ಅತಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ 4859 ರೈತರಿಗೆ 5.66 ಕೋಟಿ ರು.ಗಳನ್ನು ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಪರಿಷತ್ (ಜು.25): ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಯಾದ 38,78,525 ರೈತರಿಗೆ 3535.30 ಕೋಟಿ ರು.ಗಳನ್ನು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ 4859 ರೈತರಿಗೆ 5.66 ಕೋಟಿ ರು.ಗಳನ್ನು ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಪರವಾಗಿ ಕೇಶವಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಪರಿಹಾರ ನೀಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಹೋದ ನಂತರ ಕೇಂದ್ರ ಸರ್ಕಾರ 3454.22 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ 32.66.42 ಕೊಟಿ ರು.ಗಳನ್ನು ಬೆಳೆಹಾನಿ ಪರಿಹಾರ ಹಾಗೂ 232.42 ಕೋಟಿ ರು.ಗಳನ್ನು ಜೀವನೋಪಾಯ ಪರಿಹಾರಕ್ಕೆ ಬಿಡುಗಡೆ ಮಾಡಿದೆ.
ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ
ಇದರ ಜೊತೆಗೆ ರಾಜ್ಯ ಸರ್ಕಾರದಿಂದ 1296 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದರು. ವಿಶೇಷವಾಗಿ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಕಾಲುವೆಯಿಂದ ನೀರು ಬಿಟ್ಟರೂ ನೀರು ತಲುಪದ ಕಾಲುವೆಯ ಕೊನೆಯಲ್ಲಿರುವ ರೈತರು ಹಾಗೂ ನೀರು ಬಿಡುಗಡೆ ಮಾಡಲು ಆಗದೇ ಬೆಳೆ ಹಾನಿಗೆ ಒಳಗಾದ ರೈತರಿಗೂ ಸಹ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.
ಬೆಳೆ ವಿಮೆ ಸಮಸ್ಯೆ ನಿವಾರಣೆಗೆ ಕ್ರಮ: ಬೆಳೆಹಾನಿಗೆ ಪರಿಹಾರ ಪಡೆದ ರೈತರಿಗೆ ಬೆಳೆ ವಿಮೆ ಅಡಿ ಪರಿಹಾರ ನೀಡಬಾರದೆಂಬ ನಿಯಮವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿತ್ತು. ಈ ಬಗ್ಗೆ ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲಾಯಿತು. ಈ ತಪ್ಪನ್ನು ಸರಿಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ನೀತಿ ಆಯೋಗ ಸಭೆ ಬಹಿಷ್ಕರಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ: ಕಾರಣವೇನು?
ಕೃಷ್ಣ ಬೈರೇಗೌಡ- ಕೇಶವ ಮಾತಿನ ಚಕಮಕಿ: ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರ ನೀಡುವ ವೇಳೆ ಬಿಜೆಪಿಯ ಕೇಶವಪ್ರಸಾದ್, ಕೇಂದ್ರ ಸರ್ಕಾರ ಸಹ ಬರಪರಿಹಾರಕ್ಕೆ ಹಣ ನೀಡಿದೆ ಎಂದು ಹೇಳಿದ ವಿಷಯ ಕೆಲ ನಿಮಿಷಗಳ ಕಾಲ ಮಾತಿನ ಚಕಮಕಿಗೆ ಕಾರಣವಾಯಿತು. ಬರಪರಿಹಾರಕ್ಕೆ ಹಣ ನೀಡುವಂತೆ ಮನವಿ ಮಾಡಿದರೂ ಕೇಂದ್ರ ನೀಡಲಿಲ್ಲ. ಇದೇ ರೀತಿ ಮನವಿಯನ್ನು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರ ಮಾಡಿದ್ದವು, ಆದರೆ ಕರ್ನಾಟಕ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಕ್ಕೆ ಕೇಂದ್ರ ಪರಿಹಾರ ನೀಡಿದೆ. ಇಲ್ಲದಿದ್ದರೆ ನಯಾ ಪೈಸೆ ಸಿಗುತ್ತಿರಲಿಲ್ಲ ಎಂದು ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು.