ಎಸ್‌ಡಿಪಿಐ ಮೇಲೆ ದಾಳಿಯ ದಾಖಲೆ ನೀಡಿ: ಹೈಕೋರ್ಟ್‌

By Kannadaprabha NewsFirst Published Feb 8, 2023, 11:11 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾಗೆ ಸೇರಿದ ಸ್ಥಳಗಳ ಮೇಲೆ ನಡೆಸಿದ ದಾಳಿ ನಡೆಸಲು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಕ್ಕೆ ಸಂಬಂಧಿಸಿದ ದಾಖಲೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್‌. 

ಬೆಂಗಳೂರು(ಫೆ.08): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಸ್ಥಳಗಳ ಮೇಲೆ ನಡೆಸಿದ ದಾಳಿ ನಡೆಸಲು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಕ್ಕೆ ಸಂಬಂಧಿಸಿದ ದಾಖಲೆ ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. ದಾಳಿ ನಡೆಸಿ, ಜಪ್ತಿ ಮಾಡಿರುವ ಸ್ವತ್ತುಗಳಿಗೆ ಹಾಕಲಾಗಿರುವ ಸೀಲ್‌ (ಮೊಹರು) ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಎಸ್‌ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್‌ ಸಾದತ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಯಾವುದೇ ನೋಟಿಸ್‌ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐನ 17 ಕಚೇರಿಗಳನ್ನು ಸೀಲ್‌ ಮಾಡಲಾಗಿದೆ. ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಸಿದ್ಧವಾಗಬೇಕಿದೆ. ಕಚೇರಿಗಳನ್ನು ಬಂದ್‌ ಮಾಡಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲಾಗುತ್ತಿಲ್ಲ. ಆದ್ದರಿಂದ, ಸೀಲ್‌ಗಳನ್ನು ತೆರವು ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಕೋರಿದರು.

ಹುಬ್ಬಳ್ಳಿ: ಎನ್‌ಐಎ ದಾಳಿ, ಬೆಳ್ಳಂ ಬೆಳಗ್ಗೆ ಎಸ್‌ಡಿಪಿಐ ಮುಖಂಡನಿಗೆ ಭರ್ಜರಿ ಶಾಕ್‌..!

ಸರ್ಕಾರದ ಪರ ವಕೀಲ ವಿನೋದ್‌ ಕುಮಾರ್‌, ‘ನಿಷೇಧಿತ ಸಂಘಟನೆಯಾದ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸಾಮಗ್ರಿಗಳು ಎಸ್‌ಡಿಪಿಐ ಕಚೇರಿಯಲ್ಲಿ ದೊರೆತಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಸ್‌ಡಿಪಿಐ ಕಚೇರಿ ಮೇಲೆ ದಾಳಿನಡೆಸಿ ಸೀಲ್‌ ಹಾಕಲಾಗಿದೆ. ಆದರೆ, ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ‘ಕೇಂದ್ರ ಸರ್ಕಾರದ ನಿರ್ದೇಶನ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿ’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.

click me!