ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗೆ ಸಿಎಂ ಮಾಸ್ಟರ್‌ಪ್ಲಾನ್‌

By Kannadaprabha NewsFirst Published Sep 14, 2022, 4:57 AM IST
Highlights

ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ 300 ಕಿ.ಮೀ. ರಾಜಕಾಲುವೆ ಅಭಿವೃದ್ಧಿ, ಎರಡು ಮತ್ತು ಮೂರನೇ ಹಂತದ ಮಳೆ ನೀರುಗಾಲುವೆಗಳ ಅಭಿವೃದ್ಧಿ ಮತ್ತು ಎಲ್ಲ 160 ಕೆರೆಗಳಿಗೂ ಸ್ಲೂಸ್‌ ಗೇಟ್‌ಗಳನ್ನು (ಕೆರೆ ನೀರು ಸಮತೋಲನ ಕಾಯ್ದುಕೊಳ್ಳುವ ಗೇಟುಗಳು) ಅಳವಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ವಿಧಾನಸಭೆ (ಸೆ.14) : ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ 300 ಕಿ.ಮೀ. ರಾಜಕಾಲುವೆ ಅಭಿವೃದ್ಧಿ, ಎರಡು ಮತ್ತು ಮೂರನೇ ಹಂತದ ಮಳೆ ನೀರುಗಾಲುವೆಗಳ ಅಭಿವೃದ್ಧಿ ಮತ್ತು ಎಲ್ಲ 160 ಕೆರೆಗಳಿಗೂ ಸ್ಲೂಸ್‌ ಗೇಟ್‌ಗಳನ್ನು (ಕೆರೆ ನೀರು ಸಮತೋಲನ ಕಾಯ್ದುಕೊಳ್ಳುವ ಗೇಟುಗಳು) ಅಳವಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

Bengaluru Rains:  ಬಿಜೆಪಿ ಬಂದು ಬ್ರಾಂಡ್ ಬೆಂಗಳೂರು ಹೋಯ್ತು, ರಾಮಲಿಂಗಾ ರೆಡ್ಡಿ ಕಿಡಿ

Latest Videos

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಕೃಷ್ಣಬೈರೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ, ನಗರದಲ್ಲಿ ನೆರೆ ತಡೆಗೆ ರಾಜಕಾಲುವೆಗಳ ಅಭಿವೃದ್ಧಿಯಾಗಬೇಕಿದೆ. ಇದಕ್ಕೂ ಮುನ್ನ ಸಮರ್ಪಕವಾಗಿ ಒತ್ತುವರಿಯಾಗಿರುವ ರಾಜಕಾಲುವೆ ಜಾಗದ ತೆರವು ಕಾರ್ಯ ಆಗಬೇಕು. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದು ಪೂರ್ಣಗೊಂಡ ಬಳಿಕ ನಗರದ 850 ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ ಅಭಿವೃದ್ಧಿಯಾಗದೆ ಇರುವ 300 ಕಿ.ಮೀ. ಉದ್ದದ ರಾಜಕಾಲುವೆಯನ್ನು ಕಾಲಮಿತಿಯೊಳಗೆ ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗುವುದು. ಆದರೆ, ತೀರಾ ಸಮಸ್ಯೆ ಇರುವ ಕಡೆ ಬೇಗ ಕಾಮಗಾರಿ ನಡೆಸಲಾಗುವುದು. ಉಳಿದೆಡೆ ಒಂದೂವರೆಯಿಂದ ಎರಡು ವರ್ಷದೊಳಗೆ ಪೂರ್ಣವಾಗಿ ನಿರಂತರವಾಗಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.

ಸಾಮರ್ಥ್ಯ ಹೆಚ್ಚಳ:

ನಗರದಲ್ಲಿ ಹಿಂದಿನ ವರ್ಷಗಳಿಗಿಂತ ಈಗ ಮಳೆಯ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಆ ನೀರು ಸರಾಗವಾಗಿ ಹರಿದು ಹೋಗಲು 2 ಮತ್ತು 3ನೇ ಹಂತದ ಮಳೆ ನೀರುಗಾಲುವೆಗಳಲ್ಲಿ ಹರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡುವುದಾಗಿ ತಿಳಿಸಿದರು.

ಸ್ಲೂಸ್‌ ಗೇಟ್‌ ಅಳವಡಿಕೆ: ಮಳೆಯಿಂದ ಒಂದೇ ಬಾರಿ ಕೆರೆಗಳೆಲ್ಲಾ ತುಂಬಿ ನೆರೆ ಸ್ಥಿತಿ ಉಂಟಾಗುವುದನ್ನು ತಡೆಯಲು ನಗರದ ಎಲ್ಲ 160 ಕೆರೆಗಳಿಗೂ ಸ್ಲೂಸ್‌ ಗೇಟ್‌ಗಳನ್ನು ಅಳವಡಿಸಲು ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಕೆರೆಯ ನೀರನ್ನು ಮಳೆ ಇಲ್ಲದಿದ್ದಾಗ ಹಂತ ಹಂತವಾಗಿ ಹೊರಗೆ ಹರಿಸಿ ಮಳೆ ಬಂದಾಗ ನೀರು ಕೆರೆಯಲ್ಲಿ ಶೇಖರಣೆಯಾಗುವಂತೆ ಮಾಡಲು ನೆರವಾಗುತ್ತದೆ ಎಂದು ವಿವರಿಸಿದರು.

1500 ಕೋಟಿ ರು. ಅನುದಾನ: ಬೆಂಗಳೂರಿನ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 1,500 ಕೋಟಿ ರು. ಅನುದಾನವನ್ನೂ ರಾಜಕಾಲುವೆ ಅಭಿವೃದ್ಧಿಗೇ ಬಳಸಲು ಸೂಚಿಸಿದ್ದೇನೆ. ಟೆಂಡರ್‌ ಪ್ರಕ್ರಿಯೆಗಳು ನಡೆಯುತ್ತಿವೆ. ಈಗ ಇನ್ನೂ 300 ಕೋಟಿ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸ್ತೇವೆ. ಅಮೃತ ಯೋಜನೆಯಡಿ 100 ಕೋಟಿ ರು. ನೀಡಲಾಗಿದೆ ಎಂದರು.

ಎಂಟು ವಲಯಗಳ ಪೈಕಿ ಮಹದೇವಪುರ, ಬೊಮ್ಮನಹಳ್ಳಿ ಎರಡು ವಲಯದಲ್ಲಿ ಹೆಚ್ಚು ಸಮಸ್ಯೆ ಇದೆ. ಅದರಲ್ಲೂ ಮಹದೇವಪುರ ವಲಯದಲ್ಲಿ ವರ್ತೂರು ಮತ್ತು ಬೆಳ್ಳಂದೂರು ಕೆರೆಗೆ ವ್ಯಾಲಿ ಸೇರುತ್ತದೆ. ಇದರಿಂದ ನಗರದ ಶೇ.80ರಷ್ಟುನೀರು ಆ ವಲಯದಲ್ಲಿ ಹರಿಯುತ್ತದೆ. ಜೊತೆಗೆ 110 ಹೊಸ ಹಳ್ಳಿಗಳೂ ಸೇರಿವೆ, ಅಲ್ಲೂ ಕೆರೆಗಳಿವೆ. ಸಮರೋಪಾದಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡೋಣ ಎಂದರು. ಶಾಸಕ ಕೃಷ್ಣ ಬೈರೇಗೌಡ ಅವರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರಕ್ಕೆ 407 ಕೋಟಿ ರು.ಗಳನ್ನು ಕಳೆದ ಮೂರು ವರ್ಷದಲ್ಲಿ ಪಡೆದುಕೊಂಡಿದ್ದಾರೆ. ರಾಜಕಾಲುವೆಗೆ ಹೆಚ್ಚುವರಿ ಹಣ ಬಳಕೆ ಮಾಡಿಕೊಳ್ಳಿ. ನಿಮ್ಮ ಕಾರ್ಯ ಮಾದರಿಯಾಗಲಿದೆ ಎಂದರು.

ಬ್ರಾಂಡ್‌ ಬೆಂಗಳೂರಿಗೆ ಧಕ್ಕೆ: ಕೃಷ್ಣ ಭೈರೇಗೌಡ

ಇದಕ್ಕೂ ಮುನ್ನ ಬೆಂಗಳೂರು ರಾಜಕಾಲುವೆ ಅಭಿವೃದ್ಧಿ ವಿಚಾರ ಪ್ರಶ್ನಿಸಿ ಮಾತನಾಡಿದ ಶಾಸಕ ಕೃಷ್ಣ ಭೈರೇಗೌಡ, ಬೆಂಗಳೂರಿನಲ್ಲಿ ನೆರೆಯಿಂದ ಆಸ್ತಿ ಪಾಸ್ತಿ, ಪ್ರಾಣ ಹಾನಿಯಾಗಿದೆ. ಉದ್ಯೋಗ ನಷ್ಟ, ಜನಜೀವನಕ್ಕೆ ತೊಂದರೆಯಾಗಿದೆ. ಇದರಿಂದ ಬ್ರಾಂಡ್‌ ಬೆಂಗಳೂರಿಗೂ ಧಕ್ಕೆ ಉಂಟಾಗಿದೆ. ಮಳೆ ಹಾನಿಗೆ ಕಾರಣ ಹುಡುಕುವ ಬದಲು ಮೊದಲು ರಾಜಕಾಲುವೆ ಅಭಿವೃದ್ಧಿಪಡಿಸಿದರೆ ಶೇ.80ರಷ್ಟುಪರಿಹಾರ ಸಿಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ 450 ಕಿ.ಮೀ. ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆ ನಂತರದ ಮೂರು ವರ್ಷದಲ್ಲಿ ಕೇವಲ 75 ಕಿ.ಮೀ. ನಷ್ಟುಮಾತ್ರ ಅಭಿವೃದ್ಧಿಯಾಗಿದೆ. ಮುಖ್ಯಮಂತ್ರಿಗಳು ಉಳಿದ 300 ಕಿ.ಮೀ.ಗೂ ಹೆಚ್ಚಿನ ರಾಜಕಾಲುವೆಯನ್ನು ಕಾಲಮಿತಿಯೊಳಗೆ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 1500 ಕೋಟಿ ರು. ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಆದರೆ ಇನ್ನೂ ಕಾಮಗಾರಿಗಳು ಆರಂಭವಾಗಿಲ್ಲ. ನನ್ನ ಕ್ಷೇತ್ರದಲ್ಲೂ 110 ಕೋಟಿ ಕೇಳಿದ್ದೆ, ಆದರೆ ಬರೀ 20 ಕೋಟಿ ರು. ನೀಡಲಾಗಿದೆ. ಹೀಗಾದಾಗ ನೆರೆ ತಡೆಗಟ್ಟಲು ಹೇಗೆ ಸಾಧ್ಯ? ಎಲ್ಲಾ ರಾಜಕಾಲುವೆ ಅಭಿವೃದ್ಧಿ ಪಡಿಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕು ಎಂದು ಸದನದಲ್ಲಿ ಒತ್ತಾಯಿಸಿದ್ದಾರೆ.

click me!