
ಬೆಂಗಳೂರು (ಜೂ.18): ಶಕ್ತಿ ಯೋಜನೆ ಜಾರಿಗೆ ಬಂದ 6ನೇ ದಿನವಾದ ಶುಕ್ರವಾರ ರಾಜ್ಯಾದ್ಯಂತ 55 ಲಕ್ಷ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಿ ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ. ‘ಸಾರಿಗೆ ನಿಗಮಗಳ ಬಸ್ಸಿನಲ್ಲಿ ಒಟ್ಟು 1.16 ಕೋಟಿ ಮಂದಿ (ಪುರುಷರು + ಮಹಿಳೆಯರು) ಶುಕ್ರವಾರ ಪ್ರಯಾಣಿಸಿದ್ದಾರೆ.
ಈ ಪೈಕಿ, ಕೆಎಸ್‌ಆರ್‌ಟಿಸಿಯಲ್ಲಿ 16.34 ಲಕ್ಷ ಮಹಿಳೆಯರು, ಬಿಎಂಟಿಸಿ 17.93 ಲಕ್ಷ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 13.56 ಲಕ್ಷ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 7.24 ಲಕ್ಷ ಸೇರಿ ಒಟ್ಟು 55.09 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್‌ಗಳ ಒಟ್ಟು ಮೌಲ್ಯ 12.45 ಕೋಟಿ ರು.ಗಳಾಗಿವೆ’ ಎಂದು ಸಾರಿಗೆ ಸಂಸ್ಥೆಗಳು ಮಾಹಿತಿ ನೀಡಿವೆ. ಗುರುವಾರ 54 ಲಕ್ಷ ಮಹಿಳೆಯರು ಪ್ರಯಾಣಿಸಿದ ದಾಖಲೆಯನ್ನು ಶುಕ್ರವಾರದ ಸಂಚಾರ ಮುರಿದಿದೆ.
ವೆಬ್‌ಸೈಟ್ ತೊಂದರೆ ಮುಂದುವರಿಕೆ: ಮಹಿಳೆಯರಿಂದ ಬುಕ್ಕಿಂಗ್ ಹೆಚ್ಚಾದ ಕಾರಣ ಉಂಟಾಗಿದ್ದ ಕೆಎಸ್ಸಾರ್ಟಿಸಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆ ಶನಿವಾರವೂ ಮುಂದುವರೆದಿದೆ. ಉಚಿತ ಬಸ್ ಪ್ರಯಾಣದ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಬೇಡಿಕೆ ಹೆಚ್ಚಿತ್ತು. ವೀಕೆಂಡ್ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಬುಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮತ್ತು ಆ್ಯಪ್‌ನ ಸರ್ವರ್ ಡೌನ್ ಆಗಿದ್ದು, ಸಮಸ್ಯೆಯುಂಟು ಮಾಡಿತ್ತು. ಏಕಕಾಲಕ್ಕೆ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು.
ಹಿಂದೂ ಧರ್ಮ ಕಡೆಗಣಿಸುತ್ತಿರುವ ಕಾಂಗ್ರೆಸ್ ಸರ್ಕಾರ: ಶಾಸಕ ಆರಗ ಜ್ಞಾನೇಂದ್ರ
ಕೆಲವು ಕಡೆಗಳಲ್ಲಿ ಮುಂಗಡ ಬುಕ್ಕಿಂಗ್ ಹಣ ಕಡಿತವಾಗುತ್ತಿದ್ದರೂ, ಆಸನ ಬುಕ್ಕಿಂಗ್ ಫೇಲ್ ಆಗುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು. ಶನಿವಾರವೂ ಕೆಲವೆಡೆ ಇದು ಮುಂದುವರೆದಿತ್ತು. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.25ರಿಂದ 30 ರಷ್ಟು ಹೆಚ್ಚಳವಾಗಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಮಹಿಳೆಯರು ಮತ್ತು ಯುವತಿಯರು ಪ್ರವಾಸ, ಧಾರ್ಮಿಕ ಕ್ಷೇತ್ರ ದರ್ಶನಕ್ಕೆಂದು ಹೊರಟಿದ್ದು, ಬಸ್‌ಗಳು ಭರ್ತಿಯಾಗಿದ್ದವು. ಆದರೆ, ಮುಂಗಡ ಬುಕ್ಕಿಂಗ್‌ನಲ್ಲಿ ಆಗಿದ್ದ ಅಡಚಣೆಯನ್ನು ಸರಿಪಡಿಸಿದ್ದು, ಭಾನುವಾರವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.50ರಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ