ಹನಿಟ್ರ್ಯಾಪ್ ಯತ್ನ; ಇಂದು ರಾಜಣ್ಣ ವಿಚಾರಣೆ? ಹಬ್ಬದ ನಂತರ ಬರುವೆ ಎಂದಿದ್ದ ಸಚಿವ

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಹನಿಟ್ರ್ಯಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಯುಗಾದಿ ರಜೆ ಬಳಿಕ ಸಚಿವರ ಹೇಳಿಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.


ಬೆಂಗಳೂರು (ಏ.1): ಹನಿಟ್ರ್ಯಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ಮಂಗಳವಾರ ಅಥವಾ ಬುಧವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಯುಗಾದಿ ಹಾಗೂ ರಂಜಾನ್ ಹಬ್ಬಗಳ ರಜೆ ಹಿನ್ನೆಲೆಯಲ್ಲಿ ತುಸು ವಿರಾಮ ಕೊಟ್ಟಿದ್ದ ಸಿಐಡಿ ಅಧಿಕಾರಿಗಳು, ಮಂಗಳವಾರದಿಂದ ಸಹಕಾರ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ಯತ್ನ ಪ್ರಕರಣದ ವಿಚಾರಣೆಗೆ ಮತ್ತೆ ಚುರುಕು ನೀಡಲಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಸಚಿವರನ್ನು ಮಂಗಳವಾರ ಅಥವಾ ಬುಧವಾರ ವಿಚಾರಣೆಗೊಳಪಡಿಸಲು ಯೋಜಿಸಿದ್ದಾರೆ.

ಯುಗಾದಿ ಹಬ್ಬಕ್ಕೂ ಮುನ್ನವೇ ಸಚಿವರಿಂದ ಹೇಳಿಕೆ ಪಡೆಯಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಹಬ್ಬದ ಕಾರಣಕ್ಕಾಗಿ ಸಚಿವರು ಕಾಲಾವಕಾಶ ಕೋರಿದ್ದರು. ಹೀಗಾಗಿ, ದೂರುದಾರರಾಗಿರುವ ಸಚಿವರ ಹೇಳಿಕೆ ಇಲ್ಲದೆ ವಿಚಾರಣೆ ಮುಂದುವರಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರಿಂದ ಘಟನೆ ಕುರಿತು ವಿವರಣೆ ಪಡೆದು, ಬಳಿಕ ಮುಂದಿನ ಹಂತದ ಕಾನೂನು ಕ್ರಮದ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

Latest Videos

ಇದನ್ನೂ ಓದಿ: ರಾಜಣ್ಣ ಪುತ್ರನ ಹತ್ಯೆ ಯತ್ನ, ಸುಪಾರಿ ಸೂತ್ರದಾರ ಯಾರು? ಸಿಎಂಗೆ ಆಪ್ತರಾಗಿದ್ದಕ್ಕೆ ಜೀವಕ್ಕೆ ಆಪತ್ತು.. ಏನಿದರ ಸೀಕ್ರೆಟ್?

ಪ್ರಕರಣ ಸಂಬಂಧ ಈಗಾಗಲೇ ಬೆಂಗಳೂರಿನ ಸಚಿವರ ಸರ್ಕಾರಿ ಅಧಿಕೃತ ನಿವಾಸ, ಮಧುಗಿರಿ ಪಟ್ಟಣದ ಅವರ ಕ್ಷೇತ್ರದ ಗೃಹ ಕಚೇರಿ ಹಾಗೂ ತುಮಕೂರಿನ ಕ್ಯಾತಸಂದ್ರದಲ್ಲಿರುವ ಖಾಸಗಿ ನಿವಾಸಗಳಿಗೆ ಭೇಟಿ ನೀಡಿ, ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿ, ಸಿಐಡಿ ತಂಡಗಳು ಮಾಹಿತಿ ಕಲೆ ಹಾಕಿವೆ.

ಸಂದರ್ಶಕರ ಪುಸ್ತಕದಲ್ಲಿ ಸಿಗದ ‘ಹನಿ’ ಮಾಹಿತಿ?

ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಸಚಿವರ ಸರ್ಕಾರಿ ನಿವಾಸದ ಸಂದರ್ಶಕರ ಪುಸ್ತಕದಲ್ಲಿ ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ಯತ್ನಿಸಿದ್ದವರ ಕುರಿತು ಸಿಐಡಿಗೆ ಖಚಿತ ಮಾಹಿತಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸಚಿವ ರಾಜಣ್ಣನವರ ಸರ್ಕಾರಿ ನಿವಾಸಕ್ಕೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಸಚಿವರ ಭೇಟಿಗೆ ಆಗಮಿಸುವವರ ಮಾಹಿತಿ ಪಡೆಯಲು ಆ ನಿವಾಸದ ಪ್ರವೇಶದ್ವಾರದಲ್ಲಿ ಸಂದರ್ಶಕರ ನೋಂದಣಿ ಪುಸಕ್ತ ಇಡಲಾಗಿದೆ. ಆದರೆ, ಆ ಪುಸ್ತಕ ಕಾಟಾಚಾರಕ್ಕೆ ನಿರ್ವಹಣೆ ಆಗಿದ್ದು, ಬಹುತೇಕ ಸಂದರ್ಶಕರು ಹೆಸರು ಬರೆಯದೆ ನೇರವಾಗಿ ಸಚಿವರನ್ನು ಭೇಟಿಯಾಗಿ ತೆರಳಿದ್ದಾರೆ. ಹೀಗಾಗಿ, ಸಂದರ್ಶಕರ ಪುಸ್ತಕದಲ್ಲಿ ಹನಿಟ್ರ್ಯಾಪ್ ಯತ್ನ ತಂಡದ ಸದಸ್ಯರ ಬಗ್ಗೆ ಸಿಐಡಿಗೆ ಮಾಹಿತಿ ಖಚಿತವಾಗಿ ಲಭಿಸಿಲ್ಲ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್‌: ವಿಚಾರಣೆಗೆ ಕರೆದರೆ ಯುಗಾದಿ ಹಬ್ಬದ ಬಳಿಕ ಬರುವೆ ಎಂದ ಸಚಿವ ರಾಜಣ್ಣ

ತಮ್ಮ ಸರ್ಕಾರಿ ನಿವಾಸಕ್ಕೆ ನೀಲಿ ಬಣ್ಣದ ಜೀನ್ಸ್ ಧರಿಸಿದ್ದ ಮಹಿಳೆಯರು ಹಾಗೂ ಓರ್ವ ಪುರುಷ ಬಂದಿದ್ದಾಗಿ ಸುದ್ದಿಗೋಷ್ಠಿಯಲ್ಲಿ ಸಚಿವ ರಾಜಣ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ವಿಚಾರಣೆಗಿಳಿದ ಸಿಐಡಿಗೆ ನೀಲಿ ದಿರಿಸಿನ ಮಹಿಳೆಯರ ಜಾಡು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ

click me!