ಗದಗ ಜಿಲ್ಲೆಯಲ್ಲಿ 2 ವರ್ಷದಲ್ಲಿ 481 ಜನರಿಗೆ ಹಾವು ಕಡಿತ!

Kannadaprabha News, Ravi Janekal |   | Kannada Prabha
Published : Nov 15, 2025, 12:15 AM IST
481 people bitten by snakes in Gadag district in 2 years

ಸಾರಾಂಶ

ಗದಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 400ಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಹೆಚ್ಚಾಗಿ ರೈತರು  ಕೃಷಿ ಕಾರ್ಮಿಕರು ಇದಕ್ಕೆ ತುತ್ತಾಗಿದ್ದಾರೆ.  ಹಾವು ಕಚ್ಚಿದಾಗ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

ಗದಗ: ಹಾವು ಕಡಿತವು ಉಷ್ಣವಲಯದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಉಷ್ಣವಲಯದಲ್ಲಿರುವ ಜಿಲ್ಲೆಯಲ್ಲಿಯೂ ಎರಡು ವರ್ಷಗಳಲ್ಲಿ 400ಕ್ಕೂ ಅಧಿಕ ಜನರು ಹಾವುಗಳ ಕಡಿತಕ್ಕೆ ತುತ್ತಾಗಿ ತತ್ತರಿಸಿದ್ದಾರೆ.

ಕೃಷಿ ಪ್ರಧಾನವಾಗಿರುವ ಜಿಲ್ಲೆಯ ರೈತರು, ಕೃಷಿ ಕೂಲಿ ಕಾರ್ಮಿಕರು, ಮಹಿಳಾ ಕಾರ್ಮಿಕರು ಸೇರಿದಂತೆ ನಿತ್ಯವೂ ಜಮೀನುಗಳಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗುವ ಬಡಜನರೇ ಹಾವು ಕಡಿತದ ಸಮಸ್ಯೆಯನ್ನು ಎದುರಿಸಿದ್ದಾರೆ.

481 ಜನರಿಗೆ ಹಾವು ಕಡಿತ: 

2024ರಲ್ಲಿ 206 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಕೇವಲ 1 ಪ್ರಕರಣದಲ್ಲಿ ಮಾತ್ರ ಸಾವು ಸಂಭವಿಸಿದ್ದು, ಇನ್ನುಳಿದ 205 ಜನರ ಜೀವ ಉಳಿಸಲಾಗಿದೆ. 2025ರ ಅಕ್ಟೋಬರ್ ಅಂತ್ಯದವರೆಗೆ 275 ಜನರು ಹಾವು ಕಡಿತಕ್ಕೆ ತುತ್ತಾಗಿದ್ದು, ಅವರಲ್ಲಿ 3 ಜನರ ಸಾವು ಸಂಭವಿಸಿದ್ದು ಇನ್ನುಳಿದ 272 ಜನರ ಜೀವ ಉಳಿಸುವಲ್ಲಿ ಆರೋಗ್ಯ ಇಲಾಖೆ ಸಫಲವಾಗಿದೆ.

ಸಮಸ್ಯೆಗಳು: 

ಹಾವು ಕಡಿತ ವೇಳೆ ಸಾರ್ವಜನಿಕರು ಸಹಜವಾಗಿಯೇ ಸಾವು ಸಂಭವಿಸುತ್ತದೆ ಎನ್ನುವ ಭಯವಿರುತ್ತದೆ. ಆದರೆ ಹಾವು ಕಡಿತ ಬದುಕುಳಿದ ನಂತರವೂ ಸಾಕಷ್ಟು ಸಮಸ್ಯೆ ಸೃಷ್ಟಿ ಮಾಡುತ್ತದೆ. ಶಾರೀರಿಕವಾಗಿ ಅಂಗ ವೈಕಲ್ಯಗಳು, ಸೋಂಕುಗಳು, ನೋವು, ವಿಕಾರ, ದುರ್ಬಲ ಚಲನಶೀಲತೆ ಉಂಟು ಮಾಡಿದರೆ, ಪಾರ್ಶ್ವವಾಯು, ನರಹಾನಿ, ಅರಿವಿನ ದುರ್ಬಲತೆಯನ್ನು ಸೃಷ್ಟಿ ಮಾಡುತ್ತದೆ.

ಮಾನಸಿಕವಾಗಿ ಆಘಾತಕಾರಿ ಒತ್ತಡದ ಅಸ್ವಸ್ಥತೆ, ಖಿನ್ನತೆ ಮತ್ತು ನಿರಂತರ ಆತಂಕವನ್ನು ಹಾವು ಕಡಿತದಿಂದ ಬದುಕುಳಿದ ವ್ಯಕ್ತಿಯಲ್ಲಿ ಕಾಣಬಹುದಾಗಿದೆ.

ಭಯಬೇಡ ಎಚ್ಚರವಿರಲಿ: ರಾಜ್ಯದಲ್ಲಿ 85ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅದರಲ್ಲಿ ಕೇವಲ 7- 8 ಪ್ರಭೇದಗಳು ಮಾತ್ರ ವಿಷಕಾರಿಯಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ನಡೆದಿರುವ ಒಟ್ಟು ಹಾವು ಕಡಿತದಲ್ಲಿ ಶೇ. 30ರಷ್ಟು ಮಾತ್ರ ವಿಷಕಾರಿ ಹಾವುಗಳಿದ್ದು, ಎರಡು ವರ್ಷದಲ್ಲಿ 481 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 4 ಪ್ರಕರಣದಲ್ಲಿ ಸಾವು ಸಂಭವಿಸಿದೆ. ಆದರೆ ಬದುಕುಳಿದ 100ಕ್ಕೂ ಅಧಿಕ ಜನರು ಇಂದಿಗೂ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಯಾವೆಲ್ಲಾ ವಿಷಕಾರಿ?: ನಾಗರಹಾವು, ಕಟ್ಟುಹಾವು, ಮಂಡಲದ ಹಾವು, ಗರಗಸ ಮಂಡಲದ ಹಾವು, ಮಲಬಾರ ಪಿಟ್ ವೈಪರ್(ಹಪ್ಪಟೆ ಹಾವು) ಹಂಪ ನೋಸ್ಟ್ ಪಿಟ್ ವೈಪರ್, ಹವಳದ ಹಾವು ಮತ್ತು ಕಾಳಿಂಗ ಸರ್ಪ ಇವೆಲ್ಲ ವಿಷಕಾರಿಯಾಗಿದ್ದು, ಇನ್ನೇನು ಹಿಂಗಾರು ಪ್ರಾರಂಭವಾಗಿದ್ದು, ಮಳೆ ಕಡಿಮೆಯಾದ ಹಿನ್ನೆಲೆ ರೈತಾಪಿ ಜನರು ನಿತ್ಯವೂ ಹೆಚ್ಚಿನ ಸಮಯವನ್ನು ಜಮೀನುಗಳಲ್ಲಿಯೇ ಕಳೆಯುವುದರಿಂದಾಗಿ ಹಾವುಗಳ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ.

ಉಚಿತವಾಗಿ ಚಿಕಿತ್ಸೆ: ವಿಷಕಾರಿ ಹಾವು ಕಡಿತಕ್ಕೆ ಎಎಸ್ವಿ(Anti snake venom) ಒಂದೇ ಫಲಕಾರಿ ಚಿಕಿತ್ಸೆಯಾಗಿದೆ. ಸಧ್ಯ 1120 ಎಎಸ್‌ಗಳ ದಾಸ್ತಾನು ಲಭ್ಯವಿದೆ. ಹಾವು ಕಡಿತದ ಬಗ್ಗೆ ಭಯಪಡದೇ ಎಚ್ಚರ ವಹಿಸಬೇಕು. ಹಾವು ಕಚ್ಚಿದ ತಕ್ಷಣ ಯಾವುದೇ ಸಾಂಪ್ರದಾಯಿಕ, ನಾಟಿ ಔಷಧ ಪಡೆಯದೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ ರಾಠೋಡ ತಿಳಿಸಿದರು.

ಏನು ಮಾಡಬೇಕು?

- ಹಾವು ಕಚ್ಚಿದಾಗ ಕಚ್ಚಿದ ಭಾಗದ ಮೇಲೆ ಹಗ್ಗ, ದಾರ, ಬಟ್ಟೆ ಏನನ್ನೂ ಕಟ್ಟದಿರಿ

- ಹಾವು ಕಚ್ಚಿದ ಸಂದರ್ಭದಲ್ಲಿ ಗಾಬರಿಯಾಗದಿರಿ

- ಕಚ್ಚಿದ ಭಾಗದಲ್ಲಿ ಏನನ್ನೂ ಹಚ್ಚಬೇಡಿ. ಕಚ್ಚಿದ ಭಾಗವನ್ನು ಅಲುಗಾಡಿಸದಂತೆ ನೋಡಿಕೊಳ್ಳಿ

- ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗರ, ಬೆಲ್ಟ್, ಆಭರಣಗಳು, ವಾಚ್, ಬಿಗಿಯಾದ ಬಟ್ಟೆಗಳನ್ನು ಕಳಚಿ

- ಹಾವನ್ನು ಹಿಡಿಯುವ ಮತ್ತು ಕೊಲ್ಲುವ ಪ್ರಯತ್ನ ಮಾಡಿ ಸಮಯ ವ್ಯರ್ಥ ಮಾಡಬೇಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!