Bengaluru: ಪತ್ನಿ ವಿರುದ್ಧ ಸುಳ್ಳು ಆರೋಪ ಮಾಡಿದ ಪತಿಗೆ 50,000 ದಂಡ..!

By Kannadaprabha NewsFirst Published Jan 24, 2022, 9:38 AM IST
Highlights

*  ಪತ್ನಿಯು ‘ಮಗಳನ್ನು ಬಂಧನ’ದಲ್ಲಿ ಇರಿಸಿದ್ದಾಳೆಂದು ಆರೋಪಪಿಸಿದ್ದ ಪತಿ
*  ಇದು ದುರುದ್ದೇಶಪೂರಿತ ಆರೋಪ, ನ್ಯಾಯಾಂಗದ ದುರ್ಬಳಕೆ: ಕೋರ್ಟ್‌
*  ಅನಾರೋಗ್ಯಪೀಡಿತ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಮಹಿಳೆ
 

ಬೆಂಗಳೂರು(ಜ.24): ಅನಾರೋಗ್ಯದಿಂದ ಬಳಲುತ್ತಿರುವ ಮಗಳಿಗೆ ಚಿಕಿತ್ಸೆ(Treatment) ಕೊಡಿಸುತ್ತಾ ಆರೈಕೆ ಹಾಗೂ ಪೋಷಣೆ ಮಾಡುತ್ತಿದ್ದ ಪತ್ನಿ ವಿರುದ್ಧ ‘ಮಗಳ ಬಂಧನ’ ಆರೋಪ ಹೊರಿಸಿದ ಪತಿಗೆ ಹೈಕೋರ್ಟ್‌(High Court of Karnataka) 50 ಸಾವಿರ ರು. ದಂಡ ವಿಧಿಸಿದೆ. ತನ್ನ ಮಗಳನ್ನು ಪತ್ನಿ ಬಂಧನದಲ್ಲಿಟ್ಟಿದ್ದು, ಜೀವ ಅಪಾಯದಲ್ಲಿದೆ ಎಂದು ಸುಳ್ಳು ಆರೋಪ ಮಾಡಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ಬೆಂಗಳೂರಿನ(Bengaluru) ಕಾಡುಬೀಸನಹಳ್ಳಿ ನಿವಾಸಿ ಗೌರವ್‌ ರಾಜ್‌ ಜೈನ್‌ಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಅರ್ಜಿದಾರನ ನಡೆ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆಯಾಗಿದೆ. ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರಿತ ಅರ್ಜಿ ದಾಖಲಿಸುವುದನ್ನು ಕಠಿಣ ಕ್ರಮದ ಮೂಲಕ ಮೊಟಕುಗೊಳಿಸಬೇಕಿದೆ ಎಂದು ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟು, ಅರ್ಜಿದಾರ ದಂಡ(Fine) ಮೊತ್ತವನ್ನು ಒಂದು ತಿಂಗಳಲ್ಲಿ ಪೊಲೀಸ್‌ ಕಲ್ಯಾಣ ನಿಧಿಗೆ(Police Welfare Fund) ಪಾವತಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ ದಂಡ ಮೊತ್ತದ ವಸೂಲಿಗಾಗಿ ಅರ್ಜಿದಾರಿನಿಗೆ ಸೇರಿದ ಭೂಮಿ(Land) ಜಪ್ತಿ ಮಾಡಬಹುದು ಎಂದು ಆದೇಶಿಸಿದೆ.

High Court of Karnataka: ಕೆನಡಾ ಪೌರತ್ವ ಮಗುವನ್ನ ಸುಪರ್ದಿಗೆ ಕೇಳಿದ್ದಕ್ಕೆ ದಂಡ

ಓರ್ವ ವ್ಯಕ್ತಿ ಯಾವುದಾದರೂ ಸಂಸ್ಥೆ ಅಥವಾ ಖಾಸಗಿ ವ್ಯಕ್ತಿಗಳ ವಶದಲ್ಲಿದ್ದರೆ ಬಂಧಿತನ ಬಿಡುಗಡೆಗೆ ನ್ಯಾಯಿಕ ಆದೇಶ ಪಡೆಯಲು ಹೇಬಿಯಸ್‌ ಕಾಪಸ್‌ ಅರ್ಜಿ ಸಲ್ಲಿಸಬಹುದು. ಅಪ್ರಾಪ್ತ ಬಾಲಕಿ ಅಥವಾ ಯುವತಿ ದುಷ್ಕರ್ಮಿಗಳಿಂದ ಅಪಹರಣಕ್ಕೀಡಾಗಿ ಬಲವಂತದಿಂದ ಮಾನವ ಕಳ್ಳಸಾಗಣೆ ಮತ್ತು ಅನೈತಿಕ ಚಟುವಟಿಕೆಗೆ ತಳ್ಳಲ್ಪಟ್ಟಿದ್ದರೆ, ಅವರ ಪೋಷಕರಿಗೆ ಮಕ್ಕಳ ಬಂಧನಕ್ಕೆ ಕಾರಣ ತಿಳಿಯದಿದ್ದರೆ, ಬಂಧನದ ಕುರಿತು ಮಾಹಿತಿ ನೀಡಲಾಗದಂತಹ ಪರಿಸ್ಥಿತಿಯಲ್ಲಿದ್ದರೆ, ಹೇಬಿಯಸ್‌ ಕಾರ್ಪಸ್‌ ಅರ್ಜಿ ಮೂಲಕ ನ್ಯಾಯಾಲಯ ನೊಂದವರಿಗೆ ಸೂಕ್ತ ಪರಿಹಾರ ಕಲ್ಪಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆದರೆ, ಈ ಪ್ರಕರಣ ಪರಿಶೀಲಿಸಿದಾಗ ಮಗು ಬಂಧನದಲ್ಲಿರದೆ ತಾಯಿ ಸೂಕ್ತ ಆರೈಕೆಯಲ್ಲಿದ್ದು, ಸುರಕ್ಷಿತವಾಗಿದೆ. ಈ ವಿಚಾರ ಸ್ಪಷ್ಟವಾಗಿ ತಿಳಿದಿದ್ದರೂ ಮತ್ತು ಮಗುವಿನ ಸುಪರ್ದಿಗೆ ಕೌಟುಂಬಿಕ ನ್ಯಾಯಾಲಯದ(Family Court) ಮೊರೆ ಹೋಗದೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸುವ ಮೂಲಕ ಅರ್ಜಿದಾರ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥಮಾಡಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ನ್ಯಾಯಾಲಯ ಸೂಚನೆ ಮೇರೆಗೆ ಪೊಲೀಸರು ತಾಯಿ ಮತ್ತು ಮಗುವನ್ನು ಪತ್ತೆ ಹಚ್ಚಿದ್ದಾರೆ. ಆ ಮೂಲಕ ಅರ್ಜಿದಾರ ಪೊಲೀಸ್‌(Police) ಪಡೆ ಮತ್ತು ಸರ್ಕಾರದ ಆಡಳಿತ ಯಂತ್ರವನ್ನು ಅರ್ಜಿದಾರ ದುರ್ಬಳಕೆ ಮಾಡಿಕೊಂಡಂತಾಗಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದಿಂದ ಯಾವುದೇ ಪರಿಹಾರ ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೊರ್ಟ್‌ ಅರ್ಜಿ ವಜಾಗೊಳಿಸಿದೆ.

Credit Card Theft: 1 ಲಕ್ಷ ಕಳಕೊಂಡ ಗ್ರಾಹಕನಿಂದ ಸುಲಿಗೆ ಮಾಡಿದ ಬ್ಯಾಂಕಿಗೆ 10 ಸಾವಿರ ರು. ದಂಡ

ಪ್ರಕರಣದ ಹಿನ್ನೆಲೆ

‘ನನ್ನ ಪತ್ನಿ ಮಗಳನ್ನು ತೆಗೆದುಕೊಂಡು ಹೋಗಿ ಬಂಧನದಲ್ಲಿ ಇರಿಸಿಕೊಂಡಿದ್ದಾರೆ. ಮಗಳ ಭೇಟಿಗೆ ಅನುಮತಿಸುತ್ತಿಲ್ಲ. ಮುಖ ಸಹ ತೋರಿಸುತ್ತಿಲ್ಲ. ಮಗಳ ಜೀವಕ್ಕೆ ಅಪಾಯವಿದೆ. ವಾಸ್ತವವಾಗಿ ಮಗು ಜೀವಂತವಾಗಿದೆಯೋ ಅಥವಾ ಇಲ್ಲವೋ ಎಂಬುದೇ ಗೊತ್ತಿಲ್ಲ . ಆಕೆಯ ರಕ್ಷಣೆಗೆ ಅಗತ್ಯ ಆದೇಶ ಹೊರಡಿಸಬೇಕು’ ಎಂದು ಕೋರಿ ಗೌರವ್‌ ರಾಜ್‌ ಜೈನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಆಕ್ಷೇಪಣೆ ಸಲ್ಲಿಸಿದ್ದ ಪತ್ನಿ, ‘ಪತಿಯೊಂದಿಗೆ ನನಗೆ ಮನಸ್ತಾಪವಿದೆ. ಮಗುವಿಗೆ ಆರೋಗ್ಯ ಸಮಸ್ಯೆಯಿದೆ. ದೆಹಲಿ ಸಮೀಪದ ಕತೌಳಿ ಎಂಬ ಊರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಮಗಳು ನನ್ನ ಆರೈಕೆಯಲ್ಲಿದ್ದು, ಬೆಳವಣಿಗೆ ಉತ್ತಮವಾಗಿದೆ. ಮಗಳು ಸದೃಢ ಹಾಗೂ ಆರೋಗ್ಯವಾಗಿದ್ದಾಳೆ. ಈ ವಿಚಾರ ತಿಳಿದಿದ್ದರೂ ಪತಿ ನ್ಯಾಯಾಲಯಕ್ಕೆ ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ’ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು.
 

click me!