ಪ್ರಜ್ವಲ್‌ ರೇವಣ್ಣ ವಿಡಿಯೋದಲ್ಲಿ 3 ಮಹಿಳಾ ಸರ್ಕಾರಿ ನೌಕರರು: ದೂರು ನೀಡಲು ಎಸ್‌ಐಟಿ ಸೂಚನೆ

By Kannadaprabha NewsFirst Published May 6, 2024, 10:45 AM IST
Highlights

ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 

ಬೆಂಗಳೂರು (ಮೇ.06): ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪೆನ್‌ಡ್ರೈವ್‌ನಲ್ಲಿ ಸಿಕ್ಕಿರುವ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಹಾಗೂ ಅಶ್ಲೀಲ ಫೋಟೋಗಳ ಪರಿಶೀಲನೆ ವೇಳೆ ಮೂವರು ಮಹಿಳಾ ಸರ್ಕಾರಿ ನೌಕರರ ಗುರುತು ಪತ್ತೆಯಾಗಿದೆ. ಈ ಮೂವರು ಸಂತ್ರಸ್ತೆಯರನ್ನು ಸಂಪರ್ಕಿಸಿರುವ ಎಸ್‌ಐಟಿ ಅಧಿಕಾರಿಗಳು, ದೂರು ನೀಡುವಂತೆ ಸೂಚಿಸಿದ್ದಾರೆ. ಈ ಮೂವರು ದೂರು ನೀಡಿದಲ್ಲಿ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಅಶ್ಲೀಲ ವಿಡಿಯೋಗಳು ಹಾಗೂ ಪೋಟೋಗಳಲ್ಲಿರುವ ಮಹಿಳೆಯರನ್ನು ಗುರುತಿಸಿ, ದೂರು ನೀಡುವಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ಮಹಿಳೆಯರು ಮರ್ಯಾದೆಗೆ ಅಂಜಿ ದೂರು ನೀಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ತಮ್ಮ ಪ್ರಯತ್ನ ನಿಲ್ಲಿಸದ ಎಸ್‌ಐಟಿ ಅಧಿಕಾರಿಗಳು, ಆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವುದಾಗಿ ದೈರ್ಯ ತುಂಬುತ್ತಿದ್ದಾರೆ ಎಂದು ತಿಳಿದು ಬಂದಿದೆ.    

ಪ್ರಜ್ವಲ್‌ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್‌ ದಾಖಲು?: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದಡಿ ಈಗಾಗಲೇ ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಅಪಹರಣ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಕೆ.ಆರ್‌.ನಗರದ ಮಹಿಳೆಯನ್ನು ಶನಿವಾರ ರಕ್ಷಿಸಿದ್ದಾರೆ. ಈ ಮಹಿಳೆಯ ಪುತ್ರ ನೀಡಿರುವ ಅಪಹರಣದ ದೂರಿನಲ್ಲಿ ‘ನನ್ನ ತಾಯಿಯ ಮೇಲೆ ಪ್ರಜ್ವಲ್‌ ರೇವಣ್ಣ ಬಲಾತ್ಕಾರ ನಡೆಸಿರುವ ಬಗ್ಗೆ ನನ್ನ ಸಂಬಂಧಿಕರು ಹಾಗೂ ಸ್ನೇಹಿತರು ಹೇಳಿದ್ದಾರೆ. 

ಇದು ಭರವಸೆ v/s ಬುರುಡೆ ನಡುವಿನ ಚುನಾವಣೆ: ಡಿ.ಕೆ.ಶಿವಕುಮಾರ್‌

ಬಲಾತ್ಕಾರದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಎಸ್ಐಟಿ ಅಧಿಕಾರಿಗಳು ಮಹಿಳೆಯ ಹೇಳಿಕೆ ದಾಖಲಿಸಲು ಮುಂದಾಗಿದ್ದಾರೆ. ಮಹಿಳೆ ತನ್ನ ಮೇಲೆ ನಡೆದಿರುವ ಬಲಾತ್ಕಾರದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ. ಹೀಗಾಗಿ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಆರೋಪದಡಿ ಮತ್ತೊಂದು ಎಫ್‌ಐಆರ್‌ ದಾಖಲಾಗುವ ಸಾಧ್ಯತೆಯಿದ್ದು, ಮತ್ತಷ್ಟು ಸಂಕಷ್ಟ ಎದುರಾಗಲಿದೆ.

click me!