ಅಕ್ರಮ ನೇಮಕಾತಿ: ಮತ್ತೆ 4 ಶಿಕ್ಷಕರ ಬಂಧನ

By Kannadaprabha News  |  First Published Dec 14, 2022, 12:30 PM IST

ವಿಜಯಪುರ, ಕೆಜಿಎಫ್‌, ಮಾಗಡಿ, ಹೊಸಕೋಟೆಯಲ್ಲಿ ಬಂಧನ, ಇದರೊಂದಿಗೆ ಬಂಧಿತರ ಸಂಖ್ಯೆ 64ಕ್ಕೇರಿಕೆ,  ಇನ್ನಷ್ಟು ಶಿಕ್ಷಕರು, ಶಿಕ್ಷಣ ಇಲಾಖೆ ಸಿಬ್ಬಂದಿಗೆ ಬಲೆಗೆ 


ಬೆಂಗಳೂರು(ಡಿ.14):  2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಮತ್ತೆ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನಾಲ್ವರು ಪ್ರೌಢಶಾಲಾ ಶಿಕ್ಷಕರನ್ನು ರಾಜ್ಯ ಅಪರಾಧ ತನಿಖಾ ದಳವು (ಸಿಐಡಿ) ಸೆರೆ ಹಿಡಿದಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 64ಕ್ಕೇರಿದ್ದು, ಇದೇ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಮತ್ತೆ ಕೆಲವು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಹಾಲಿ ಹಾಗೂ ಮಾಜಿ ಅಧಿಕಾರಿಗಳ ಪತ್ತೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆಸಿದೆ.

ವಿಜಯಪುರ ಜಿಲ್ಲೆ ಕಪನಿಂಬರಗಿ ಜಿಎಚ್‌ಎಸ್‌ ಶಾಲೆಯ ಪ್ರತಾಪ್‌ ಸಿಂಗ್‌, ಕೋಲಾರ ಜಿಲ್ಲೆ ಕೆಜಿಎಫ್‌ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಸೋಮನಗೌಡ ಪಾಟೀಲ್‌, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ವಿ.ಜಯಪ್ಪ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೊರಟಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಟಿ.ಯೋಗೇಶಪ್ಪ ಬಂಧಿತರಾಗಿದ್ದು, ನಾಲ್ಕು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಬಂಧಿಸಿದ್ದ ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ಸಿಐಡಿ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿತು. ಬಳಿಕ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ ಅಧಿಕಾರಿಗಳು, ನ್ಯಾಯಾಲಯದ ಆದೇಶದ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂಧಿತ ಶಿಕ್ಷಕರನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

Tap to resize

Latest Videos

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ; ಮತ್ತೆ ನಾಲ್ವರ ಬಂಧನ ಬಂಧಿತರ ಸಂಖ್ಯೆ 33ಕ್ಕೆ ಏರಿಕೆ!

ಬಂಧನದ ಮುನ್ಸೂಚನೆ ಇತ್ತು:

ಈ ಬಂಧಿತರ ಪೈಕಿ ಚಿತ್ರದುರ್ಗ ಜಿಲ್ಲೆಯಲ್ಲಿ ನೇಮಕಗೊಂಡಿದ್ದ ಪ್ರತಾಪ್‌, ಪ್ರಸುತ್ತ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನಿಯೋಜಿತಗೊಂಡಿದ್ದ ಜಯಪ್ಪ, ಈಗ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದ. ಇನ್ನುಳಿದ ಇಬ್ಬರು ತಾವು ನೇಮಕಗೊಂಡ ಜಿಲ್ಲೆಯಲ್ಲಿ ಕರ್ತವ್ಯದಲ್ಲಿ ಮುಂದುವರೆದಿದ್ದರು. ನೇಮಕಾತಿ ಅಕ್ರಮದ ಬೆಳಕಿಗೆ ಬಂದು ತಮ್ಮ ಸಹವರ್ತಿಗಳು ಸಿಐಡಿ ಬಲೆಗೆ ಬಿದ್ದಾಗಲೇ ಈ ಆರೋಪಿಗಳಿಗೆ ಆತಂಕ ಮೂಡಿತ್ತು ಎನ್ನಲಾಗಿದೆ.

ಆಂತರಿಕ ವಿಚಾರಣೆಯಲ್ಲಿ ಅಕ್ರಮ ಸಾಬೀತು:

2012-13 ಹಾಗೂ 2014-15ನೇ ಸಾಲಿನ ಶಿಕ್ಷಕರ ನೇಮಕಾತಿ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಹಾಗೂ ಹಲಸೂರು ಗೇಟ್‌ ಪೊಲೀಸ್‌ ಠಾಣೆಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ದೂರಿನ ಮೇರೆಗೆ ಎಫ್‌ಐಆರ್‌ಗಳು ದಾಖಲಾಗಿವೆ. ಬಳಿಕ ಪ್ರಕರಣದ ತನಿಖೆಯನ್ನು ಸರ್ಕಾರವು ಸಿಐಡಿಗೆ ಒಪ್ಪಿಸಿತ್ತು. ಈ ಹಗರಣದ ಕುರಿತು ಶಿಕ್ಷಣ ಇಲಾಖೆ ನಡೆಸಿದ ಇಲಾಖಾ ಮಟ್ಟದ ಆಂತರಿಕ ವಿಚಾರಣೆಯಲ್ಲಿ ಬಂಧಿತ ನಾಲ್ವರ ಅಕ್ರಮವು ಬೆಳಕಿಗೆ ಬಂದಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಬಂಧಿತನಾಗಿದ್ದ ಬೆಂಗಳೂರು ವಲಯದ ಸಾರ್ವಜನಿಕ ಶಿಕ್ಷಣ ಜಂಟಿ ನಿರ್ದೇಶಕ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಸಾದ್‌ ವಿಚಾರಣೆ ನೀಡಿದ್ದ ಮಾಹಿತಿ ಸಹ ಆರೋಪಿಗಳಿಗೆ ಕುತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!