₹40 ಲಕ್ಷ ವಹಿವಾಟಿಗೆ ದಾಖಲೆ ಕೊಟ್ರೆ ಸಾಕು: ವಾಣಿಜ್ಯ ತೆರಿಗೆ ಇಲಾಖೆ

Kannadaprabha News   | Kannada Prabha
Published : Jul 17, 2025, 06:03 AM IST
Commercial Tax Department

ಸಾರಾಂಶ

ವರ್ಷದಲ್ಲಿ 40 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಸ್ಪಷ್ಟಿಕರಣ ಕೇಳಿ ನೋಟಿಸ್‌ ನೀಡಲಾಗಿದ್ದು, ಸೂಕ್ತ ದಾಖಲೆ ವಿವರಣೆ ನೀಡಿದರೆ ಪ್ರಕರಣ ಮುಕ್ತಾಯಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ಹೇಳಿದ್ದಾರೆ.

ಬೆಂಗಳೂರು (ಜು.17): ಜನ, ವ್ಯಾಪಾರಿಗಳು ಆತಂಕಗೊಳ್ಳಬೇಕಾಗಿಲ್ಲ. ವರ್ಷದಲ್ಲಿ 40 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಸ್ಪಷ್ಟಿಕರಣ ಕೇಳಿ ನೋಟಿಸ್‌ ನೀಡಲಾಗಿದ್ದು, ಸೂಕ್ತ ದಾಖಲೆ ವಿವರಣೆ ನೀಡಿದರೆ ಪ್ರಕರಣ ಮುಕ್ತಾಯಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಎಸ್‌ಟಿ ಕಾಯ್ದೆಯಡಿ ಯಾವುದೇ ವ್ಯಾಪಾರಿ ಒಂದು ವರ್ಷದಲ್ಲಿ 40 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ನೋಟಿಸ್‌ ನೀಡಲಾಗಿದೆ ಎಂದರು.

ಕಳೆದ 2021 ರಿಂದ 2024 ವರೆಗೆ ಪ್ರತಿ ವರ್ಷ 40 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ನೋಟಿಸ್‌ ನೀಡಲಾಗಿದೆ. ಇದು ಸ್ಪಷ್ಟೀಕರಣ ಕೇಳಿ ನೀಡಿರುವ ನೋಟಿಸ್ ಆಗಿದ್ದು, ಯುಪಿಐ ಮೂಲಕ ಪಾವತಿಯಾದ ಹಣದ ಆಧಾರದಲ್ಲಿ ನೋಟಿಸ್‌ ನೀಡಿಲ್ಲ. ಬ್ಯಾಂಕ್‌ ದಾಖಲೆಗಳ ಆಧಾರದಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಯಾವ ವ್ಯಾಪಾರ ವಹಿವಾಟಿನಿಂದ ಪ್ರತಿ ವರ್ಷ 40 ಲಕ್ಷ ರು. ವಹಿವಾಟು ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟಿಕರಣ ಬೇಕಾಗಿದೆ. ವ್ಯಾಪಾರ ಮಾಡಿ ಸರಕು ಜಿಎಸ್‌ಟಿ ಅಡಿ ಬಾರದಿದ್ದರೆ ಅದಕ್ಕೆ ಸೂಕ್ತ ವಿವರಣೆ ನೀಡಬೇಕಿದೆ. ಒಂದು ವೇಳೆ ಜಿಎಸ್‌ಟಿ ಅಡಿ ಬಂದರೆ, ವಾಣಿಜ್ಯ ತೆರಿಗೆ ಇಲಾಖೆ ಪ್ರಕರಣವನ್ನು ಮುಕ್ತಾಯಗೊಳಿಸಲಿದೆ ಎಂದು ತಿಳಿಸಿದರು.

ಹೂ, ಹಣ್ಣು, ಹಾಲು ಸೇರಿ ಮೊದಲಾದವು ಜಿಎಸ್‌ಟಿಯಿಂದ ಹೊರಗೆ ಉಳಿದಿದ್ದು, ಅಂತಹ ವ್ಯಾಪಾರಿಗಳು ಸ್ಪಷ್ಟೀಕರಣ ನೀಡಬಹುದು. ಸರಕು ಖರೀದಿ ವೇಳೆ ಜಿಎಸ್‌ಟಿ ಪಾವತಿ ಮಾಡಿದ್ದರೆ ಮಾರಾಟದಲ್ಲಿ ಜಿಎಸ್‌ಟಿ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಅದಕ್ಕೆ ಪೂರಕ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಒದಗಿಸಬೇಕಾಗಲಿದೆ ಎಂದರು. ಯುಪಿಐ ಬಂದ್‌ ಮಾಡುವುದು ಇದಕ್ಕೆ ಪರಿಹಾರವಲ್ಲ. ಸಾರ್ವಜನಿಕರು ಹಣ ಪಾವತಿ ಮಾಡುವುದಕ್ಕೆ ಯುಪಿಐ ಸುಲಭ ಮತ್ತು ಸರಳ ವಿಧಾನ ಎಂದು ಅರಿತುಕೊಂಡಿದ್ದಾರೆ. ನೋಟಿಸ್‌ ನೀಡುತ್ತಿರುವುದು ಮುಂದಿನ ದಿನಗಳಲ್ಲಿ ಸರಿಯಾದ ತೆರಿಗೆ ಸಂಗ್ರಹಿಸುವುದು ಇದರ ಮುಖ್ಯ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ 25ರಂದು ವ್ಯಾಪಾರಿಗಳ ಬಂದ್‌: ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದ ಬೇಕರಿ, ಕಾಂಡಿಮೆಂಟ್ಸ್​ ಮತ್ತು ಇತರ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದನ್ನು ಖಂಡಿಸಿ ಜು.25ರಂದು ಸ್ವಾತಂತ್ರ್ಯಉದ್ಯಾನದಲ್ಲಿ ಕುಟುಂಬ ಸಮೇತ ಹೋರಾಟ ನಡೆಸಲು ಸಣ್ಣ ವ್ಯಾಪಾರಿಗಳು ಮುಂದಾಗಿದ್ದಾರೆ. ಏಕಾಏಕಿ ನೋಟಿಸ್ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾಂಡಿಮೆಂಟ್ಸ್, ಬೇಕರಿ ಅಂಗಡಿಕಾರರು, ತರಕಾರಿ, ಮಾಂಸ, ಸಣ್ಣ ಪ್ರಮಾಣದ ಎಲೆಕ್ಟ್ರಾನಿಕ್‌ ಸೇರಿ ಬೀದಿಬದಿ ವ್ಯಾಪಾರಸ್ಥರು ಹೋರಾಟಕ್ಕೆ ತೀರ್ಮಾನಿಸಿದ್ದಾರೆ.

ಜು.23ರಿಂದಲೇ ಹಾಲು ಮಾರಾಟ, ಜು.24ರಿಂದ ಗುಟ್ಕಾ ಸಿಗರೇಟ್‌ ವ್ಯಾಪಾರ ಬಂದ್‌ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯೋಚನೆಯೂ ಇದೆ. ಜು.25ರಂದು ಕಾಂಡಿಮೆಂಟ್ಸ್, ಬೇಕರಿ ಹಾಗೂ ಸಣ್ಣ ಪುಟ್ಟ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಸ್ವಾತಂತ್ರ್ಯಉದ್ಯಾನದಲ್ಲಿ ಕುಟುಂಬ ಸಮೇತ ಹೋರಾಟ ನಡೆಸುವುದಾಗಿ ರಾಜ್ಯ ಕಾರ್ಮಿಕ ಪರಿಷತ್‌ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌