
ನವದೆಹಲಿ(ಜ.06): ಕೊರೋನಾ ವೈರಸ್‌ಗೆ ಕಡಿವಾಣ ಹಾಕುವ 2 ಲಸಿಕೆಗಳಿಗೆ ಅನುಮೋದನೆ ದೊರಕಿರುವ ಹಿನ್ನೆಲೆಯಲ್ಲಿ ಸಂಕ್ರಾಂತಿಯ ವೇಳೆಗೆ ಲಸಿಕೆ ನೀಡಿಕೆ ಆರಂಭವಾಗುವ ಸುಳಿವನ್ನು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನೀಡಿದೆ. ಈ ಮೂಲಕ ಧನುರ್ಮಾಸ ಮುಗಿದು ಉತ್ತರಾಯಣ ಪರ್ವಕಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ದೇಶವು ಶುಭ ಗಳಿಗೆ ನೋಡುವ ಸಾಧ್ಯತೆ ಇದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ‘ದೇಶಾದ್ಯಂತ ಕೊರೋನಾ ಲಸಿಕೆ ಹಂಚಿಕೆಯ ತಾಲೀಮಿನ ಫಲಿತಾಂಶ ಆಧರಿಸಿ, ಲಸಿಕೆಗೆ ಅನುಮತಿ ಸಿಕ್ಕ 10 ದಿನದೊಳಗೆ ಕೊರೋನಾ ಲಸಿಕೆಯ ತುರ್ತು ಹಂಚಿಕೆಗೆ ಸರ್ಕಾರ ಸಿದ್ಧವಿದೆ’ ಎಂದರು. ಈ ಮೂಲಕ, ಜನವರಿ 13 ಅಥವಾ 14 ವೇಳೆಗೆ ಲಸಿಕೆ ಹಂಚಿಕೆ ಆರಂಭವಾಗಬಹುದು ಎಂಬ ಸುಳಿವು ನೀಡಿದರು. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತ್ ಬಯೋಟೆಕ್ ಹಾಗೂ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್ ಜನವರಿ 3ರಂದು ಅನುಮತಿ ಗಿಟ್ಟಿಸಿದ್ದವು. ಆದರೆ ನಿಖರ ದಿನಾಂಕವನ್ನು ಹೇಳದ ಅವರು, ‘ಅಧಿಕೃತ ಘೋಷಣೆಯನ್ನು ಕೇಂದ್ರ ಸರ್ಕಾರವೇ ಮಾಡಲಿದೆ’ ಎಂದು ಸ್ಪಷ್ಟಪಡಿಸಿದರು.
‘ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿಯಲ್ಲಿರುವ ಕೆಲಸಗಾರರಿಗೆ ನೀಡಲಾಗುತ್ತದೆ. ಇವರು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ಅವರ ದತ್ತಾಂಶ ಲಭ್ಯವಿದ್ದು, ಕೋ-ವಿನ್ ಲಸಿಕೆ ಹಂಚಿಕೆ ನಿರ್ವಹಣಾ ವ್ಯವಸ್ಥೆಯಲ್ಲಿ ಕ್ರೋಡೀಕರಿಸಲಾಗಿದೆ’ ಎಂದು ಭೂಷಣ್ ಹೇಳಿದರು.
37 ಲಸಿಕೆ ಸ್ಟೋರ್:
ಈಗಾಗಲೇ ದೇಶದಲ್ಲಿ ಒಟ್ಟು 4 ಪ್ರಾಥಮಿಕ ಲಸಿಕಾ ಸ್ಟೋರ್‌ಗಳು ಕರ್ನಾಲ್, ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಇವೆ. ಇನ್ನು ಇತರ 37 ಲಸಿಕಾ ಸ್ಟೋರ್‌ಗಳೂ ಇರಲಿವೆ. ಇಲ್ಲಿ ಬೃಹತ್ ಪ್ರಮಾಣದಲ್ಲಿ ಲಸಿಕೆಗಳನ್ನು ಸಂಗ್ರಹಿಸಿ, ವಿವಿಧ ಕಡೆ ಪೂರೈಸಲಾಗುತ್ತದೆ. ಲಸಿಕೆಯ ಸಂಖ್ಯೆ ಹಾಗೂ ಅಲ್ಲಿರುವ ತಾಪಮಾನದ ಮೇಲೆ ಡಿಜಿಟಲ್ ವಿಧಾನದಲ್ಲಿ ನಿಗಾ ವಹಿಸಲಾಗುತ್ತದೆ ಎಂದರು.
ಈ ನಡುವೆ, ಸುದ್ದಿಗೋಷ್ಠಿಯಲ್ಲಿದ್ದ ನೀತಿ ಆಯೋಗ (ಆರೋಗ್ಯ ವಿಭಾಗ) ಸದಸ್ಯ ಡಾ| ವಿ.ಕೆ. ಪೌಲ್, ಎಲ್ಲ ವೈಜ್ಞಾನಿಕ ಪರಿಶೀಲನೆಗಳನ್ನು ನಡೆಸಿದ ಬಳಿಕವೇ ಲಸಿಕೆಗೆ ಅನುಮೋದನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಫ್ತಿಗಿಲ್ಲ ನಿರ್ಬಂಧ:
ಈ ನಡುವೆ, ಕೋವಿಡ್-19 ಲಸಿಕೆಯ ರಫ್ತಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ