
ಅಂಕೋಲಾ (ಜ.22): ನನ್ನ ಶಾಲೆ ನನ್ನ ಜವಾಬ್ದಾರಿ ಎನ್ನುವ ಹೊಸ ಯೋಜನೆ ಶೀಘ್ರ ಅನುಷ್ಠಾನ ಹಾಗೂ ರಾಜ್ಯದಲ್ಲಿ ಮುಂದಿನ ಮೂರು ವರ್ಷದೊಳಗೆ 3000 ಕೆಪಿಎಸ್ ಶಾಲೆ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ನಡೆದ ಪಿ.ಎಸ್. ಕಾಮತ್ ಮೆಮೋರಿಯಲ್ 10ನೇ ಜಿಲ್ಲಾ ಮಟ್ಟದ ಅಂತರ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮುಂದಿನ ದಿನಗಳಲ್ಲಿ ಯಾವ ಶಾಲೆ ಮಕ್ಕಳು ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಮಾಡಬಾರದು. ಸುಸಜ್ಜಿತ ಆಸನಗಳ ವ್ಯವಸ್ಥೆ ಸರ್ಕಾರದಿಂದಲೇ ಜಾರಿಯಾಗಲಿದೆ.
ಇಂತಹ ಸೌಕರ್ಯಗಳಿಂದ ಮುಂದೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಓಡೋಡಿ ಬರುತ್ತಾರೆ ಎಂದರು. ನಾನು ಈ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ದೇವದತ್ತ ಕಾಮತ ಅವರ ಕೊಡುಗೆ. ನಾನು ಯಾವ ಪಕ್ಷ ಅನ್ನುವುದಕ್ಕಿಂತ ಬಂಗಾರಪ್ಪನವರ ಪಕ್ಷವಾಗಿದೆ. ಅವರು ಎಲ್ಲಿದ್ದಾರೋ ಅಲ್ಲಿ ನಾನಿದ್ದೆ. ಇಂತಹ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ಹಲವರ ಮಾರ್ಗದರ್ಶನ ಮತ್ತು ಕೊಡುಗೆಯಾಗಿದೆ ಎಂದು ಹೇಳಿದರು. ಡಾ. ದಿನಕರ ದೇಸಾಯಿ ಅವರಂತಹ ಅನೇಕ ಮಹಾನುಭಾವರ ಉದಾತ್ತ ಯೋಚನೆ, ಶೈಕ್ಷಣಿಕ ಪ್ರೀತಿಯಿಂದ ಕೋಟ್ಯಂತರ ವಿದ್ಯಾರ್ಥಿಗಳು ಈ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದ ಅವರು, ಕಲಿತ ಶಾಲೆಯ ಅಭಿವೃದ್ಧಿಯ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ಲೋಕಸಭಾ ಚುನಾವಣೆ ಕಾಂಗ್ರೆಸ್ ಬಲಪಡಿಸಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ: ಸಚಿವ ಚಲುವರಾಯಸ್ವಾಮಿ
ಸುಪ್ರೀಂಕೋರ್ಟ್ ವಕೀಲ ದೇವದತ್ತ ಕಾಮತ್ ಮಾತನಾಡಿ, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಉತ್ತಮವಾದ ವಿಷಯ ಸಂಗ್ರಹಣೆ ಮೂಲಕ ಸಮರ್ಥವಾಗಿ ವಿಷಯ ಮಂಡಿಸಿದ್ದಾರೆ. ಇಂತಹ ಸ್ಪರ್ಧೆಗಳಲ್ಲಿ ಅನೇಕ ವಿಷಯಗಳು ಹೊರಬರುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆನರಾ ವೇಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ. ಕಾಮತ್, ಶಾಸಕ ಭೀಮಣ್ಣ ನಾಯ್ಕ, ಉಪನ್ಯಾಸಕ ನಾಗರಾಜ ದಿವಗಿಕರ, ಪ್ರೊ. ಎನ್.ಆರ್. ಬಾಳಿಕಾಯಿ, ಪ್ರಾಚಾರ್ಯ ಎಸ್.ವಿ. ವಸ್ತ್ರದ, ಕೆನರಾ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಕೆ.ವಿ. ಶೆಟ್ಟಿ, ಶಿಕ್ಷಕಿ ಭಾರತಿ ಹೆಗಡೆ, ಸ್ಟಾಫ್ ಸೆಕ್ರೆಟರಿ ಪ್ರೊ. ಆರ್.ಪಿ. ಭಟ್, ರಕ್ಷಾ ಹೊಸ್ಮನೆ, ಸ್ನೇಹಾ ನಾಯ್ಕ ಉಪಸ್ಥಿತರಿದ್ದರು. ಚರ್ಚಾ ಸ್ಪರ್ಧೆಯಲ್ಲಿ ಯೋಗೇಶ ಪಟಗಾರ ಕುಮಟಾ ಪ್ರಥಮ, ಪ್ರಸನ್ನ ಮರಾಟೆ ದ್ವಿತೀಯ, ಮೇಘನಾ ನಾಯ್ಕ್ ತೃತೀಯ ಬಹುಮಾನ ಪಡೆದುಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ