ರಾಜ್ಯಕ್ಕೆ 5612 ಕಿಮೀ ‘ಗ್ರಾಮ ಸಡಕ್‌’ ರಸ್ತೆ

By Kannadaprabha NewsFirst Published Oct 14, 2020, 11:09 AM IST
Highlights

ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರ ಮಾಡಲಾಗುತ್ತದೆ. ಸಾವಿರಾರು ಕಿ ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ

ಬೆಂಗಳೂರು (ಅ.14):  ಗ್ರಾಮೀಣ ಭಾಗದ ಮುಖ್ಯ ರಸ್ತೆ ಮತ್ತು ಪ್ರಮುಖ ಕೂಡು ರಸ್ತೆಗಳ ಬಲವರ್ಧನೆ ಹಾಗೂ ನವೀಕರಣಕ್ಕಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಟ್ಟು 5612.50 ಕಿ.ಮೀ. ರಸ್ತೆ ಹಂಚಿಕೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಹಂಚಿಕೆ ಮಾಡಿರುವ 5612.50 ಕಿ.ಮೀ.ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಶೇ.60ರಷ್ಟುಮತ್ತು ರಾಜ್ಯ ಸರ್ಕಾರವು ಶೇ.40ರಷ್ಟುಅನುದಾನ ನೀಡಲಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 445 ರಸ್ತೆ ಕಾಮಗಾರಿಗಳು ಮತ್ತು 26 ಉದ್ದದ ಸೇತುವೆಗಳನ್ನು ಒಳಗೊಂಡಂತೆ 3226.21 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು 2729.66 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಎಲ್ಲಾ ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಉಳಿದ 2410.93 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳ ಪ್ರಸ್ತಾವನೆ ಕೇಂದ್ರದ ಅನುಮೋದನೆ ನಿರೀಕ್ಷೆಯಲ್ಲಿದೆ ಎಂದು ವಿವರಿಸಿದರು.

ರಾಜ್ಯದ 10,110 ಕಿ.ಮೀ ಜಿಲ್ಲಾ ರಸ್ತೆಗಳಿಗೆ ಹೆದ್ದಾರಿ ಭಾಗ್ಯ ...

ಸ್ವಾಮಿತ್ವ ಯೋಜನೆ ಅನುಷ್ಠಾನ: ಗ್ರಾಮೀಣ ಪ್ರದೇಶಗಳ ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ರಾಮನಗರ, ಮೈಸೂರು, ಹಾಸನ, ಬೆಳಗಾವಿ ಮತ್ತು ತುಮಕೂರು ಜಿಲ್ಲೆಯ 10 ಗ್ರಾಮ ಪಂಚಾಯತಿಯಲ್ಲಿನ 83 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿ 763 ಆಸ್ತಿ ಮಾಲೀಕರಿಗೆ ಆಸ್ತಿ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುವುದು. ಪ್ರಾಯೋಗಿಕವಾಗಿ ಈ ಯೋಜನೆ ಯಶಸ್ವಿಯಾದ ಬಳಿಕ ಮೊದಲ ಹಂತದಲ್ಲಿ 16 ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲೆಯಲ್ಲಿ 2021ರ ಮಾಚ್‌ರ್‍ ಅಂತ್ಯಕ್ಕೆ 16,600 ಗ್ರಾಮಗಳಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. 2ನೇ ಹಂತದಲ್ಲಿ ಉಳಿದ 14 ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ನರೇಗಾ ಉತ್ತಮ ಸಾಧನೆ: ನರೇಗಾ ಯೋಜನೆಯಲ್ಲಿ ರಾಜ್ಯ ಸರ್ಕಾರ ಉತ್ತರಮ ಸಾಧನೆ ಮಾಡಿದ್ದು, 2020-21ನೇ ಸಾಲಿನ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿದೆ. ಈ ಪೈಕಿ 9.32 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ ವಾರ್ಷಿಕ ಗುರಿಯ ಶೇ.71.68ರಷ್ಟುಸಾಧನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೂಲಿಗಾಗಿ 2493.18 ಕೋಟಿ ರು. ಮತ್ತು ಸಾಮಗ್ರಿಗಳಿಗಾಗಿ 609.65 ಕೋಟಿ ರು ಸೇರಿ ಒಟ್ಟು 3155.03 ಕೋಟಿ ರು. ವೆಚ್ಚ ಮಾಡಲಾಗಿದೆ. 44.86 ಲಕ್ಷ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಇದು ಕಳೆದ 5 ವರ್ಷದಲ್ಲಿ ಅತಿ ಹೆಚ್ಚಿನ ಸಾಧನೆಯಾಗಿದೆ. 8.34 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

click me!