ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆ ಪಡೆದ ಸಂಸ್ಥೆ ಆಹಾರ ಪೂರೈಕೆ ಮಾಡದ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್‌ಗಳು ಬುಧವಾರದಿಂದ ಸ್ಥಗಿತಗೊಂಡಿವೆ.
ಬೆಂಗಳೂರು (ಜು.18): ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆ ಪಡೆದ ಸಂಸ್ಥೆ ಆಹಾರ ಪೂರೈಕೆ ಮಾಡದ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್‌ಗಳು ಬುಧವಾರದಿಂದ ಸ್ಥಗಿತಗೊಂಡಿವೆ.
ಈ ಕ್ಯಾಂಟೀನ್(Indira canteen) ಗಳಿಗೆ ಆಹಾರ ಪೂರೈಕೆಯ ಗುತ್ತಿಗೆಯನ್ನು ಶೆಫ್ ಟಾಕ್ ಸಂಸ್ಥೆ ಪಡೆದುಕೊಂಡಿದೆ. ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್ ಗಳಿಗೆ ಪೂರೈಕೆ ಮಾಡಿದ ಬಿಲ್ ಪಾವತಿ ಮಾಡಿಲ್ಲವೆಂದು ಬುಧವಾರದಿಂದ ಆಹಾರ ಪೂರೈಕೆಯನ್ನು ಏಕಾಏಕಿ ಸ್ಥಗಿತಗೊಳಿದೆ. ಸುಮಾರು 47 ಕೋಟಿ ರು. ಬಿಲ್ ಬಾಕಿ ಇದ್ದು, ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿ(BBMP) ಮುಖ್ಯ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಿಲ್ಲ ಎಂಬ ಕಾರಣಕ್ಕೆ ಆಹಾರ ಪೂರೈಕೆ ನಿಲ್ಲಿಸಿದೆ. ಹಲವು ದಿನಗಳ ಹಿಂದೆಯೇ ಈ 11 ಇಂದಿರಾ ಕ್ಯಾಂಟೀನ್ ನಲ್ಲಿ ರಾತ್ರಿ ಊಟವನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರದಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ವಿದ್ಯುತ್-ನೀರಿನ ಬಿಲ್ ಪಾವತಿ ಗೊಂದಲ
ಗುತ್ತಿಗೆ ಒಪ್ಪಂದದಲ್ಲಿ ಇಂದಿರಾ ಕ್ಯಾಂಟೀನ್ ಗಳ ನೀರಿನ ಬಿಲ್ ಮತ್ತು ವಿದ್ಯುತ್ ಬಿಲ್ ಅನ್ನು ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರೇ ಪಾವತಿ ಮಾಡಬೇಕು. ಆದರೆ, ಗುತ್ತಿಗೆ ಪಡೆದಿರುವ ಶೆಫ್ ಟಾಕ್ ಸಂಸ್ಥೆ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡುವಂತೆ ಬಿಬಿಎಂಪಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದೇ ನೆಪ ಹೇಳಿ ಏಕಾಏಕಿ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ನಿಲ್ಲಿಸಲಾಗಿದೆ ಎಂದು ಬಿಬಿಎಂಪಿಯ ಮೂಲಗಳು ಮಾಹಿತಿ ನೀಡಿವೆ.
ಬೇರೆ ಸಂಸ್ಥೆಗಳ ಮೂಲಕ ಆಹಾರ ಪೂರೈಕೆಗೆ ಕ್ರಮ
ಶೆಫ್‌ಟಾಕ್ ಸಂಸ್ಥೆ ಆಹಾರ ಪೂರೈಕೆ ನಿಲ್ಲಿಸುವ ಇಂದಿರಾ ಕ್ಯಾಂಟೀನ್ ಗಳಿಗೆ ಇತರೆ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವ ಮುಖ್ಯ ಆಯುಕ್ತರೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಸ್ಥಗಿತಗೊಂಡಗೊಂಡ ಕ್ಯಾಂಟೀನ್‌ಗಳು
ಬಸವನಗುಡಿ, ಬೈರಸಂದ್ರ, ಪದ್ಮನಾಭನಗರ, ವಿವಿಪುರ, ಸಿದ್ದಾಪುರ, ಹೊಂಬೇಗೌಡ ನಗರ, ಜಯನಗರ, ವಿದ್ಯಾಪೀಠ, ಈಜಿಪುರ, ಆಡುಗೋಡಿ ವಾರ್ಡ್‌ನ ಇಂದಿರಾ ಕ್ಯಾಂಟೀನ್ ಗಳು ಬುಧವಾರದಿಂದ ಆಹಾರ ಪೂರೈಕೆ ಇಲ್ಲದೇ ಬಂದ್ ಆಗಿವೆ.