
ಬೆಂಗಳೂರು(ಫೆ.08): ಮಾಜಿ ದೇವದಾಸಿ ಮಕ್ಕಳಿಗೆ ಶಾಲಾ ದಾಖಲಾತಿ ಅರ್ಜಿಯಲ್ಲಿ ತಂದೆ ಹೆಸರು ಕಡ್ಡಾಯವಾಗಿರದೆ ಐಚ್ಛಿಕವಾಗಿಸಲು ಕ್ರಮ ವಹಿಸಲಾಗಿದೆ, ಈ ಮಕ್ಕಳಿಗೆ ಶಿಕ್ಷಣದಲ್ಲಿ ಶೇ. 5ರಷ್ಟು ಒಳಮೀಸಲಾತಿ ಕಲ್ಪಿಸಲು ಬರುವ ಅಧಿವೇಶನದಲ್ಲಿ ಚರ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ದೇವದಾಸಿ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವ ದೃಷ್ಟಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಅವಕಾಶ ನೀಡಲು ಶೇ. 5ರಷ್ಟು ಒಳಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಜತೆಗೆ ಉದ್ಯೋಗದಲ್ಲೂ ಮೀಸಲಾತಿ ಒದಗಿಸುವ ಬಗ್ಗೆ ಪ್ರಯತ್ನ ನಡೆಸಿದ್ದೇವೆ ಎಂದರು.
Koppal: ಮಗಳನ್ನೇ ದೇವದಾಸಿ ಮಾಡಿದ ಪೋಷಕರು: ಕರಳು ಹಿಂಡುತ್ತೆ ಕಾರಣ!
ಶಾಲೆ, ವಸತಿ ನಿಲಯದಲ್ಲಿ ದಾಖಲಾತಿ ವೇಳೆ ಅರ್ಜಿಯಲ್ಲಿ ತಂದೆ ಹೆಸರು ಕಡ್ಡಾಯವಾಗಿದ್ದು, ನಮೂದು ಮಾಡುವಂತೆ ಅಧಿಕಾರಿಗಳು ಪೀಡಿಸುತ್ತಿದ್ದರು. ಅದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜತೆ ಚರ್ಚಿಸಲಾಗಿತ್ತು. ತಂದೆ ಹೆಸರು ಕಡ್ಡಾಯವಾಗಿಸದೆ ಐಚ್ಛಿಕ ಆಯ್ಕೆ ನೀಡುವ ಆದೇಶಕ್ಕೆ ಎರಡೂ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಈಗಾಗಲೆ ಸಹಿ ಹಾಕಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಾವು ಪ್ರವಾಸ ಮಾಡಿದ ವೇಳೆ ಕೆಲ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ಮಕ್ಕಳಿಂದಲೆ ಸಿಗರೇಟ್, ಮದ್ಯ ತರಿಸಿದ ಪ್ರಕರಣಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ಎಲ್ಲ ವಾರ್ಡನ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ದುಶ್ಚಟದಿಂದ ದೂರವಿರುವುದು, ಓದಿನ ಬಗ್ಗೆ ಹೆಚ್ಚು ಒತ್ತು ನೀಡುವುದು ಸೇರಿ ಸಂಸ್ಕಾರ ನೀಡಲು ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ರಚಿಸಲು ಯೋಜಿಸಲಾಗಿದೆ. ಇದಕ್ಕಾಗಿ ಮಕ್ಕಳಿಗೆ ಕೌನ್ಸೆಲಿಂಗ್ ನಡೆಸಲು ಡಯಟ್ ಶಿಕ್ಷಕರ ತಂಡ ರಚಿಸಲಿದ್ದೇವೆ ಎಂದರು.
ದೇವದಾಸಿ ಮಹಿಳೆಯರ ಸಮೀಕ್ಷೆಗೆ ನಿರ್ಧರಿಸುವುದು ಸ್ವಾಗತಾರ್ಹ: ದೇವದಾಸಿ ಮಹಿಳೆಯರ ವಿಮೋಚನಾ ಸಂಘ
ಬಾಲ್ಯವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ ಸೇರಿ ಇತರೆ ಗಂಭೀರ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.
ವಾರದಲ್ಲಿ ಸದಸ್ಯರ ನೇಮಕ
ಇನ್ನೊಂದು ವಾರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಎಲ್ಲ ಆರು ಸದಸ್ಯರು ನೇಮಕ ಆಗಲಿದ್ದಾರೆ. ಬಳಿಕ ಒಬ್ಬೊಬ್ಬರಿಗೆ ಐದು-ಆರು ಜಿಲ್ಲೆಗಳಂತೆ ಹೊಣೆ ವಹಿಸಿ ಬಾಕಿ ಇರುವ ಮಕ್ಕಳ ಹಕ್ಕು ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಆಯೋಗದ ಅಧಕ್ಷ ಕೆ.ನಾಗಣ್ಣಗೌಡ ತಿಳಿಸಿದರು.
ತಾವು ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಅಕ್ಟೋಬರ್‌ನಿಂದ ಈವರೆಗೆ 11 ಪೋಕ್ಸೊ, 9 ಕಿರುಕುಳ, 6 ಆರ್‌ಟಿಇ ಉಲ್ಲಂಘನೆ ಸೇರಿ 131 ಪ್ರಕರಣಗಳು ದಾಖಲಾಗಿದ್ದು, 24 ಇತ್ಯರ್ಥಗೊಂಡಿವೆ. ಆಯೋಗದಿಂದ 96 ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ