ವಿಧಾನ ಪರಿಷತ್ ಸ್ಥಾನಕ್ಕೆ ತೀವ್ರ ಪೈಪೋಟಿ; 4 ಎಂಎಲ್‌ಸಿ ಹುದ್ದೆಗಾಗಿ 40 ಕಾಂಗ್ರೆಸ್ಸಿಗರಿಂದ ಲಾಬಿ!

Published : Apr 01, 2025, 07:32 AM ISTUpdated : Apr 01, 2025, 07:34 AM IST
ವಿಧಾನ ಪರಿಷತ್ ಸ್ಥಾನಕ್ಕೆ ತೀವ್ರ ಪೈಪೋಟಿ; 4 ಎಂಎಲ್‌ಸಿ ಹುದ್ದೆಗಾಗಿ 40 ಕಾಂಗ್ರೆಸ್ಸಿಗರಿಂದ ಲಾಬಿ!

ಸಾರಾಂಶ

ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ. ತೆರವಾದ ಸ್ಥಾನಗಳನ್ನು ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆ ಇದ್ದು, ಪ್ರಮುಖ ನಾಯಕರು ಲಾಬಿ ನಡೆಸುತ್ತಿದ್ದಾರೆ.

ಬೆಂಗಳೂರು (ಏ.1): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.2ರಂದು ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ತೆರಳಲು ಅನುವಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ವಿಧಾನಪರಿಷತ್‌ ಸ್ಥಾನಾಕಾಂಕ್ಷಿಗಳ ಲಾಬಿ ಮೇರೆ ಮೀರಿದೆ. ಲಭ್ಯವಿರುವ ನಾಲ್ಕು ಸ್ಥಾನಗಳಿಗೆ 40ಕ್ಕೂ ಹೆಚ್ಚು ಮಂದಿ ಪೈಪೋಟಿ ನಡೆಸಿದ್ದಾರೆ.

ವಿವಿಧ ಕ್ಷೇತ್ರದ ಸಾಧಕರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಲು ನಾಲ್ಕು ಸ್ಥಾನ ಲಭ್ಯವಿದೆ. ಸಿ.ಪಿ.ಯೋಗೇಶ್ವರ್‌ (ಒಕ್ಕಲಿಗ), ಪ್ರಕಾಶ್‌ ರಾಠೋಡ್ (ಎಸ್‌ಸಿ), ಕೆ.ಎಂ.ತಿಪ್ಪೇಸ್ವಾಮಿ (ಹಿಂದುಳಿದ) ಹಾಗೂ ಯು.ಬಿ.ವೆಂಕಟೇಶ್‌ (ಬ್ರಾಹ್ಮಣ) ಅವರ ಅವಧಿ ಪೂರ್ಣಗೊಂಡ ಕಾರಣಕ್ಕೆ ತೆರವಾಗಿರುವ ಸ್ಥಾನಗಳಿವು.
ಕಾಂಗ್ರೆಸ್‌ ನಾಯಕತ್ವ ಈ ಸ್ಥಾನಗಳನ್ನು ಬಹುತೇಕ ಯಾವ ಸಮುದಾಯದಿಂದ ತೆರವಾಗಿದೆಯೋ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದಾಗಿ ಒಕ್ಕಲಿಗ, ಎಸ್‌ಸಿ (ಬಲಗೈ), ಹಿಂದುಳಿದ ವರ್ಗ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಈ ಸ್ಥಾನ ಲಭ್ಯವಾಗಬೇಕು. ಆದರೆ, ಬ್ರಾಹ್ಮಣ ಸಮುದಾಯದ ಬದಲಾಗಿ ಅಲ್ಪಸಂಖ್ಯಾತ ಸಮುದಾಯ ವಿಶೇಷವಾಗಿ, ಕ್ರಿಶ್ಚಿಯನ್‌ ಸಮುದಾಯಕ್ಕೆ ಆ ಸ್ಥಾನ ನೀಡಬಹುದೇ ಎಂಬ ಚಿಂತನೆಯೂ ಇದೆ ಎನ್ನಲಾಗಿದೆ.

ಈ ಸುಳಿವಿನ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ ಸೇರಿದ ನಾಯಕರು ಸ್ಥಾನ ಪಡೆಯಲು ತೀವ್ರ ಪೈಪೋಟಿ ಆರಂಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಎಡತಾಕುತ್ತಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್ ಯತ್ನ; ಇಂದು ರಾಜಣ್ಣ ವಿಚಾರಣೆ? ಹಬ್ಬದ ನಂತರ ಬರುವೆ ಎಂದಿದ್ದ ಸಚಿವ

ಬಿ.ಎಲ್‌.ಶಂಕರ್‌, ಸ್ಟಾರ್ ಚಂದ್ರ ಸೇರಿ ಹಲವರು:

ಒಕ್ಕಲಿಗ ಸಮುದಾಯಕ್ಕೆ ಈ ಬಾರಿ ಹುದ್ದೆ ದೊರೆಯುವುದು ಖಚಿತವಾಗಿದ್ದು, ಈ ಕೋಟಾದಲ್ಲಿ ಹಿರಿಯ ನಾಯಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌ ಅವರ ಹೆಸರು ಪ್ರಧಾನವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಬ್ಬರೂ ಈ ಬಾರಿ ಶಂಕರ್‌ ಪರ ಇದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ, ಮಂಡ್ಯದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಹೆಸರು ಕೂಡ ಪ್ರಮುಖವಾಗಿ ಕೇಳಿ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‌ನ ಮುಖ್ಯಸ್ಥ ಕುಮಾರಸ್ವಾಮಿ ಅವರೊಂದಿಗೆ ಸ್ಟಾರ್ ಚಂದ್ರು ಹಣಾಹಣಿ ನಡೆಸಿದ್ದರು. ಅಲ್ಲದೆ, ಕಾಂಗ್ರೆಸ್‌ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾಂಗ್ರೆಸ್‌ ಕಚೇರಿ ನಿರ್ಮಾಣ ಮಾಡಲು ಹೊರಟಿದ್ದು, ಚಂದ್ರು ಅವರ ಮಾಲೀಕತ್ವದ ಸಂಸ್ಥೆಯು ಕಾವೇರಿ ಕೊಳ್ಳದ 14 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಕಚೇರಿ ನಿರ್ಮಾಣ ಮಾಡಲು ಸಜ್ಜಾಗಿದೆ. ಹೀಗಾಗಿ ಅವರನ್ನು ಪರಿಷತ್ತಿಗೆ ಪರಿಗಣಿಸಬೇಕು ಎಂದು ಚಂದ್ರು ಪರವಾಗಿ ಕೆಲ ನಾಯಕರು ವರಿಷ್ಟರ ಬಳಿ ಲಾಬಿ ನಡೆಸಿದ್ದಾರೆ.
ಇವರಲ್ಲದೆ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌, ಡಿ.ಕೆ.ಶಿವಕುಮಾರ್‌ ಅವರ ಆಪ್ತ ವಿನಯ ಕಾರ್ತಿಕ್ ಹಾಗೂ ಆರತಿ ಕೃಷ್ಣ ಅವರು ತೀವ್ರ ಪೈಪೋಟಿ ನಡೆಸಿದ್ದಾರೆ.

ಹಿಂದುಳಿದ ವರ್ಗದ ಕೋಟಾದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್‌ ಹಾಗೂ ಮಾಜಿ ಸಚಿವ ಎಚ್‌.ಎಂ.ರೇವಣ್ಣ ತೀವ್ರ ಪೈಪೋಟಿ ನಡೆಸಿದ್ದಾರೆ. ಇವರಲ್ಲದೆ, ಕೆಪಿಸಿಸಿ ವಕ್ತಾರ ರಮೇಶ್‌ ಬಾಬು, ವಿ.ಎಸ್. ಉಗ್ರಪ್ಪ, ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ಸೂರಜ್ ಹೆಗ್ಡೆ, ಮಾಜಿ ಮೇಯರ್‌ ಪಿ.ಆರ್‌. ರಮೇಶ್‌ ಅವರು ಕೂಡ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪರಿಶಿಷ್ಟರಲ್ಲಿ ಈ ಬಾರಿ ಬಲಗೈ ಸಮುದಾಯಕ್ಕೆ ವಿಧಾನಪರಿಷತ್‌ ಹುದ್ದೆ ಒಲಿಯಲಿದೆ. ಈ ಹುದ್ದೆಗಾಗಿ ರಾಜು ಅಲಗೂರು, ಬೋವಿ ಸಮುದಾಯದ ಡಿ.ಬಸವರಾಜ, ಪತ್ರಕರ್ತ ಶಿವಕುಮಾರ್, ಬಲರಾಜ್ ನಾಯಕ್‌, ಕಾಂತಾ ನಾಯಕ್‌, ಪುಷ್ಪಾ ಅಮರನಾಥ್‌ ತೀವ್ರ ಪೈಪೋಟಿ ನಡೆಸಿದ್ದಾರೆ.

ಇನ್ನು, ಬ್ರಾಹ್ಮಣ ಸಮುದಾಯದಿಂದ ಯು.ಬಿ.ವೆಂಕಟೇಶ್‌ ಅವರು ತಮ್ಮ ಮುಂದುವರಿಕೆಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿರುವ ವೆಂಕಟೇಶ್‌ ಅವರು, ಆ ಮಾರ್ಗದಲ್ಲೇ ತೀವ್ರ ಲಾಬಿ ನಡೆಸಿದ್ದಾರೆ. ಇದೇ ಸಮುದಾಯದಿಂದ ಡಿ.ಕೆ.ಶಿವಕುಮಾರ್‌ ಅವರ ಆಪ್ತರಾದ ವಿಜಯ ಮುಳಗುಂದ್ ಹಾಗೂ ರತ್ನಪ್ರಭ ಅವರು ಪ್ರಯತ್ನ ನಡೆಸಿದ್ದಾರೆ.

ಇದನ್ನೂ ಓದಿ: ರಾಜಣ್ಣ ಪುತ್ರನ ಹತ್ಯೆ ಯತ್ನ, ಸುಪಾರಿ ಸೂತ್ರದಾರ ಯಾರು? ಸಿಎಂಗೆ ಆಪ್ತರಾಗಿದ್ದಕ್ಕೆ ಜೀವಕ್ಕೆ ಆಪತ್ತು.. ಏನಿದರ ಸೀಕ್ರೆಟ್?

ಕಾಂಗ್ರೆಸ್ ಮೂಲಗಳ ಪ್ರಕಾರ, ಈ ಬಾರಿ ಬ್ರಾಹ್ಮಣ ಸಮುದಾಯದ ಬದಲಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಚಿಂತನೆಯನ್ನೂ ಹೈಕಮಾಂಡ್‌ ಹೊಂದಿದೆ. ಈ ಸುಳಿವು ಇರುವ ಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯದಿಂದ ಸಾಧು ಕೋಕಿಲ (ಕ್ರಿಶ್ಚಿಯನ್‌), ಅಘಾ ಸುಲ್ತಾಲ್‌ ಹಾಗೂ ಸಯ್ಯದ್ ಅವರೂ ಪ್ರಯತ್ನ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌