
ಬೆಂಗಳೂರು (ಜೂ.18): ನೈಋತ್ಯ ಮುಂಗಾರು ಮಾರುತಗಳು ಬೀದರ್ ಜಿಲ್ಲೆಯ ತಲುಪಿದ್ದು, ಇಡೀ ರಾಜ್ಯವನ್ನು ಆವರಿಸಿದಂತಾಗಿದೆ. ಮೇ 31ಕ್ಕೆ ರಾಜ್ಯದ ಕರಾವಳಿಗೆ ಕಾಲಿಟ್ಟಿದ್ದ ಮುಂಗಾರು ಮಾರುತಗಳು ಸುಮಾರು ಎರಡು ವಾರದ ಬಳಿಕ ರಾಜ್ಯವನ್ನು ಆವರಿಸಿದೆ. ಮೇ ತಿಂಗಳ ಕೊನೆಯಲ್ಲಿ ರಾಜ್ಯ ಕರಾವಳಿ ತಲುಪಿದ್ದ ಮುಂಗಾರು ಮಾರತುಗಳು ಆ ಬಳಿಕ ತನ್ನ ಬಿರುಸು ಕಳೆದುಕೊಂಡಿತ್ತು. ಮುಂಗಾರು ಋುತುವಿನ ಆರಂಭದಲ್ಲಿ ಭರ್ಜರಿ ಮಳೆಯಾಗುವ ಕರಾವಳಿ (ಶೇ. 65) ಮತ್ತು ಮಲೆನಾಡಿನಲ್ಲಿ (ಶೇ. 61) ಮಳೆಯ ತೀವ್ರ ಕೊರತೆ ಕಾಡಿದೆ.
ಜೂನ್ 16ಕ್ಕೆ ಮುಂಗಾರು ಮಾರುತ ಪೂರ್ಣವಾಗಿ ರಾಜ್ಯವನ್ನು ಆವರಿಸಿದ್ದರೂ ದಕ್ಷಿಣ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದ 17 ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.32 ಮಳೆಯ ಕೊರತೆಯಾಗಿದೆ. ಆದರೆ ಮುಂದಿನ ಮೂರ್ನಾಲ್ಕು ದಿನದಲ್ಲಿ ಮುಂಗಾರು ಚುರುಕಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಶನಿವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ.
ಮಳೆಗಾಲ ಆರಂಭವಾಯ್ತು, ವಿಸ್ಟಾಡೋಮ್‌ನ ರೈಲಿಗೆ ಭಾರೀ ಬೇಡಿಕೆ..!
ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿತ್ರದುರ್ಗ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಭಾನುವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಸೋಮವಾರ ಮತ್ತು ಮಂಗಳವಾರ ಕರಾವಳಿ ಮತ್ತು ಮಲೆನಾಡಿನ ಎಲ್ಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ರೈತ ಸ್ನೇಹಿ ಆಪ್: ಪ್ರಸಕ್ತ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯನ್ವಯ ಜಿಲ್ಲೆಯ ರೈತರು ತಮ್ಮ ಜಮೀನುಗಳ ಸರ್ವೆ ನಂ, ಹಿಸ್ಸಾ ನಂಬರ್‌ವಾರು ತಾವು ಬೆಳೆದ ಕೃಷಿ ಬೆಳೆಗಳ ಹಾಗೂ ತಮ್ಮ ಜಮೀನಿನಲ್ಲಿರುವ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ, ಇತರೆ ಬೆಳೆಗಳ ಮಾಹಿತಿಯನ್ನು ಛಾಯಾ ಚಿತ್ರಸಹಿತ ತಮ್ಮ ಅಂಡ್ರ್ಯಾಡ್ ಮೊಬೈಲ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್ 2022-23 ಡೌನ್‌ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮೂಲಕ ನಮೂದಿಸಬಹುದಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣವನ್ನು ಲೆಕ್ಕ ಹಾಕಲು, ಬೆಳೆ ವಿಮೆ ಯೋಜನೆಯ ಸರ್ವೆ ನಂ. ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಸರ್ವೆ ನಂಬರ್ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್. ನಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ದಪಡಿಸಲು ಬೆಳೆ ಆಪ್ ಸಹಾಯಕವಾಗಲಿದೆ.
Karnataka Monsoon ನೈಋತ್ಯ ಮಾನ್ಸೂನ್ ಪ್ರವೇಶ: ಕರ್ನಾಟಕದಲ್ಲಿ ಮಳೆ ಮುನ್ಸೂಚನೆ
ಹಾನಿಗೊಳಗಾದ ಬೆಳೆ ವಿಸ್ತೀರ್ಣದ ಮಾಹಿತಿ ಸಿದ್ದಪಡಿಸುವಲ್ಲಿ ಮತ್ತು ಅರ್ಹ ಫಲಾನುಭವಿಗಳ ಪಟ್ಟಿತಯಾರಿಸುವ ಸಂದರ್ಭಗಳಲ್ಲಿ ಬೆಳೆ ಸಮೀಕ್ಷೆ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಸಿದ್ದಪಡಿಸುವುದರಿಂದ ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್ 2022-23 ನಲ್ಲಿ ನಮೂದಿಸಬಹುದಾಗಿದೆ.
ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಯ ಮಾಹಿತಿಯನ್ನು ಖಾಸಗಿ ನಿವಾಸಿಗಳ (ಪಿ.ಆರ್) ಸಹಾಯದಿಂದ ತಮ್ಮ ಜಮೀನುಗಳ ಬೆಳೆ ಮಾಹಿತಿಯನ್ನು ಛಾಯಾ ಚಿತ್ರದೊಂದಿಗೆ ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್ ನಲ್ಲಿ ನಮೂದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ