ದೀಪಾವಳಿಗೆ ಹೆಚ್ಚು ಪಟಾಕಿ ಮಾರಾಟ| ಪೂರೈಕೆಗೆ ಕಂಪನಿಗಳು ಸಿದ್ಧವಿದ್ದರೂ ಖರೀದಿಗೆ ಆಸಕ್ತಿ ತೋರದ ವ್ಯಾಪಾರಸ್ಥರು| ಈ ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ 100ರಿಂದ 150 ಕೋಟಿ ರುಪಾಯಿ ಪಟಾಕಿ ವಹಿವಾಟು| ಈ ವರ್ಷ ಕೊರೋನಾ ಇರುವುದರಿಂದ ಗ್ರಾಹಕರನ್ನು ನಿಭಾಯಿಸುವುದು ಕಷ್ಟ ಸಾಧ್ಯ|
ಬೆಂಗಳೂರು(ನ.07): ಬೆಳಕಿನ ಹಬ್ಬ ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ರಾಜ್ಯದಲ್ಲಿ 50 ಕೋಟಿ ವ್ಯಾಪಾರವಾಗುವ ನಿರೀಕ್ಷೆ ಹೊಂದಲಾಗಿದೆ.
ದೀಪಾವಳಿ ಹಬ್ಬಕ್ಕೆ ಸಾಂಪ್ರದಾಯಿಕ ಪಟಾಕಿ ಮಾರಾಟ ನಿಷೇಧದ ಪ್ರಸ್ತಾಪವಾಗಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ಮಾರಾಟಗಾರರು, ವಿತರಕರು ಸರ್ಕಾರದ ನಿರ್ಧಾರಕ್ಕೆ ತಲೆದೂಗಿದ್ದಾರೆ. ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವುದರಿಂದ ಪಟಾಕಿ ಮಾರಾಟಗಾರರು, ವಿತರಕರಲ್ಲಿ ತುಸು ನೆಮ್ಮದಿ ಮೂಡಿಸಿದೆ. ರಾಜ್ಯ ಸರ್ಕಾರ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೆ ನೂರಾರು ಕೋಟಿ ರುಪಾಯಿ ವಹಿವಾಟಕ್ಕೆ ಬ್ರೇಕ್ ಬೀಳುತ್ತಿತ್ತು.
undefined
ರಾಜಸ್ಥಾನದಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ರಾಜ್ಯದ ವ್ಯಾಪಾರಿಗಳಲ್ಲಿ ಚಿಂತೆಗೆ ಕಾರಣವಾಗಿತ್ತು. ಜತೆಗೆ ಕರ್ನಾಟಕದಲ್ಲೂ ಪಟಾಕಿ ಮಾರಾಟ ನಿಷೇಧ ಚರ್ಚೆ ಪ್ರಾರಂಭವಾಗಿದ್ದರಿಂದ ಮಾರಾಟಗಾರರು, ವಿತರಕರು ಗೊಂದಲಕ್ಕೆ ಒಳಗಾಗಿದ್ದರು. ಕಂಪನಿಗಳು ಪಟಾಕಿ ನೀಡಲು ಆಸಕ್ತಿ ತೋರಿದ್ದರೂ ಖರೀದಿಗೆ ವಿತರಕರೇ ಹಿಂದೇಟು ಹಾಕಿದ್ದರು ಎನ್ನಲಾಗಿದೆ.
ರಾಜ್ಯವಾರು 50 ಮಂದಿ ಸಗಟು ಮಾರಾಟಗಾರರು, ವಿತರಕರು ಇದ್ದಾರೆ. ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಮಂದಿ ಅಧಿಕೃತ ಡೀಲರ್ಸ್ ಇದ್ದಾರೆ. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತರಿಸಲಾಗುತ್ತದೆ. ರಾಜ್ಯದಲ್ಲಿ ಪಟಾಕಿ ವಿತರಕರು ಈಗಾಗಲೇ ಶೇ.25ರಷ್ಟುಅಂದರೆ .30 ಕೋಟಿ ಮಾತ್ರ ಸರಕುಗಳನ್ನು ಖರೀದಿಸಿದ್ದಾರೆ. ಸದ್ಯ ಸರ್ಕಾರ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮುಂದಿನ ದಿನಗಳಲ್ಲಿ ವಿತರಕರು .30-40 ಕೋಟಿ ಪಟಾಕಿಗಳನ್ನು ತರಿಸಬಹುದು. ಒಟ್ಟಾರೆ ರಾಜ್ಯದಲ್ಲಿ .70-80 ಕೋಟಿಗೂ ಹೆಚ್ಚು ಪಟಾಕಿಗಳನ್ನು ಕಂಪನಿಗಳಿಂದ ತರಿಸಲಾಗುತ್ತದೆ ಎಂದು ಬೆಂಗಳೂರು ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪರಂಜ್ಯೋತಿ ಅವರು ಮಾಹಿತಿ ನೀಡಿದರು.
ಸಿಎಂ ಮಹತ್ವದ ಘೋಷಣೆ: ಈ ಬಾರಿ ದೀಪಾವಳಿ ಪಟಾಕಿ ಠುಸ್..!
ಈ ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಪಟಾಕಿ ಮಾರಾಟ 100ರಿಂದ 150 ಕೋಟಿ ರುಪಾಯಿ ವಹಿವಾಟು ಮುಟ್ಟುತ್ತಿತ್ತು. ಕಳೆದ ವರ್ಷವೂ ನಿರಂತರವಾಗಿ ಸುರಿದ ಮಳೆ, ಆರ್ಥಿಕ ಬಿಕ್ಕಟ್ಟು ಹಾಗೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಸುಪ್ರೀಂ ಕೋರ್ಟಿನ ಆದೇಶ ಸೇರಿದಂತೆ ಒಟ್ಟಾರೆ ಪಟಾಕಿ ಮಾರಾಟದ ಪರಿಣಾಮ ಬೀರಿತ್ತು. ಇದರಿಂದ 2019ರ ದೀಪಾವಳಿಯಲ್ಲಿ .80-90 ಕೋಟಿ ವಹಿವಾಟು ನಡೆದಿತ್ತು. ದೀಪಾವಳಿ ಹಬ್ಬಕ್ಕೆ ರಾಜ್ಯದಲ್ಲಿ .90 ಕೋಟಿ ವಹಿವಾಟು, ಬೆಂಗಳೂರಿನಲ್ಲೇ .60 ಕೋಟಿ ವ್ಯಾಪಾರವಾಗುತ್ತದೆ. ಈ ವರ್ಷ .40-50 ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಹಬ್ಬಕ್ಕೆ ಒಂದು ವಾರ ಇದ್ದಂತೆ ಹೆಚ್ಚಿನ ವ್ಯಾಪಾರವಾಗುತ್ತದೆ. ಈ ವರ್ಷ ಕೊರೋನಾ ಇರುವುದರಿಂದ ಗ್ರಾಹಕರನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸಿ ವ್ಯಾಪಾರ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಬಹುತೇಕರು ಹಸಿರು ಪಟಾಕಿ ಕೇಳುತ್ತಾರೆ. ಗ್ರಾಹಕರು ಅಧಿಕೃತ ಮಾರಾಟಗಾರರಿಂದ ಮಾತ್ರ ಪಟಾಕಿಗಳನ್ನು ಖರೀದಿಸಬೇಕು. ಇಲ್ಲವಾದರೆ ಸ್ಥಳೀಯ ಕೆಲ ವ್ಯಾಪಾರಿಗಳು ಹಸಿರು ಪಟಾಕಿ ಹೆಸರಿನಲ್ಲಿ ಮೋಸಗೊಳಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.
ಪರಿಸರ ಮಾಲಿನ್ಯ ಹಿನ್ನೆಲೆ ಪ್ರತಿ ವರ್ಷ ಪಟಾಕಿ ಖರೀದಿಸುವವರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಈ ನಡುವೆ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದ್ದಲ್ಲಿ ಸಗಟು ವ್ಯಾಪಾರಿಗಳು, ವಿತರಕರು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಿತ್ತು. ದೀಪಾವಳಿಗೆ 6-7 ತಿಂಗಳು ಇರುವಾಗಲೇ ಪಟಾಕಿ ತಯಾರಿಕೆ ನಡೆಯುತ್ತದೆ. ಆದರೆ, ಕಳೆದ ಸಾಲಿಗೆ ಹೋಲಿಸಿದಾಗ ಪಟಾಕಿ ಪೂರೈಕೆಯೂ ಕುಂಠಿತಗೊಂಡಿದ್ದು, ವ್ಯಾಪಾರ ಕುಸಿದಿದೆ. ಲಾಕ್‌ಡೌನ್‌ನಿಂದ ಶಿವಕಾಶಿಯಲ್ಲಿ ಪಟಾಕಿ ಉತ್ಪಾದನೆ ಸಮರ್ಪಕವಾಗಿ ನಡೆದಿಲ್ಲ ಎನ್ನುತ್ತಾರೆ ಪಟಾಕಿ ಮಾರಾಟಗಾರರು.