ಚಿಕ್ಕಬಳ್ಳಾಪುರ: ಗುಲಾಬಿ ಈರುಳ್ಳಿಗೆ ಶೇ.40 ತೆರಿಗೆ: ಸಂಕಷ್ಟದಲ್ಲಿ ರೈತ!

By Kannadaprabha NewsFirst Published Aug 27, 2023, 11:35 PM IST
Highlights

  ಕೆಂದ್ರ ಸರ್ಕಾರದ ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟುಸುಂಕ ವಿಧಿಸಿದ್ದರಿಂದ ಚಿಕ್ಕಬಳ್ಳಾಪುರದ ಬೆಂಗಳೂರು ಗುಲಾಬಿ (ರೋಸ್‌) ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ.

-ದಯಾಸಾಗರ್‌ ಎನ್‌.

 ಚಿಕ್ಕಬಳ್ಳಾಪುರ (ಆ.27) :  ಕೆಂದ್ರ ಸರ್ಕಾರದ ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟುಸುಂಕ ವಿಧಿಸಿದ್ದರಿಂದ ಚಿಕ್ಕಬಳ್ಳಾಪುರದ ಬೆಂಗಳೂರು ಗುಲಾಭಿ (ರೋಸ್‌) ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ.

ಈರುಳ್ಳಿ ತಳಿಗಳಾದ ಅಗ್ರಿ ಫೌಂಡ್‌ ರೆಡ್‌ ರೋಸ್‌, ಅಗ್ರಿಪೌಂಡ್‌ ಲೈಟ್‌ರೆಡ್‌, ಬೆಂಗಳೂರು ಗುಲಾಬಿ, ಬಳ್ಳಾರಿ ರೆಡ್‌,ಅರ್ಕಾ ನಿಕೇತನ್‌, ಅರ್ಕಾ ಕಲ್ಯಾಣ, ಭೀಮಾಸೂಪರ್‌, ಪಂಚಗಂಗಾ, ಎನ್‌-53, ಹಾಗೂ ಅರ್ಕಾ ಪಿತಾಂಬರ್‌ಗಳನ್ನು ರಾಜ್ಯ ಮತ್ತು ದೇಶದ ಎಲ್ಲಡೆ ಬೇಳೆಯುತ್ತಾರೆ.

ಗಗನಕ್ಕೇರಿದ ಈರುಳ್ಳಿ ದರ: ಕಂಗಾಲಾದ ಗ್ರಾಹಕ..!

ಪೂರ್ವ ದೇಶಗಳಲ್ಲಿ ಮಾತ್ರ ಬೇಡಿಕೆ

ಆದರೆ ಬೆಂಗಳೂರು ರೋಸ್‌ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ತಳಿಗಳನ್ನು ಮಾತ್ರ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಈ ಎರಡು ತಳಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ, ಪೂರ್ವ ದೇಶಗಳಲ್ಲಿ ಈ ತಳಿಯ ಈರುಳ್ಳಿಗೆ ಬಲು ಬೇಡಿಕೆ ಇದೆ. ಈ ಹಿಂದೆ ಈರುಳ್ಳಿ ರಫ್ತಿಗೆ ನಿಷೇಧ ಅಥವಾ ರಫ್ತು ಸುಂಕ ಹೇರುವಾಗ ಗುಲಾಬಿ ಈರುಳ್ಳಿ ರಫ್ತಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಬಗೆಯ ಈರುಳ್ಳಿಗೆ ರಫ್ತಿನ ಮೇಲೆ ಶೇ. 40ರಷ್ಟುಸುಂಕ ಹೇರಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಗುಲಾಬಿ ಈರುಳ್ಳಿ (ಬೆಂಗಳೂರು ರೋಸ್‌ ಆನಿಯನ್‌) ರಫ್ತಿಗೂ ಈ ವರ್ಷ ಕೇಂದ್ರ ಸರ್ಕಾರ ಶೇ. 40ರಷ್ಟುಸುಂಕ ವಿಧಿಸಿದೆ. ಇದರ ಪರಿಣಾಮ ಕೊಲಂಬೊ ಮತ್ತು ಮಲೇಷ್ಯಾಗೆ ರಫ್ತಾಗಲು ಸಾಗಿಸಿದ್ದ ಬೆಂಗಳೂರು ರೋಸ್‌ ಈರುಳ್ಳಿ ಮೇಲೆ ಸುಂಕ ಹೆಚ್ಚಾಗಿದ್ದರಿಂದ ಮಾರುಕಟ್ಟೆಯಲ್ಲಿ ರೋಸ್‌ ಈರುಳ್ಳಿ ಖರೀದಿಸುವವರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಕೆಜಿಗೆ 10 ರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ, ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ಹಾಗೂ ಮಂಚೇನಹಳ್ಳಿ ಪ್ರದೇಶದ ಸುಮಾರು ಒಂದು ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಗುಲಾಬಿ ಈರುಳ್ಳಿ ಬೆಳೆಯಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 45-50 ಸಾವಿರ ಟನ್‌ಗಳಷ್ಟುಈರುಳ್ಳಿ ಬೆಳೆಯಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ರೋಸ್‌ ಈರುಳ್ಳಿ ರಫ್ತಿನಿಂದ ರೈತರಿಗೆ ಒಂದು ಕಿಲೋಗೆ ಸರಾಸರಿ 16-18 ರೂಪಾಯಿ ಸಿಗುತ್ತದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಇದಕ್ಕೆ ಇದಕ್ಕೆ 10 ರೂ.ಗಿಂತ ಕಡಿಮೆ ಲಭಿಸುತ್ತದೆ.

ಸಾಮಾನ್ಯ ಈರುಳ್ಳಿಯಲ್ಲಿ ಘಾಟಿನ ಪ್ರಮಾಣ ಶೇ. 3- 4ರಷ್ಟುಮೈಕ್ರೋ ಮೊಲಿಸ್‌, ಘನ ಪದಾರ್ಥ ಶೇ.8ರಿಂದ 10ರಷ್ಟಿರುತ್ತದೆ. ಗುಲಾಬಿ ಈರುಳ್ಳಿಯಲ್ಲಿ ಘಾಟಿನ ಪ್ರಮಾಣ ಶೇ. 8ರಿಂದ 10 ಹಾಗೂ ಘನ ಪದಾರ್ಥ ಶೇ.20ರಷ್ಟುಇರುತ್ತದೆ. ಅಧಿಕ ಖಾರದ (ಘಾಟು), ಹೆಚ್ಚು ನಾರಿನಾಂಶ ಹಾಗೂ ಗುಲಾಬಿ ಬಣ್ಣದ ಈರುಳ್ಳಿಯನ್ನು ಇಂಡೋನೇಷ್ಯಾದಲ್ಲಿ ಸಂರಕ್ಷಣೆ ಮಾಡುವುದರ ಜೊತೆಗೆ, ಬಾಟಲಿಗಳಲ್ಲಿ ತುಂಬಿ ಮಾರಲಾಗುತ್ತದೆ. ಗಾತ್ರದಲ್ಲಿ ಚಿಕ್ಕದಿರುವ ಈರುಳ್ಳಿಯನ್ನು ಉಪ್ಪಿನಕಾಯಿಗೂ ಬಳಸಲಾಗುತ್ತದೆ

ತೆರಿಗೆ ಪರಿಣಾಮ ಈರುಳ್ಳಿ ಖರೀದಿ ಸ್ಥಗಿತ

ಮಲೇಷ್ಯಾ ಮತ್ತು ವಿಯೆಟ್ನಾಂಗೆ ನಾವು ಪ್ರತಿ ದಿನ 100-150 ಟನ್‌ ರೋಸ್‌ ಈರುಳ್ಳಿಯನ್ನು ರಫ್ತು ಮಾಡುತ್ತಿದ್ದೆವು. ಇದೀಗ ರೋಸ್‌ ಈರುಳ್ಳಿ ಮೇಲೆ ಶೇ 40ರಷ್ಟುಸುಂಕ ಹೇರಿದ್ದರಿಂದ ನಾವು ಒಪ್ಪಿಕೊಂಡ ಬೆಲೆಗೆ ಹೊರದೇಶಗಳಿಗೆ ಮಾರಾಟ ಮಾಡಬೇಕು. ಆದರೆ ದರ ಹೆಚ್ಚು ಹೇಳಿದಾಗ ಅವರು ನಮಗೆ ಸರಕು ಬೇಡ ಎಂದಿದ್ದರಿಂದ ನಮಗೆ ವ್ಯಾಪಾರ ಇಲ್ಲ. ಹೀಗಾಗಿ ನಾವು ಖರೀದಿಸಲು ಹೋಗುತ್ತಿಲ್ಲ ಎನ್ನುತ್ತಾರೆ ರಫ್ತುದಾರ ಸ್ವಾಮಿನಾಥನ್‌.

ಐತಿಹಾಸಿಕ 2410 ರು.ಗೆ ಈರುಳ್ಳಿ ಖರೀದಿ: ಕೇಂದ್ರ ಸರ್ಕಾರ ಘೋಷಣೆ

ರೋಸ್‌ ಈರುಳ್ಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಕೆಜಿಗೆ 10ರೂಪಾಯಿಗೂ ಕಡಿಮೆ ಕೊಡುತ್ತಾರೆ. ರಫ್ತುಮಾಡಿದರೆ 16-18 ರೂ ದೊರೆಯುತ್ತದೆ. ಈಗ ಕೆಂದ್ರ ಸರ್ಕಾರದ ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟುಸುಂಕ ವಿಧಿಸಿದ್ದರಿಂದ ರಫ್ತುದಾರರು ನಮ್ಮ ಈರುಳ್ಳಿಯನ್ನು ಕೇಳುತ್ತಿಲ್ಲಾ ಹಾಗೂಮ್ಮೆ ಕೇಳಿದರೂ ಕಡಿಮೆ ಧರಕ್ಕೆ ಕೇಳುತ್ತಿದ್ದಾರೆ. ತೋಟಗಳಲ್ಲಿ ಫಸಲು ಕೈಗೆ ಬರುವ ಸಮಯವಾಗಿದೆ. ನಮಗೆ ಏನು ಮಾಡ ಬೇಕೆಂದು ತೋಚುತ್ತಿಲ್ಲಾ. ಕೇಂದ್ರ ಸರ್ಕಾರ ರೋಸ್‌ ಈರುಳ್ಳಿ ರಫ್ತಿಗೆ ಈ ಹಿಂದಿನಂತೆ ಮುಕ್ತ ಅವಕಾಶ ನೀಡಬೇಕೇಂದು ಈರುಳ್ಳಿ ಬೆಳೆಗಾರ ಮುನಿಕೃಷ್ಣ ಒತ್ತಾಯಿಸಿದ್ದಾರೆ.

click me!