ವರಿಷ್ಠರ ಒಪ್ಪಿಗೆ ಪಡೆದು ನ.11ರ ನಂತರ ಸಂಪುಟ ವಿಸ್ತರಣೆ!

By Kannadaprabha NewsFirst Published Nov 7, 2020, 7:41 AM IST
Highlights

ನ.11ರ ನಂತರ ಸಂಪುಟ ವಿಸ್ತರಣೆ| ಉಪಚುನಾವಣೆ ಫಲಿತಾಂಶ ಬಳಿಕ ವರಿಷ್ಠರ ಜೊತೆ ಸಮಾಲೋಚನೆ| ಅವರು ಒಪ್ಪಿದರೆ ದಿಲ್ಲಿಗೆ ಭೇಟಿ, ಬಳಿಕ ಸಂಪುಟ ವಿಸ್ತರಣೆ: ಸಿಎಂ

ಬೆಂಗಳೂರು(ನ.07): ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತವಾಗಿದ್ದು, ನ.11ರ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.10ರಂದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶಗಳು ಬರಲಿವೆ. ಅದಕ್ಕಾಗಿ ಕಾಯುತ್ತಿದ್ದು, ನಂತರ ಪಕ್ಷದ ವರಿಷ್ಠರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಸಚಿವ ಸಂಪುಟದ ವಿಸ್ತರಣೆ ಕುರಿತು ಅನುಮತಿ ಪಡೆಯುತ್ತೇನೆ. ಅವರು ಒಪ್ಪಿದರೆ 11ರಂದು ದೆಹಲಿಗೆ ಹೋಗಿ ಬಂದು ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿದರು.

ನಾಲ್ಕು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳು ಮತ್ತು ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ಈಗಾಗಲೇ ಬಿಜೆಪಿ ಗೆದ್ದಾಗಿದೆ. ಬಹಳ ದೊಡ್ಡ ಅಂತರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲುವ ಸಾಧಿಸಲಿದ್ದೇವೆ. ರಾಜರಾಜೇಶ್ವರಿ ನಗರದಲ್ಲಿ ಕಡಿಮೆ ಮತದಾನವಾಗಿದ್ದರೂ ನಮ್ಮ ಗೆಲುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಮದ್ದೂರು ಕೆರೆಗೆ 3 ತಿಂಗಳಲ್ಲೇ ನೀರು:

ಮದ್ದೂರು ಕೆರೆಗೆ ನೀರು ಬಿಡದಿದ್ದರೆ ಪಾದಯಾತ್ರೆ ಮಾಡುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಆರು ತಿಂಗಳು ಬೇಡ, ಮೂರ್ನಾಲ್ಕು ತಿಂಗಳಲ್ಲೇ ನೀರು ಬಿಡುತ್ತೇವೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೆರೆ ಸ್ವಚ್ಛಗೊಳಿಸುವುದು ಮತ್ತು ಕಾಲುವೆ ಸಿದ್ಧಪಡಿಸುವ ಬಗ್ಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಈ ಹಿಂದೆಯೇ ಹಣ ಬಿಡುಗಡೆ ಮಾಡಲಾಗಿದೆ. ಆರು ತಿಂಗಳಿಗೂ ಮುನ್ನವೇ ಕೆರೆಗೆ ನೀರು ಬಿಡುವ ಆಶ್ವಾಸನೆಯನ್ನು ಕುಮಾರಸ್ವಾಮಿ ಅವರಿಗೆ ಕೊಡುತ್ತೇನೆ ಎಂದು ತಿಳಿಸಿದರು.

click me!