ವಯವಾಗಬೇಕಾದರೆ ಲೈಂಗಿಕ ಉದ್ದೇಶವಿರಬೇಕಾಗುತ್ತದೆ. ಇಡೀ ದೋಷಾರೋಪ ಪಟ್ಟಿಯಲ್ಲಿ ಎಲ್ಲಿಯೂ ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ಲೈಂಗಿಕ ಉದ್ದೇಶವಿತ್ತು ಎಂದು ಉಲ್ಲೇಖಿಸಿಲ್ಲ. ಪ್ರಕರಣದ 7ನೇ ಸಾಕ್ಷಿ ಸಹ ಅರ್ಜಿದಾರೆ ಮತ್ತು ವಿದ್ಯಾರ್ಥಿ ನಡುವೆ ಲೈಂಗಿಕ ಉದ್ದೇಶವಿರಲಿಲ್ಲ ಎಂದು ಸಾಕ್ಷ್ಯ ನುಡಿದಿರುವುದಾಗಿ ತಿಳಿಸಿದರು.

ಆ ವಾದ ಒಪ್ಪದ ನ್ಯಾಯಮೂರ್ತಿಗಳು, ಹಾಗಾದರೆ ಕ್ಯಾಶುವಲ್‌ ಉದ್ದೇಶವಿತ್ತೇ ಎಂದು ಪ್ರಶ್ನಿಸಿ ಪೋಟೋಗಳನ್ನು ನೋಡಿ, ಮತ್ತೆ ತಾಯಿ ಮತ್ತು ಮಗನ ಸಂಬಂಧ ಎಂದು ಹೇಳಬೇಡಿ. ವಿದ್ಯಾರ್ಥಿಯೊಂದಿಗೆ ಸೆಲ್ಫಿ-ವಿಡಿಯೋ ಅರ್ಜಿದಾರೆಗೆ ಏಕೆ ಬೇಕಿತ್ತು? ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದೇನಿತ್ತು? ಪೋನ್‌ನಲ್ಲಿ ಯಾಕೆ ವಿಡಿಯೋ-ಫೋಟೋಗಳನ್ನು ಇಟ್ಟುಕೊಂಡಿದ್ದರು ಎಂದು ಪ್ರಶ್ನೆಗಳ ಸುರಿಮಳೆಗೈದರು.

ಸಂತ್ರಸ್ತೆಗೆ ಅರ್ಧ ಎಕರೆ ಕೊಟ್ಟ ಅತ್ಯಾಚಾರಿ, ಪುತ್ರನಿಗೆ 6.5 ಲಕ್ಷ ರು. ಪರಿಹಾರ, ಶಿಕ್ಷೆ ಇಳಿಸಿದ ಹೈಕೋರ್ಟ್

ಅರ್ಜಿದಾರರ ಪರ ವಕೀಲರು, ಶಿಕ್ಷಕಿ ಅಪ್‌ಲೋಡ್‌ ಮಾಡಿಲ್ಲ. ಕೆಲ ಸಾಕ್ಷಿಗಳು ಅಪ್‌ಲೋಡ್‌ ಮಾಡಿದ್ದಾರೆ. ಅರ್ಜಿದಾರರ ನಡೆ ವಿಪರೀತವಾಗಿದೆ ಎನ್ನುವುದು ಒಪ್ಪುತ್ತೇನೆ. ಆದರೆ, ನಿಜವಾಗಿಯೂ ಅವರ ಮಧ್ಯೆ ಲೈಂಗಿಕ ಉದ್ದೇಶವಿರಲಿಲ್ಲ. ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ವಿಪರೀತ ಉತ್ಸಾಹದಿಂದ ಘಟನೆ ನಡೆದಿದೆ ಎಂದರು.

ಅದರಿಂದ ಮತ್ತೆ ಬೇಸರಗೊಂಡ ನ್ಯಾಯಮೂರ್ತಿಗಳು, ಏನದು ವಿದ್ಯಾರ್ಥಿ ಜೊತೆಗೆ ವಿಪರೀತ ಉತ್ಸಾಹ? ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎಂದು ಕರೆಯಲಾಗುತ್ತದೆಯೇ? ಶಿಕ್ಷಕಿಯಾದವರು ಮಾಡಲೇಬಾರದ ಕೆಲಸವಿದು. ಆರೋಪಗಳನ್ನು ಕೈಬಿಡಲು ವಿಚಾರಣಾ ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಿ ಎಂದು ಸೂಚಿಸಿದರು. ಅರ್ಜಿದಾರರ ಪರ ವಕೀಲರು, ಆ ಬಗ್ಗೆ ಅರ್ಜಿದಾರರಿಂದ ಅಭಿಪ್ರಾಯ ಪಡೆದು ತಿಳಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಮೂರ್ತಿಗಳು, ಆ.2ಕ್ಕೆ ವಿಚಾರಣೆ ಮುಂದೂಡಿದರು.

click me!