ರಾಜ್ಯದಲ್ಲಿ ಮೂರೂವರೆ ತಿಂಗಳ ಬಳಿಕ ಕೊರೋನಾ ಸೋಂಕಿನ ಹೊಸ ಪ್ರಕರಣಗಳು 500ರ ಗಡಿ ದಾಟಿವೆ. ಜತೆಗೆ ಪರೀಕ್ಷೆ ಪಾಸಿಟಿವಿಟಿ ದರವೂ ತುಸು ಹೆಚ್ಚಳವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಸಾವಿರ ಗಡಿ ದಾಟಿದೆ.
ಬೆಂಗಳೂರು (ಜೂ.11): ರಾಜ್ಯದಲ್ಲಿ ಮೂರೂವರೆ ತಿಂಗಳ ಬಳಿಕ ಕೊರೋನಾ ಸೋಂಕಿನ ಹೊಸ ಪ್ರಕರಣಗಳು 500ರ ಗಡಿ ದಾಟಿವೆ. ಜತೆಗೆ ಪರೀಕ್ಷೆ ಪಾಸಿಟಿವಿಟಿ ದರವೂ ತುಸು ಹೆಚ್ಚಳವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಸಾವಿರ ಗಡಿ ದಾಟಿದೆ. ಶುಕ್ರವಾರ 525 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
228 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3,177 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 22 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 2.3ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 800 ಹೆಚ್ಚಾಗಿವೆ. ಹೊಸ ಪ್ರಕರಣಗಳು 54 ಏರಿಕೆಯಾಗಿವೆ(ಗುರುವಾರ 471, ಪ್ರಕರಣಗಳು, ಸಾವು ಶೂನ್ಯ).
undefined
ಭಾರತದಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಕಾಟ, ಒಂದೇ ದಿನ 7,584 ಹೊಸ ಕೇಸ್ ಪತ್ತೆ, 24 ಮಂದಿ ಸಾವು
ಮೂರೂವರೆ ತಿಂಗಳಲ್ಲಿ ಅಧಿಕ: ಈ ಹಿಂದೆ ಫೆಬ್ರವರಿ 26 ರಂದು 516 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಸದ್ಯ ಮೂರೂವರೆ ತಿಂಗಳ ಬಳಿಕ (105 ದಿನ) ಮತ್ತೆ 500ರ ಗಡಿ ದಾಟಿವೆ. ಜತೆಗೆ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರವು ಕೂಡ ಹೆಚ್ಚಳವಾಗುತ್ತಾ ಸಾಗಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಿಂದ ಹೊಸ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳು 3,177ಕ್ಕೆ ಹೆಚ್ಚಿದ್ದು, ಈ ಪೈಕಿ 3061 ಬೆಂಗಳೂರು ನಗರ ಒಂದರಲ್ಲಿಯೇ ಇವೆ. ಸಕ್ರಿಯ ಸೋಂಕಿತರ ಪೈಕಿ ಸದ್ಯ 20 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಒಬ್ಬರು ಮಾತ್ರ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕಳೆದ ಐದು ದಿನಗಳಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಇನ್ನು ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,066 ಮಂದಿ ಸಾವಿಗೀಡಾಗಿದ್ದಾರೆ.
ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ 494 (ಶೇ.94 ರಷ್ಟು) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. ಉಳಿದಂತೆ ಮೈಸೂರು 8, ದಕ್ಷಿಣ ಕನ್ನಡ 7, ಬಳ್ಳಾರಿ 4, ಉಡುಪಿ 3, ಹಾಸನ, ಚಿತ್ರದುರ್ಗ, ಬೆಳಗಾವಿಯಲ್ಲಿ ತಲಾ ಇಬ್ಬರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಹಾಗೂ ಧಾರವಾಡದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 20 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ದ.ಕ. ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 12 ಆಗಿದೆ. ಜಿಲ್ಲೆಯಲ್ಲಿ ಈವರೆಗಿನ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,35,638 ಆಗಿದ್ದು, ಅವರಲ್ಲಿ 1,33,776 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 1,850 ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್ ತಿಳಿಸಿದೆ.
Covid Crisis: 3.5 ತಿಂಗಳ ಬಳಿಕ 471 ಮಂದಿಗೆ ಸೋಂಕು: ಬೆಂಗಳೂರಿನಲ್ಲೇ 97% ಪ್ರಕರಣ
ಉಡುಪಿಯಲ್ಲಿ 3 ಕೇಸ್: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿನದಿಂದ ಹೆಚ್ಚುತ್ತಿದೆ. ಶುಕ್ರವಾರ 265 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಉಡುಪಿಯ ಇಬ್ಬರು ಮತ್ತು ಕಾರ್ಕಳ ತಾಲೂಕಿನ ಓರ್ವ ಸೇರಿ 3 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ದಿನ 4 ಮಂದಿ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲೀಗ 10 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 539 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಕಳೆದ 4 ದಿನದ ಕೇಸ್ ವಿವರ
ಜೂನ್ 7-348
ಜೂನ್ 8-376
ಜೂನ್ 9-471
ಜೂನ್ 10-525