ತೀವ್ರ ಆತಂಕ: ರಾಜ್ಯದಲ್ಲಿ ಮತ್ತೆ 44 ಶಿಕ್ಷಕರು, 10 ವಿದ್ಯಾರ್ಥಿಗಳಿಗೆ ಸೋಂಕು!

By Suvarna NewsFirst Published Jan 6, 2021, 7:16 AM IST
Highlights

ರಾಜ್ಯದಲ್ಲಿ ಮತ್ತೆ 44 ಶಿಕ್ಷಕರು, 10 ವಿದ್ಯಾರ್ಥಿಗಳಿಗೆ ಸೋಂಕು!| 28 ಶಿಕ್ಷಕರು ಶಾಲೆಗೆ ಹಾಜರು| ತೀವ್ರ ಆತಂಕ| ಸೋಂಕಿತ ಶಿಕ್ಷಕರ ಸಂಖ್ಯೆ 85ಕ್ಕೇರಿಕೆ

ಬೆಂಗಳೂರು(ಜ.06): ಒಂದು ಕಡೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗಿ ನಾಲ್ಕನೇ ದಿನ ಪೂರೈಸಿದ್ದರೆ ಇನ್ನೊಂದು ಕಡೆ ಕೋವಿಡ್‌ ಪೀಡಿತ ಶಿಕ್ಷಕರ ಸಂಖ್ಯೆ ಎಂಬತ್ತರ ಗಡಿ ದಾಟಿರುವುದು ತೀವ್ರ ಆತಂಕ ಮೂಡಿಸಿದೆ. ಮಂಗಳವಾರ ಒಂದೇ ದಿನ ರಾಜ್ಯದಲ್ಲಿ ಮತ್ತೆ 44 ಶಿಕ್ಷಕರು ಮತ್ತು 10 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದ ಬಳಿಕ ಈವರೆಗೆ ಕೋವಿಡ್‌ ಪೀಡಿತ ಬೋಧಕರ ಸಂಖ್ಯೆ 85ಕ್ಕೇರಿದ್ದರೆ, ಮಕ್ಕಳ ಸಂಖ್ಯೆ15ಕ್ಕೇರಿದಂತಾಗಿದೆ.

ರಾಜ್ಯದಲ್ಲಿ ಶನಿವಾರ 16 ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದ್ದರೆ, ಸೋಮವಾರ ಒಂದೇ ದಿನ 25 ಬೋಧಕ ಸಿಬ್ಬಂದಿಯಲ್ಲಿ ಕೋವಿಡ್‌ ದೃಢಪಟ್ಟು ಆತಂಕ ಸೃಷ್ಟಿಯಾಗಿತ್ತು. ಇದೀಗ ಮತ್ತೆ 44 ಶಿಕ್ಷಕರಲ್ಲಿ ಸೋಂಕು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮಂಗಳವಾರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಕೋವಿಡ್‌ ಪೀಡಿತರಾಗಿರುವ ಪ್ರಕರಣ ಪತ್ತೆಯಾಗಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಜಿಲ್ಲೆಯಲ್ಲಿ 22 ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದ್ದರೆ, ಕೋಲಾರ 9, ಬಾಗಲಕೋಟೆ 5, ತುಮಕೂರು 4, ತುಮಕೂರು 4, ಚಿತ್ರದುರ್ಗ ಇಬ್ಬರು(ಒಬ್ಬ ಬೋಧಕೇತರ ಸಿಬ್ಬಂದಿ ಹೊರತುಪಡಿಸಿ), ಹಾವೇರಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬ ಶಿಕ್ಷಕರು ಕೋವಿಡ್‌ಗೆ ತುತ್ತಾಗಿದ್ದಾರೆ.

ಇವರಲ್ಲಿ ಬೆಳಗಾವಿಯ 22, ಬಾಗಲಕೋಟೆಯ 5 ಹಾಗೂ ವಿಜಯಪುರದ ಒಬ್ಬ ಶಿಕ್ಷಕರು ಅಂದರೆ ಒಟ್ಟಾರೆ 28 ಶಿಕ್ಷಕರೆಲ್ಲರೂ ಮೊದಲ ದಿನ ಶಾಲೆಗೆ ಹೋಗಿರುವುದು ಶಿಕ್ಷಣ ಇಲಾಖೆಗೆ ತಲೆನೋವು ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗಳನ್ನು ಒಂದು ವಾರ ಬಂದ್‌ ಮಾಡಲು ಆದೇಶಿಸಲಾಗಿದ್ದು, ಸಂಪರ್ಕಕ್ಕೆ ಬಂದವರೆಲ್ಲರಿಗೂ ಕೊರೋನಾ ಟೆಸ್ಟ್‌ ಮಾಡಲು ಸೂಚಿಸಲಾಗಿದೆ. ಆದರೆ, ಉಳಿದ ಜಿಲ್ಲೆಗಳಲ್ಲಿ ಪಾಸಿಟಿವ್‌ ಬಂದಿರುವ ಶಿಕ್ಷಕರು ಶಾಲೆಗೆ ಹಾಜರಾಗಿಲ್ಲ ಎನ್ನಲಾಗಿದೆ.

ಕೋಲಾರದಲ್ಲಿ 8 ಮಕ್ಕಳಿಗೆ ಸೋಂಕು:

ಏತನ್ಮಧ್ಯೆ, ಚಿಕ್ಕಮಗಳೂರಲ್ಲಿ ಸೋಮವಾರ ಐವರು ಮಕ್ಕಳಿಗೆ ಪಾಸಿಟಿವ್‌ ಬಂದಿದ್ದರೆ, ಇದೀಗ ಕೋಲಾರದಲ್ಲಿ 8 ಮತ್ತು ಚಿತ್ರದುರ್ಗದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹಾಜರು

ರಾಜ್ಯದ ಶಾಲೆ, ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಮಾಧಾನಕರವಾಗಿ ಮುಂದುವರೆದಿದ್ದು, ಮಂಗಳವಾರ ದ್ವಿತೀಯ ಪಿಯುಸಿಯ 2.42 ಲಕ್ಷ (ಶೇ.57.25) ವಿದ್ಯಾರ್ಥಿಗಳು, ಎಸ್ಸೆಸ್ಸೆಲ್ಸಿಯ 4.77 ಲಕ್ಷ (ಶೇ.51.34) ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಅದೇ ರೀತಿ ವಿದ್ಯಾಗಮ ಕಲಿಕೆಗೆ 6ರಿಂದ 9ನೇ ತರಗತಿ ವರೆಗಿನ 6.30 ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಜರಾಗಿದ್ದಾರೆ.

click me!