
ಬೆಂಗಳೂರು(ಡಿ.09): ಸ್ವಚ್ಛ ಭಾರತ ಅಭಿಯಾನ ಅನುಷ್ಠಾನಕ್ಕಾಗಿ 2,912 ಕೋಟಿ ರು. ಅನುದಾನ ಮೀಸಲಿಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಶುಕ್ರವಾರ ಬಿಜೆಪಿ ಸದಸ್ಯ ಜ್ಯೋತಿ ಗಣೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಚ್ಛ ಭಾರತ ಅಭಿಯಾನದ ಮೊದಲ ಹಂತದಲ್ಲಿ 854 ಕೋಟಿ ರು., ಎರಡನೇ ಹಂತದಲ್ಲಿ 2,058 ಕೋಟಿ ರು. ಅನುದಾನ ಒದಗಿಸಲಾಗಿದೆ. 92 ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಗಿದ್ದು, ನಗರ ಭಾಗದಲ್ಲಿನ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಮೆಟೀರಿಯಲ್ ರಿಕವರಿ ಸ್ಪೆಷಾಲಿಟಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಲಭ್ಯವಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ಐಎಎಸ್ ಅಧಿಕಾರಿ ನಿಯೋಜಿಸಲಾಗಿದೆ ಎಂದರು.
ಡಿಕೆಶಿ, ಭೈರತಿ, ಪಾಟೀಲ್ ರಾಜೀನಾಮೆ ನೀಡಲಿ: ಕೆ.ಎಸ್.ಈಶ್ವರಪ್ಪ ಆಗ್ರಹ
ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಸಂಪ್ರದಾಯಿಕ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಇರುವ ಯಂತ್ರೊಪಕರಣಗಳನ್ನು ಮತ್ತು ಸಿವಿಲ್ ಕಾಮಗಾರಿಗೆ ಕೈಗೊಳ್ಳಲು ವಿಸ್ತೃತ ಯೋಜನೆಗೆ ಅನುಮತಿ ನೀಡಿದ್ದು, 370 ಕೊಟಿ ರು. ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ 450 ಟಿ.ಪಿ.ಡಿ ಹಾಗೂ ತುಮಕೂರು ನಗರದಲ್ಲಿ 140 ಟಿ.ಪಿ.ಡಿ ಸಾಮಾರ್ಥ್ಯದ ತ್ಯಾಜ್ಯ ಸಂಸ್ಕರಣೆ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ ತ್ಯಾಜ್ಯವನ್ನು ತೆರವುಗೊಳಿಸಲು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಜವಳಿ ಸಚಿವ ಶಿವಾನಂದ ಪಾಟೀಲ್, ಸಾಂಪ್ರದಾಯಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪ್ರಮಾಣಿಕ ಕ್ರಮಗಳನ್ನು ಅನುಸರಿಸಬೇಕು ಮತ್ತು ತ್ಯಾಜ್ಯ ಸಾಗಾಣಿಕೆಯ ದರದಲ್ಲಿ ಏಕರೂಪತೆಯನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ