ಕರಾವಳಿ, ಮಲೆನಾಡಲ್ಲಿ 3-4 ದಿನ ಭಾರೀ ಮಳೆ

Published : Jun 16, 2025, 05:30 AM IST
Rain Alert In Bihar

ಸಾರಾಂಶ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ಮಳೆ ಸುರಿಯಲಿದೆ.

 ಬೆಂಗಳೂರು :  ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ಮಳೆ ಸುರಿಯಲಿದೆ. 

ಅದರಲ್ಲೂ ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನಗಳಿಗೆ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ಮುನ್ಸೂಚನೆ ನೀಡಲಾಗಿದೆ.

ಮುಂಗಾರು: ಪ್ರವಾಸಿ ತಾಣದಲ್ಲಿ ಭಾರೀ ರಷ್‌ - ಜಲಪಾತಗಳ ಬಳಿ ಜನಸಾಗರ

 ಬೆಂಗಳೂರು :  ರಾಜ್ಯದ ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಮೃಗಶಿರಾ ಮಳೆ ಅಬ್ಬರಿಸುತ್ತಿದ್ದು, ಈ ಭಾಗದ ಪ್ರಮುಖ ಜಲಪಾತಗಳು, ಜಲಧಾರೆಗಳು ಮೈದಳೆದು ನಳನಳಿಸುತ್ತಿವೆ. ಹೀಗಾಗಿ ಜಲಧಾರೆಗಳ ವೈಭೋಗ ಕಣ್ತುಂಬಿಕೊಳ್ಳಲು ಜನರ ದಂಡೆ ಪ್ರವಾಸಿತಾಣಗಳಿಗೆ ಹರಿದು ಬರುತ್ತಿದೆ. 

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ, ಮಂಡ್ಯ-ಚಾಮರಾಜನಗರ ಜಿಲ್ಲೆಗಳ ಗಡಿಭಾಗದ ಗಗನಚುಕ್ಕಿ, ಭರಚುಕ್ಕಿ ಜಲಪಾತ, ಬೆಳಗಾವಿ ಜಿಲ್ಲೆಯ ಗೋಕಾಕ್‌, ಅಂಬುಲಿ ಫಾಲ್ಸ್‌ಗಳ ವೀಕ್ಷಣೆಗೂ ಜನರು ದಂಡಾಗಿ ಬರುತ್ತಿದ್ದಾರೆ. ವಿಖ್ಯಾತ ಜೋಗ ಫಾಲ್ಸ್‌, ಉಂಚಳ್ಳಿ, ಸಾತೋಡಿ, ಮಾಗೋಡು ಜಲಪಾತಗಳ ಒಡಲಲ್ಲೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ.

ಹಲವೆಡೆ ಗುಡ್ಡ ಕುಸಿತ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಬಿರುಸಾಗಿದ್ದು, ಧಾರಾಕಾರ ಮಳೆಗೆ ಮಲೆನಾಡು ಭಾಗದ ವಿವಿಧೆಡೆ ಗುಡ್ಡ ಕುಸಿತ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್‌, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಕರಾವಳಿ ಭಾಗದಲ್ಲೂ ಮಳೆ ಅಬ್ಬರಿಸುತ್ತಿದ್ದು, ಭಟ್ಕಳದಲ್ಲಿ 50 ವರ್ಷದ ವೃದ್ಧ ಹಾಗೂ 2 ವರ್ಷದ ಚಿಕ್ಕ ಮಗು ನೀರಲ್ಲಿ ಕೊಚ್ಚಿಹೋಗಿದ್ದಾರೆ. ಬೆಳ್ತಂಗಡಿ ಸಮೀಪ ಮರ ಬಿದ್ದು, ಇಬ್ಬರು ಬೈಕ್‌ ಸವಾರರು ಗಾಯಗೊಂಡಿದ್ದಾರೆ. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ 6, ಮಂಗಳೂರಿನ 5, ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಇಬ್ಬರು ಬಲಿ: 

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಹಳ್ಳ-ಕೊಳ್ಳಗಳಲ್ಲಿ ಪ್ರವಾಹ ಬಂದಿದೆ. ಭಟ್ಕಳದ ಬೆಳಲಖಂಡ ಗ್ರಾಮದಲ್ಲಿ ಭಾನುವಾರ ಹಳ್ಳದ ಪ್ರವಾಹದಲ್ಲಿ ಮಹಾದೇವ ನಾರಾಯಣ ದೇವಾಡಿಗ (50) ಎಂಬುವರು ಕೊಚ್ಚಿಹೋಗಿದ್ದಾರೆ. ಇದೇ ವೇಳೆ, ಆಜಾದ್‌ ನಗರದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದಾಗ ತುಂಬಿ ಹರಿಯುತ್ತಿರುವ ಕಾಲುವೆಗೆ ಬಿದ್ದು, 2 ವರ್ಷದ ಮಗು ಮೃತಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುಕ್ಕಾವಿನ ಕೊಪ್ಪದಗಂಡಿಯಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದು ಇಬ್ಬರು ಗಾಯ‌ಗೊಂಡಿದ್ದಾರೆ. ಸಕಲೇಶಪುರದ ಕಾಫಿ ಎಸ್ಟೇಟ್‌ನಲ್ಲಿ ಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಹೆಣ್ಣು ಕಾಡಾನೆಯೊಂದು ತನ್ನ ಮರಿಯೊಂದಿಗೆ ಮೃತಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌