Assembly: ಠೇವಣಿದಾರರ ರಕ್ಷಣೆ ಸೇರಿ 4 ವಿಧೇಯಕ ಮಂಡನೆ

By Kannadaprabha NewsFirst Published Sep 14, 2022, 4:53 AM IST
Highlights
  • ಠೇವಣಿದಾರರ ರಕ್ಷಣೆ ಸೇರಿ 4 ವಿಧೇಯಕ ಮಂಡನೆ
  • ಠೇವಣಿದಾರರಿಗೆ ವಂಚನೆ ಕೇಸ್‌ ಇನ್ನು ಜಾಮೀನು ರಹಿತ
  • ಹಲವೆಡೆ ವಂಚನೆ ಕೇಸು ದಾಖಲಾದರೆ ಒಂದೆಡೆ ವಿಲೀನ

ವಿಧಾನಸಭೆ (ಸೆ.14) : ಹಣಕಾಸು ಸಂಸ್ಥೆಗಳ ವಂಚನೆಗಳಿಂದ ಠೇವಣಿದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಹಣಕಾಸಿನ ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಯಿತು.

Karnataka Budget: ಬೊಮ್ಮಾಯಿ ಚೊಚ್ಚಲ ಬಜೆಟ್‌ಗೆ ವಿಧಾನ ಮಂಡಲದ ಅಂಗೀಕಾರ

ಸದನದಲ್ಲಿ ಕರ್ನಾಟಕ ಹಣಕಾಸಿನ ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ರೇಷ್ಮೆ ಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ವಿನಿಮಯ) (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ ಮಂಡಿಸಲಾಯಿತು.

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಸೇರಿದಂತೆ ಹಣಕಾಸು ಸಂಸ್ಥೆಗಳ ವಂಚನೆಗಳಿಂದ ಠೇವಣಿದಾರರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಣಕಾಸಿನ ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ(ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು. ಠೇವಣಿದಾರರಿಗೆ ವಂಚನೆ ಮಾಡುವ ಬ್ಯಾಂಕ್‌, ಸಂಸ್ಥೆಗಳ ಮುಖ್ಯಸ್ಥರು, ನಿರ್ದೇಶಕರ ವಿರುದ್ಧ ಪ್ರಕರಣಗಳಲ್ಲಿನ ಅಪರಾಧವು ಇನ್ನು ಮುಂದೆ ಜಾಮೀನು ರಹಿತ ಎಂದು ಪರಿಗಣಿಸಲಾಗುವುದು. ಒಂದು ಹಣಕಾಸು ಸಂಸ್ಥೆಯ ವಿರುದ್ಧ ಹಲವು ಕಡೆ ಎಫ್‌ಐಆರ್‌ ದಾಖಲಾಗಿದ್ದರೆ, ಅದನ್ನು ಒಂದೇ ಪ್ರಕರಣವಾಗಿ ವಿಲೀನಗೊಳಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣ ಕುರಿತು ತನಿಖೆ ನಡೆಸಲು ಆದೇಶಿಸಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಅಂಶ ವಿಧೇಯಕದಲ್ಲಿದೆ. ಅಲ್ಲದೇ, ಹಣಕಾಸು ಸಂಸ್ಥೆಗಳ ವಿರುದ್ಧ ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಮೊಕದ್ದಮೆ ದಾಖಲಾಗಿದ್ದರೆ, ಹೈಕೋರ್ಚ್‌ ಸಹಮತದೊಂದಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ:

ಅನಧಿಕೃತ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಕೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಒಂದು ವರ್ಷ ಕಾಲ ವಿಸ್ತರಿಸುವ ಸಂಬಂಧ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವ ಆರ್‌.ಅಶೋಕ್‌ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು. 2018ರ ಮಾ.17ರಿಂದ 2019 ಮಾ.16ರವರೆಗೆ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಲೋಕಸಭೆ ಸಾರ್ವತ್ರಿಕ ಚುನಾವಣೆ ಬಂದ ಕಾರಣ ಅರ್ಜಿಗಳನ್ನು ಸ್ವೀಕರಿಸಿಲ್ಲ. ಶಾಸಕರು ಮತ್ತು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಲು ಈ ವಿಧೇಯಕ ಮಂಡಿಸಲಾಗಿದೆ.

ರೇಷ್ಮೆ ಮಾರಾಟ ಸರಳೀಕೃತ:

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆಗೂಡುಗಳ ಮಾರಾಟ ಅಥವಾ ಖರೀದಿಯನ್ನೊಳಗೊಂಡ ಎಲ್ಲಾ ವ್ಯವಹಾರವನ್ನು ಬಹಿರಂಗ ಹರಾಜಿನ ಮೂಲಕ ಅಥವಾ ಇ-ಹರಾಜಿನ ಮೂಲಕ ಮತ್ತು ಮಾರಾಟದ ಬೆಲೆಯ ನಗದು ರೂಪದಲ್ಲಿ ಅಥವಾ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಮೂಲಕ ಪಾವತಿ ಮಾಡಲು ರೇಷ್ಮೆ ಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆ ನೂಲು (ತಿದ್ದುಪಡಿ) ವಿಧೇಯಕ ಮಂಡಿಸಲಾಗಿದೆ.

ಕಾಂಗ್ರೆಸ್ ಸರಕಾರ ಬಂದರೆ ವಾರದಲ್ಲಿ Anti-Conversion Act ಇರೋಲ್ಲ: ಸಿದ್ದರಾಮಯ್ಯ

ಹಳ್ಳಿಗಳಲ್ಲಿ ಕಟ್ಟಡ ನಕ್ಷೆಗೆ ಅನುಮತಿ ಬೇಕಿಲ್ಲ

ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡದ ನಕ್ಷೆಗಳಿಗೆ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ. ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು. ನಗರ ಪ್ರದೇಶಗಳ ಜತೆಗೆ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡದ ನಕ್ಷೆಗಳಿಗೆ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಅನುಮೋದನೆ ಪಡೆಕೊಳ್ಳಬೇಕಾಗಿದೆ. ಈ ವಿಧೇಯಕ ಮೂಲಕ ಇದಕ್ಕೆ ವಿನಾಯಿತಿ ನೀಡಲಾಗಿದೆ. ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೊಳಪಡದಿರುವ ಪ್ರದೇಶದಲ್ಲಿ ನಕ್ಷೆಗೆ ಮಂಜೂರಾತಿಯನ್ನು ಪಡೆಯಲು ತಾಂತ್ರಿಕ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ವಿಧೇಯಕ ಮಂಡಿಸಲಾಗಿದೆ.

click me!