
ಬೆಂಗಳೂರು(ಆ.02): ರಾಜ್ಯದಲ್ಲಿ ಜುಲೈನಲ್ಲಿ ಸಂಭವಿಸಿದ ಕೊರೋನಾ ಸೋಂಕು ಸ್ಫೋಟದ ತೀವ್ರತೆ ಆಗಸ್ಟ್‌ನಲ್ಲಿ ದುಪ್ಪಟ್ಟಾಗಲಿದೆ. ಜುಲೈವೊಂದೇ ತಿಂಗಳಲ್ಲಿ 1.09 ಲಕ್ಷ ಮಂದಿಗೆ ಸೋಂಕು ತಗುಲಿದೆ. ಅಲ್ಲದೆ 2068 ಮಂದಿ ಮೃತಪಟ್ಟಿದ್ದಾರೆ. ಈ ಸೋಂಕು ಆಗಸ್ಟ್‌ನಲ್ಲಿ ಎರಡು ಲಕ್ಷ ಮಂದಿಗೆ ಹಬ್ಬುವ ಸಾಧ್ಯತೆಯಿದ್ದು, ಮಾಸಾಂತ್ಯಕ್ಕೆ ರಾಜ್ಯದಲ್ಲಿ 3 ಲಕ್ಷ ಮಂದಿ ಕೊರೋನಾ ಸೋಂಕಿತರಾಗಲಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.
"
ಅಲ್ಲದೆ, ಜು.29ರ ವೇಳೆಗೆ ರಾಜ್ಯದಲ್ಲಿ ಬರೋಬ್ಬರಿ 12,317 ಮಂದಿ ಸೋಂಕಿತರು ಹೈರಿಸ್ಕ್‌ನಲ್ಲಿದ್ದರು. ಈ ಹೈರಿಸ್ಕ್‌ನಲ್ಲಿರುವ ಸೋಂಕಿತರು ಕೊರೋನಾ ಗೆದ್ದು ಬರುವರೋ ಅಥವಾ ಇಲ್ಲವೋ ಎಂಬುದು ಆಗಸ್ಟ್ ಮಾಸದ ಮೊದಲ 10 ದಿನಗಳಲ್ಲಿ ಸ್ಪಷ್ಟವಾಗಲಿದೆ. ಹೀಗಾಗಿ ಈ ಮಾಸದಲ್ಲಿ ಸಾವಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ದೊಡ್ಡ ಕೋವಿಡ್ ಆರೈಕೆ ಕೇಂದ್ರದಲ್ಲಿ ಬೆರಳೆಣಿಕೆ ಸೋಂಕಿತರು..!
ಮಾರ್ಚ್ 9ರಂದು ರಾಜ್ಯಕ್ಕೆ ಕಾಲಿಟ್ಟಸೋಂಕು ತಿಂಗಳಿಂದ ತಿಂಗಳಿಗೆ ತೀವ್ರ ಸ್ವರೂಪ ಪಡೆಯುತ್ತಿದೆ. ಮೊದಲ ನಾಲ್ಕು ತಿಂಗಳು ಕಡಿಮೆ ವೇಗದಲ್ಲಿ ಹರಡುತ್ತಿದ್ದ ಸೋಂಕು ಐದನೇ ತಿಂಗಳಾದ ಜುಲೈನಲ್ಲಿ ಅಬ್ಬರಿಸಿತ್ತು. ಈ ಮೂಲಕ ಜುಲೈ 31ರ ವೇಳೆಗೆ ಬರೋಬ್ಬರಿ 1,24,115 ಮಂದಿಗೆ ಸೋಂಕು ತಗುಲಿದ್ದು, 2314 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆ ಜೂನ್ ಅಂತ್ಯಕ್ಕೆ (ಜೂ.20) 15,242 ಮಾತ್ರ ಇತ್ತು. ಇನ್ನು ಸಾವು 246 ಮಾತ್ರ ವರದಿಯಾಗಿತ್ತು. ಈ ಮೂಲಕ ಜುಲೈ ತಿಂಗಳಲ್ಲೇ 1,09,473 ಪ್ರಕರಣ ವರದಿಯಾಗಿದೆ.
ಆಗಸ್ಟ್‌ನಲ್ಲಿ ಸೋಂಕಿನ ಸ್ಫೋಟ:
ಮಾಚ್‌ರ್ 9ರಂದು ಮೊದಲ ಸೋಂಕು ಕಾಣಿಸಿಕೊಂಡ ರಾಜ್ಯದಲ್ಲಿ ಏಪ್ರಿಲ್, ಮೇ, ಜೂನ್ ತಿಂಗಳ ಅಂತ್ಯಕ್ಕೆ (ಜೂನ್ 30) ಕೇವಲ 15242 ಮಂದಿಗೆ ಮಾತ್ರ ಸೋಂಕು ಉಂಟಾಗಿ 246 ಮಂದಿ ಮೃತಪಟ್ಟಿದ್ದರು. ಆದರೆ ಜುಲೈ ಒಂದೇ ತಿಂಗಳಲ್ಲಿ 1,09,473 ಪ್ರಕರಣ ವರದಿಯಾಗಿದ್ದು, 2068 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ಸೋಂಕಿನ ವೇಗ, ಸೋಂಕು ದ್ವಿಗುಣವಾಗಲು ತೆಗೆದುಕೊಳ್ಳುತ್ತಿರುವ ಅವಧಿ ಹಾಗೂ ಸಾರ್ವಜನಿಕರು ಸೋಂಕಿನಿಂದ ತಪ್ಪಿಸಿಕೊಳ್ಳಲು ನಿರ್ಲಕ್ಷ್ಯ ವಹಿಸುತ್ತಿರುವ ಆಧಾರದ ಮೇಲೆ ಆಗಸ್ಟ್‌ನಲ್ಲಿ ಸೋಂಕು ಸ್ಫೋಟಗೊಳ್ಳುವ ಅಂದಾಜನ್ನು ತಜ್ಞರು ಹಾಕಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಇಂದಿನಿಂದ ಸಂಡೇ ಲಾಕ್‌ಡೌನ್ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು
ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲೂ ಸೋಂಕು ತಾರಕ ಸ್ಥಿತಿಯಲ್ಲೇ ಮುಂದುವರೆಯಲಿದೆ. ಏಕೆಂದರೆ, ಲಾಕ್‌ಡೌನ್ ಅನ್‌ಲಾಕ್‌ನಿಂದ ಆಗಸ್ಟ್‌ನಲ್ಲಿ ಸಂಪೂರ್ಣ ಜನ ಸಂಚಾರ ಹಾಗೂ ಚಟುವಟಿಕೆ ಆರಂಭವಾಗಲಿದ್ದು, ಸಾಲು-ಸಾಲು ಹಬ್ಬಗಳಿಂದಾಗಿ ಸೋಂಕು ಮತ್ತಷ್ಟುತಾರಕಕ್ಕೇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಂಕು 3 ಲಕ್ಷವಾಗಬಹುದು:
ಈ ಬಗ್ಗೆ ರಾಜ್ಯ ಕೊರೋನಾ ಸೋಂಕು ಪರೀಕ್ಷೆ ಉಸ್ತುವಾರಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಸೋಂಕಿನ ತೀವ್ರತೆ ದೆಹಲಿ ಮತ್ತು ಮಹಾರಾಷ್ಟ್ರಕ್ಕಿಂತ ತಡವಾಗಿ ಶುರುವಾಗಿದೆ. ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಎರಡು ತಿಂಗಳ ಮೊದಲೇ ಸೋಂಕು ತಾರಕ ಸ್ಥಿತಿಗೆ ತಲುಪಿದೆ. ಹೀಗಾಗಿ ಆ ರಾಜ್ಯಗಳಲ್ಲಿ ಸೋಂಕು ಇಳಿಮುಖವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಜುಲೈ ತಿಂಗಳಲ್ಲಷ್ಟೇ ಸೋಂಕು ಹೆಚ್ಚಾಗಿದೆ. ಜುಲೈಗಿಂತಲೂ ಆಗಸ್ಟ್‌ನಲ್ಲಿ ಸೋಂಕು ದುಪ್ಪಟ್ಟಾಗಲಿದೆ. ಒಟ್ಟಾರೆ ಸೋಂಕು ಆಗಸ್ಟ್ ಅಂತ್ಯಕ್ಕೆ 3 ಲಕ್ಷಕ್ಕೆ ತಲುಪಲಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಇದೇ ಸ್ಥಿತಿಯಲ್ಲಿ ಮುಂದುವರೆದು ಬಳಿಕ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕರ ನಡೆಯಿಂದ ಆತಂಕ:
ತಜ್ಞರ ಸಮಿತಿ ಸದಸ್ಯರು ಹಾಗೂ ಖ್ಯಾತ ವೈರಾಲಜಿಸ್ಟ್ ಒಬ್ಬರ ಪ್ರಕಾರ, ಜುಲೈನಲ್ಲಿ ಸೋಂಕು ಹೆಚ್ಚಳದ ಬಗ್ಗೆ ಮೊದಲೇ ಅಂದಾಜಿಸಲಾಗಿತ್ತು. ಸತತ ಎರಡು ವಾರಗಳ ಕಾಲ ಪ್ರಕರಣಗಳು ಸ್ಥಿರವಾಗಿದ್ದರೆ ಇಳಿಕೆ ಹಂತಕ್ಕೆ ತಲುಪಿದೆ ಎಂದು ಭಾವಿಸಲಾಗುವುದು. ಆದರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.
ರಾಜ್ಯಕ್ಕೆ ಸೋಂಕು ಕಾಲಿಟ್ಟು ಐದು ತಿಂಗಳಾದರೂ ಜನರು ನಿರ್ಲಕ್ಷ್ಯಧೋರಣೆ ಮುಂದುವರೆಸಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಗುಂಪು ಸೇರುತ್ತಿದ್ದಾರೆ. ಕಳೆದ ಎರಡು ದಿನದಿಂದ ಸಾರ್ವಜನಿಕವಾಗಿ ಗುಂಪುಗೂಡುವುದು ಮತ್ತಷ್ಟುಹೆಚ್ಚಳವಾಗಿದೆ. ಇದೇ ಮನಸ್ಥಿತಿ ಮುಂದುವರೆದರೆ ಸೋಂಕು ನಿಯಂತ್ರಣ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸೋಂಕು, ಸಾವು ಯಾವಾಗ ಎಷ್ಟು?
ತಿಂಗಳು- ಸೋಂಕು- ಸಾವು
ಮಾರ್ಚ್ - 101 - 3
ಏಪ್ರಿಲ್- 464 -18
ಮೇ - 2656 - 30
ಜೂನ್ - 12,021 - 195
ಜುಲೈ - 1,09,473- 2068
- ಶ್ರೀಕಾಂತ್ ಎನ್. ಗೌಡಸಂದ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ