ಪಂಚಮಸಾಲಿಗೆ 2ಸಿ ಅಥವಾ 3ಸಿ ಮೀಸಲು?: ಹೊಸ ವರ್ಗೀಕರಣಕ್ಕೆ ಸರ್ಕಾರ ಚಿಂತನೆ

By Govindaraj S  |  First Published Dec 23, 2022, 12:41 PM IST

ಹಿಂದುಳಿದ ವರ್ಗಗಳ ಪಟ್ಟಿಗೆ ತಮ್ಮನ್ನು ಸೇರಿಸುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಆ ಸಮುದಾಯವನ್ನು ‘2ಎ’ಗೆ ಸೇರಿಸುವ ಬದಲು ಪ್ರವರ್ಗ ‘3ಎ’ ನಲ್ಲಿನ ಶೇ.2ರಷ್ಟನ್ನು ವಿಭಜಿಸಿ, ಅದನ್ನು ಪಂಚಮಸಾಲಿಗಳಿಗೆ ನೀಡುವ ಮೂಲಕ ‘2ಸಿ’ ಅಥವಾ ‘3ಸಿ’ ಹೆಸರಿನಲ್ಲಿ ಹೊಸ ವರ್ಗೀಕರಣ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.


ಬೆಂಗಳೂರು (ಡಿ.23): ಹಿಂದುಳಿದ ವರ್ಗಗಳ ಪಟ್ಟಿಗೆ ತಮ್ಮನ್ನು ಸೇರಿಸುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಆ ಸಮುದಾಯವನ್ನು ‘2ಎ’ಗೆ ಸೇರಿಸುವ ಬದಲು ಪ್ರವರ್ಗ ‘3ಎ’ ನಲ್ಲಿನ ಶೇ.2ರಷ್ಟನ್ನು ವಿಭಜಿಸಿ, ಅದನ್ನು ಪಂಚಮಸಾಲಿಗಳಿಗೆ ನೀಡುವ ಮೂಲಕ ‘2ಸಿ’ ಅಥವಾ ‘3ಸಿ’ ಹೆಸರಿನಲ್ಲಿ ಹೊಸ ವರ್ಗೀಕರಣ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

ಪಂಚಮಸಾಲಿ ಸಮುದಾಯವನ್ನು ‘2 ಎ’ಗೆ ಸೇರಿಸಿದರೆ, ಆ ಪ್ರವರ್ಗದಲ್ಲಿರುವ ಇತರೆ ಕೆಲ ಸಮುದಾಯದವರು ಮೀಸಲು ಸೌಲಭ್ಯದಿಂದ ವಂಚಿತರಾಗುತ್ತಾರೆ ಮತ್ತು ಅವರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಇದರಿಂದ ‘2 ಸಿ’ ಅಥವಾ ‘3 ಸಿ’ ಹೆಸರಿನಲ್ಲಿ ಹೊಸ ವರ್ಗೀಕರಣ ಮಾಡುವುದೇ ಸೂಕ್ತ ಎಂಬ ಚರ್ಚೆಗಳು ನಡೆಯುತ್ತಿವೆ.

Tap to resize

Latest Videos

ಪಂಚಮಸಾಲಿ ಮೀಸಲಾತಿ: ಕಾಲಾವಕಾಶ ಪಡೆದ ಸಿಎಂ ಬೊಮ್ಮಾಯಿ

2ಎ ಮೀಸಲು ಏಕೆ ಕಷ್ಟ?: ವಾಸ್ತವದಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿಯಲ್ಲಿ ಪ್ರವರ್ಗ ‘2 ಎ’ ನಲ್ಲಿ ಒಟ್ಟು 104 ಜಾತಿಗಳಿವೆ. ಪ್ರವರ್ಗ ‘2 ಬಿ’ಯಲ್ಲಿ ಮುಸ್ಲಿಂ ಸಮುದಾಯವಿದೆ. ಪ್ರವರ್ಗ ‘3ಎ’ ನಲ್ಲಿ 3 ಹಾಗೂ ಪ್ರವರ್ಗ ‘3 ಬಿ’ಯಲ್ಲಿ 4 ಜಾತಿಗಳಿವೆ. ಪ್ರವರ್ಗ ‘2 ಎ’ ನಲ್ಲಿರುವ ಬಲಾಢ್ಯ ಜಾತಿಗಳವರು ಮೀಸಲಾತಿಯ ಹೆಚ್ಚಿನ ಪಾಲು ಪಡೆಯುತ್ತಿದ್ದಾರೆ. ಸುಮಾರು 99 ಉಪಜಾತಿಗಳಿಗೆ ಸೌಲಭ್ಯವೇ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಂಚಮಸಾಲಿ ಸಮುದಾಯದವರನ್ನು ‘2 ಎ’ಗೆ ಸೇರಿಸುವುದು ಕಷ್ಟಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೀಗಿರುವಾಗ ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸಬೇಕಾದ ಇಕ್ಕಟ್ಟಿಗೆ ಸರ್ಕಾರ ಸಿಲುಕಿದೆ. ಅದಕ್ಕಾಗಿ ಪಂಚಮಸಾಲಿ ಸಮುದಾಯದವರನ್ನು ‘2 ಎ’ ಗೆ ಸೇರಿಸಿ ಅಲ್ಲಿನ ಇತರೆ ಸಮುದಾಯಗಳ ವಿರೋಧ ಕಟ್ಟಿಕೊಳ್ಳುವ ಬದಲು, ಹೇಗೂ ಪ್ರವರ್ಗ ‘3 ಬಿ’ ನಲ್ಲಿ ಲಿಂಗಾಯತರಿದ್ದಾರೆ. ಈ ಗುಂಪಿಗೆ ಶೇ.5ರಷ್ಟುಮೀಸಲಾತಿ ಇದೆ. ಪಂಚಮಸಾಲಿಗಳು ಲಿಂಗಾಯತರ ಉಪಪಂಗಡವೇ ಆಗಿದೆ. ಇದರಿಂದ ಪ್ರವರ್ಗ ‘3 ಎ’ ನಲ್ಲಿನ ಶೇ.2 ರಷ್ಟನ್ನು ವಿಭಜಿಸಿ, ಅದನ್ನು ಪಂಚಮಸಾಲಿಗಳಿಗೆ ನೀಡಿದರೆ, ಆ ಮೂಲಕ ‘2 ಸಿ’ ಅಥವಾ ‘3 ಸಿ’ ಹೆಸರಿನಲ್ಲಿ ಹೊಸ ವರ್ಗೀಕರಣ ಮಾಡಬಹುದು. ಈ ಹೊಸ ವರ್ಗೀಕರಣವೇ ಸೂಕ್ತವಾಗಿದ್ದು, ಅದರಿಂದ ಪಂಚಮಸಾಲಿ ಸಮುದಾಯದವರನ್ನು ತೃಪ್ತಿಪಡಿಸಬಹುದು ಎನ್ನಲಾಗುತ್ತಿದೆ.

ಕಾಂಗ್ರೆಸ್ಸಿನಲ್ಲಿ ಗೊಂದಲ: ಯಾವುದಾದರೂ ರೂಪದಲ್ಲಿ ಪಂಚಮಸಾಲಿ ಮೀಸಲು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದರೆ ತನ್ನ ನಿಲುವು ಏನಾಗಬೇಕು ಎಂಬ ಬಗ್ಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಗೊಂದಲದಲ್ಲಿದೆ. ಒಂದು ವೇಳೆ ಹಿಂದುಳಿದ ವರ್ಗಕ್ಕೆ ತೊಂದರೆಯಾಗುವಂತಹ ಮೀಸಲು ತೀರ್ಮಾನವನ್ನು ಸರ್ಕಾರ ಕೈಗೊಂಡರೆ ಮುಂದೇನು ಮಾಡಬೇಕು ಎಂಬ ಬಗ್ಗೆ ತೀರ್ಮಾನಿಸಲು ಶೀಘ್ರವೇ ಹಿಂದುಳಿದ ವರ್ಗಗಳ ಶಾಸಕರ ಸಭೆ ನಡೆಸಲು ಪಕ್ಷ ನಿರ್ಧರಿಸಿದೆ. ಪಂಚಸಾಲಿಯಂತಹ ದೊಡ್ಡ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸಿದರೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಲಿದೆ. 

ಪಂಚಮಸಾಲಿ ಮೀಸಲಿಗಾಗಿ ಇಂದು ‘ವಿರಾಟ ಪಂಚಶಕ್ತಿ ಸಮಾವೇಶ’: ಕೂಡಲ ಶ್ರೀ

2ಎ ಪ್ರವರ್ಗದಲ್ಲಿ 101 ಜಾತಿಗಳು ಬರುತ್ತವೆ. ಸ್ವತಃ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಅವರು ಪಂಚಸಾಲಿ ಸಮುದಾಯವನ್ನು 2ಎಗೆ ಸೇರಿಸುವುದನ್ನು ವಿರೋಧಿಸದಿದ್ದರೆ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡಿದವರಾಗುತ್ತಾರೆ. ವಿರೋಧಿಸಿದರೆ ಪಂಚಮಸಾಲಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ, ಯಾವ ರೀತಿಯಲ್ಲಿ ಮುಂದಿನ ನಡೆ ಅನುಸರಿಸಬೇಕು ಎಂಬ ಬಗ್ಗೆ ಚರ್ಚಿಸಲು ಹಿಂದುಳಿದ ವರ್ಗಗಳ ಸಮುದಾಯಗಳ ಮಠಾಧೀಶರು, ನಾಯಕರು ಹಾಗೂ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

click me!