
ಬೆಂಗಳೂರು (ಜೂ.17): ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ಮೊದಲ ‘ದಕ್ಷಿಣ ಭಾರತ ಉತ್ಸವ’ದಲ್ಲಿ ₹ 4200 ಕೋಟಿ ಮೊತ್ತದ ಹೂಡಿಕೆ ಒಪ್ಪಂದವಾಗಿದೆ. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಉತ್ಸವದಲ್ಲಿ ನಿರೀಕ್ಷೆ ಮೀರಿ ಬಂಡವಾಳ ಹರಿದುಬಂದಿದೆ. ಈ ಹೂಡಿಕೆ ಜೊತೆಗೆ ಇನ್ನಷ್ಟು ಹೆಚ್ಚಿನ ಮೊತ್ತದ ಹಣವನ್ನು ಪ್ರವಾಸೋದ್ಯಮ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರವಾಸಿ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದು ಕೇವಲ ಸರ್ಕಾರದಿಂದ ಅಸಾಧ್ಯ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯಿಂದ ಉದ್ದಿಮೆದಾರರು ಸಾಕಷ್ಟು ಪ್ರಯೋಜನ ಪಡೆಯಬಹುದು. ಪ್ರವಾಸೋದ್ಯಮ ಎಂದರೆ ಕೇವಲ ಲಕ್ಷುರಿ ಅಲ್ಲ, ಸಾಮಾನ್ಯರ ಪ್ರವಾಸೋದ್ಯಮಕ್ಕೂ ಸರ್ಕಾರ ಆದ್ಯತೆ ನೀಡುತ್ತದೆ. ಸರ್ಕಾರ ಜಾರಿಗೊಳಿಸಿದ ‘ಶಕ್ತಿ’ ಯೋಜನೆಯಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.50ರಷ್ಟು ರಷ್ಟು ಹೆಚ್ಚಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ಹೊಸತನ ಬೇಕು, ಬ್ಯಾನ್ ಮನಸ್ಥಿತಿ ಬಿಡಬೇಕು: ರವಿ ಹೆಗಡೆ
ಈ ಉತ್ಸವದ ಮೂಲಕ ದಕ್ಷಿಣ ಭಾರತ ರಾಜ್ಯಗಳ ಐತಿಹಾಸಿಕ, ಪಾರಂಪರಿಕ, ಧಾರ್ಮಿಕ ಪ್ರವಾಸಿ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ತೋರಿಸುವ ವೇದಿಕೆ ರೂಪುಗೊಂಡಿದೆ. ಎಲ್ಲರೂ ಜೊತೆಗೂಡಿ ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಕರೆ ನೀಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಪ್ರವಾಸೋದ್ಯಮ ಕ್ಷೇತ್ರವು ರಾಜ್ಯದ ಒಟ್ಟು ರಾಜ್ಯ ಆಂತರಿಕ ಉತ್ಪನ್ನಕ್ಕೆ 15 ಪ್ರತಿಶತಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ್ದು, ಸಾಕಷ್ಟು ಉದ್ಯೋಗಾವಕಾಶ ಒದಗಿಸಿದೆ. ಪ್ರವಾಸೋದ್ಯಮ ಆರ್ಥಿಕ ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿ ಪಸರಿಸುವಂತಿರಬೇಕು. ಕೇಂದ್ರ ಸರ್ಕಾರ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೊಳಿಸಿದೆ. ದಕ್ಷಿಣ ಭಾರತ ಪ್ರವಾಸೋದ್ಯಮದ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ವಿಶೇಷ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮಾತನಾಡಿ, ದಕ್ಷಿಣ ಭಾರತ ರಾಜ್ಯಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಕೈಗಾರಿಕೆ, ಕೃಷಿ ಬಳಿಕ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿ, ಹೂಡಿಕೆಯ ಅವಕಾಶವಿದೆ. ಮುಂದಿನ ದಿನಗಳಲ್ಲೂ ಎಫ್‌ಕೆಸಿಸಿಐ ವತಿಯಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡಲು ಆದ್ಯತೆ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಉದ್ದಿಮೆದಾರರಿಗೆ ರಾಜ್ಯಪಾಲರು ಹಾಗೂ ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ ಪಾಟೀಲ ಒಡಂಬಡಿಕೆಯ ಪತ್ರ ವಿತರಿಸಿದರು. ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯಾ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ವಿ. ರಾಮ್ ಪ್ರಸಾತ್ ಮನೋಹರ್ ಇದ್ದರು. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ನೆರೆಯ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಯಾರಿಂದ ಎಷ್ಟು ಹೂಡಿಕೆ?
- ಅವುಲ ಲಕ್ಞ್ಮೀನಾರಾಯಣ ರೆಡ್ಡಿ ಅವರ ಕಾರ್ತಿಕೇಯ ಗ್ಲೋಬಲ್ ಇಂಡಿಯಾ ಪ್ರೈ.ಲಿ. ಸಂಸ್ಥೆಯಿಂದ ರಾಜ್ಯದಲ್ಲಿ ₹1ಸಾವಿರ ಕೋಟಿ ವೆಚ್ಚದಲ್ಲಿ ಮಲ್ಟಿ ಥೀಮ್ಡ್ ಎಂಟರ್‌ಟೈನ್ಮೆಂಟ್ ಸಿಟಿ ಸ್ಥಾಪನೆ (5 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ).
- ಮೈಸೂರಿನಲ್ಲಿ ಸ್ಕೈಟಾಪ್ ಗಾಲ್ಫ್ ವಿಲೇಜ್ ಪ್ರೈ.ಲಿ. ಕಂಪನಿಯಿಂದ ₹650 ಕೋಟಿ ವೆಚ್ಚದಲ್ಲಿ ಗಾಲ್ಫ್‌ಕೋರ್ಸ್, ಕ್ಲಬ್‌ಹೌಸ್, 3 ಸ್ಟಾರ್ ಹೊಟೆಲ್‌ಗಳ ಸ್ಥಾಪನೆ.
- ಧರ್ಮಸ್ಥಳದಲ್ಲಿ ಡಾ. ಹರಿಕೃಷ್ಣ ಮಾರಮ್ ಅವರಿಂದ ₹150 ಕೋಟಿ ವೆಚ್ಚದಲ್ಲಿ ಗೋವಿನ ಉತ್ಪನ್ನ, ಇಕೋ ಟೂರಿಸಮ್ ಒಳಗೊಂಡ ಗೌವ್ಯಾಲಿ (1ಸಾವಿರ ಉದ್ಯೋಗ) ಸ್ಥಾಪನೆ.
- ಈಡನ್‌ಪಾರ್ಕ್ ರೆಸ್ಟೋರೆಂಟ್‌ನಿಂದ ₹ 324 ಕೋಟಿ ವೆಚ್ಚದಲ್ಲಿ ರೆಸ್ಟೋರೆಂಟ್, ಚೇತನ್ ಇಂಟರ್‌ನ್ಯಾಷನಲ್‌ನಿಂದ ಹೊಟೆಲ್‌ಗಾಗಿ ₹200 ಕೋಟಿ ಒಡಂಬಂಡಿಕೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯಿಂದ ಉದ್ದಿಮೆದಾರರು ಸಾಕಷ್ಟು ಪ್ರಯೋಜನ ಪಡೆಯಬಹುದು. ಪ್ರವಾಸೋದ್ಯಮ ಎಂದರೆ ಕೇವಲ ಲಕ್ಷುರಿ ಅಲ್ಲ, ಸಾಮಾನ್ಯರ ಪ್ರವಾಸೋದ್ಯಮಕ್ಕೂ ಸರ್ಕಾರ ಆದ್ಯತೆ ನೀಡುತ್ತದೆ. ಸರ್ಕಾರ ಜಾರಿಗೊಳಿಸಿದ ‘ಶಕ್ತಿ’ ಯೋಜನೆಯಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.50ರಷ್ಟು ರಷ್ಟು ಹೆಚ್ಚಾಗಿದೆ.
- ಎಚ್.ಕೆ.ಪಾಟೀಲ್, ಪ್ರವಾಸೋದ್ಯಮ ಸಚಿವ
ಶ್ರೀಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿ ತಾಣಗಳು ಕಾರ್ಯ ನಿರ್ವಹಿಸಬೇಕು: ನಾಗತಿಹಳ್ಳಿ ಚಂದ್ರಶೇಖರ್
ದಕ್ಷಿಣ ಭಾರತ ರಾಜ್ಯಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಕೈಗಾರಿಕೆ, ಕೃಷಿ ಬಳಿಕ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿ, ಹೂಡಿಕೆಯ ಅವಕಾಶವಿದೆ. ಮುಂದಿನ ದಿನಗಳಲ್ಲಿ ಎಫ್‌ಕೆಸಿಸಿಐ ವತಿಯಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡಲು ಆದ್ಯತೆ ನೀಡಲಿದೆ.
- ರಮೇಶ್ ಚಂದ್ರ ಲಹೋಟಿ, ಎಫ್‌ಕೆಸಿಸಿಐ ಅಧ್ಯಕ್ಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ