
ಲಿಂಗರಾಜು ಕೋರಾ
ಬೆಂಗಳೂರು(ಜು.20): ಕೊರೋನಾ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಗರದ ವೈದ್ಯರು ಹಾಗೂ ಇತರೆ ಆರೋಗ್ಯ ಸಿಬ್ಬಂದಿ ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ಇದರಿಂದ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ವ್ಯತ್ಯಯವಾಗುತ್ತಿದೆ.
ಮುಂಚೂಣಿ ಕೊರೋನಾ ವಾರಿಯರ್ಸ್ಗಳ ಸುರಕ್ಷತೆಗಾಗಿ ಸರ್ಕಾರ ಎನ್-95 ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಷ್ಟೆಲ್ಲಾ ಸುರಕ್ಷತಾ ಕ್ರಮಗಳ ನಡುವೆಯೂ ಕೋವಿಡ್ ವೈದ್ಯರು ಹಾಗೂ ಇತರೆ ಆರೋಗ್ಯ ಸಿಬ್ಬಂದಿಗೂ ಹಬ್ಬುತ್ತಿರುವುದು ಆತಂಕದ ವಿಷಯವಾಗಿದೆ.
ಲಾಕ್ಡೌನ್ ಇಲ್ಲದೆ ಕೊರೋನಾ ಮಣಿಸಿದ ಕತಾರ್: ಅನುಭವ ಬಿಚ್ಚಿಟ್ಟ ಮಂಗಳೂರಿನ ಪ್ರಖ್ಯಾತ್ ರಾಜ್ !
ನಗರದಲ್ಲಿ ಈವರೆಗೆ ಸುಮಾರು 410 ಮಂದಿಗೆ ವೈದ್ಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕೆ.ಸಿ.ಜನರಲ್ ಆಸ್ಪತ್ರೆಯ 69 ಮಂದಿ, ವಿಕ್ಟೋರಿಯಾ ಆಸ್ಪತ್ರೆಯ 70, ಕಿದ್ವಾಯಿ ಆಸ್ಪತ್ರೆ ಆಸ್ಪತ್ರೆಯ 40, ನಿಮ್ಹಾನ್ಸ್ ಆಸ್ಪತ್ರೆ ಹಾಗೂ ಪ್ರಯೋಗಾಲಯದ 100, ಬೌರಿಂಗ್ ಆಸ್ಪತ್ರೆ 20, ಜಯನಗರ ಜನರಲ್ ಆಸ್ಪತ್ರೆ 14, ಸಂಜಯ್‌ಗಾಂಧಿ ಆಸ್ಪತ್ರೆಯ 7, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ 12, ರಾಜಾಜಿನಗರರ ಇಎಸ್‌ಐ ಆಸ್ಪತ್ರೆ 11, ಸಿ.ವಿ.ರಾಮನ್ ಆಸ್ಪತ್ರೆಯ 8, ಕಮಾಂಡ್ ಹಾಗೂ ಎಚ್‌ಎಎಲ್ ಆಸ್ಪತ್ರೆಯ 10, ಇಂದಿರಾನಗರ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ 1, ಜಯದೇವ ಆಸ್ಪತ್ರೆಯ ಪ್ರಯೋಗಾಲಯದ 4 ಮಂದಿ ಸೇರಿದಂತೆ ಒಟ್ಟು 410 ಮಂದಿ ವೈದ್ಯರು, ಶುಶ್ರೂಷಕರು, ಸಹಾಯಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಸೋಂಕಿತರಾಗಿದ್ದಾರೆ.
ಸೋಂಕಿನ ಹಿನ್ನೆಲೆಯಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಸಹಜವಾಗಿ ಉಳಿದ ವೈದ್ಯರು, ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇತ್ತೀಚೆಗಷ್ಟೆನಗರದ ಕೆ.ಸಿ.ಜನರಲ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಅವರು ಭೇಟಿ ನೀಡಿದ್ದಾಗ ನರ್ಸ್‌ವೊಬ್ಬರು 100 ರೋಗಿಗಳಿಗೆ ಕೇವಲ ಇಬ್ಬರು ನರ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದೇವೆ. ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಹೇಳಿದ್ದರು.
ಗುಡ್ ನ್ಯೂಸ್: ಸಾವಿನ ದರ ಭಾರತದಲ್ಲೇ ಕಡಿಮೆ!
ಅರ್ಜಿ ಕರೆದರೂ ಬರುತ್ತಿಲ್ಲ ವೈದ್ಯಕೀಯ ಅಭ್ಯರ್ಥಿಗಳು
ಬೆಂಗಳೂರಿನ ಆಸ್ಪತ್ರೆಗಳಲ್ಲಿರುವ ವೈದ್ಯ ಸಿಬ್ಬಂದಿ ಕೊರತೆ ಸರಿದೂಗಿಸಲು ಸರ್ಕಾರ 300 ವೈದ್ಯರು, 600 ನರ್ಸ್‌ಗಳು ಸೇರಿದಂತೆ 1700 ಮಂದಿ ಸಿಬ್ಬಂದಿ ತಾತ್ಕಾಲಿಕ ನೇಮಕಕ್ಕೆ ಸರ್ಕಾರ ಬಿಬಿಎಂಪಿಗೆ ಈಗಾಗಲೇ ಆದೇಶ ಮಾಡಿದೆ. ಆದರೆ, ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ಉತ್ತೇಜಿಸಲು ಎಂಬಿಬಿಎಸ್ ವೈದ್ಯರ ಮಾಸಿಕ ಸಂಭಾವನೆಯನ್ನು .80 ಸಾವಿರ, ಬಿಡಿಎಸ್/ಆಯುಷ್ ವೈದ್ಯರಿಗೆ .60 ಸಾವಿರ, ಶುಶ್ರೂಷಕರಿಗೆ .30 ಸಾವಿರ, ಸಹಾಯಕರಿಗೆ .25 ಸಾವಿರ ಹಾಗೂ ಡಿ ಗ್ರೂಪ್ ನೌಕರರಿಗೆ .22 ಸಾವಿರಕ್ಕೆ ಹೆಚ್ಚಿಸಲು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ