
ಜಯಪ್ರಕಾಶ್ ಬಿರಾದಾರ
ಬೆಂಗಳೂರು (ಫೆ.04): ಕೊರೋನಾ (Coronavirus) ಮಹಾಮಾರಿ ಕ್ಯಾನ್ಸರ್ (Cancer) ಪತ್ತೆಗೂ ಮುಳುವಾಗಿದ್ದು, ರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಹೊಸ ರೋಗಿಗಳ ದಾಖಲಾತಿ ಶೇ.25ರಷ್ಟು ತಗ್ಗಿದೆ. ಎರಡು ವರ್ಷದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಸಂಭವನೀಯ ಕ್ಯಾನ್ಸರ್ ರೋಗಿಗಳು (Cancer Patients) ರೋಗ ಪತ್ತೆ ಪರೀಕ್ಷೆ ಮತ್ತೆ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ.
ಕೊರೋನಾ ಕಾರಣದಿಂದ ಕ್ಯಾನ್ಸರ್ ಲಕ್ಷಣಗಳಿದ್ದರೂ ಖಚಿತಪಡಿಸಿಕೊಳ್ಳಲು ಆಸ್ಪತ್ರೆಗೆ ಆಗಮಿಸದ ಕಾರಣ ಕೊನೆ ಹಂತದಲ್ಲಿ ಬರುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಸಾವಿನ ಪ್ರಮಾಣ ಸಾಕಷ್ಟು ಹೆಚ್ಚಾಗಲಿದೆ ಎಂದು ಕ್ಯಾನ್ಸರ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕು ಹೆಚ್ಚಿರುವ ಹಿನ್ನೆಲೆ ಹಲವರು ಕ್ಯಾನ್ಸರ್ ರೋಗ ಲಕ್ಷಣಗಳಿದ್ದರೂ ಆಸ್ಪತ್ರೆಗಳಿಗೆ ಆಗಮಿಸಿ ಸೋಂಕು ಖಚಿತ ಪಡಿಸಿಕೊಳ್ಳುವ ಪರೀಕ್ಷೆಗಳಿಗೆ ಒಳಗಾಗುತ್ತಿಲ್ಲ. ಜತೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿಲ್ಲ. ಇದರಿಂದ ರಾಜ್ಯದ ಬಹುತೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಾರ್ಷಿಕ ತಲಾ ಹೊಸ ಕ್ಯಾನ್ಸರ್ ರೋಗಿಗಳ ನೋಂದಣಿ ಶೇ.25ರಷ್ಟುಕಡಿಮೆಯಾಗಿದೆ.
ಮಗಳಿಗೆ ಸಂಗಾತಿಗಾಗಿ ಬಿಲ್ಬೋರ್ಡ್ ಮೊರೆಹೋದ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ
ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯಾದ ‘ಕಿದ್ವಾಯಿ ಸ್ಮಾರಕ ಗಂಥಿ’ ಸಂಸ್ಥೆಗೆ ಪ್ರತಿ ವರ್ಷ ಸರಾಸರಿ 20 ಸಾವಿರಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳು ನೋಂದಣಿಯಾಗುತ್ತಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಭಯದಿಂದ ಸರಾಸರಿ 15 ಸಾವಿರದಷ್ಟುಮಾತ್ರ ರೋಗಿಗಳು ಆಸ್ಪತ್ರೆ ಆಗಮಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಎರಡು ವರ್ಷದಲ್ಲಿ10 ಸಾವಿರದಷ್ಟುಹೊಸ ರೋಗಿಗಳ ದಾಖಲಾತಿ ತಗ್ಗಿದೆ ಎಂದು ಕಿದ್ವಾಯಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವ ಶಂಕರ, ಎಚ್‌ಜಿಸಿ, ಫೋರ್ಟಿಸ್, ಸ್ಪಶ್‌ರ್, ವಿಕ್ರಂ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ 2020 ಮತ್ತು 2021ರಲ್ಲಿ ಹೊಸ ರೋಗಿಗಳ ಸಂಖ್ಯೆ ತಗ್ಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಗೂ ಸಮಸ್ಯೆ: ಕಿದ್ವಾಯಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷದಲ್ಲಿ ಕ್ಯಾನ್ಸರ್‌ಗೆ ಕೀಮೋ ಥೆರಪಿ ಪಡೆಯುವವರ ಸಂಖ್ಯೆ ಶೇ.30ರಷ್ಟು(14 ಸಾವಿರ), ರೇಡಿಯೋ ಥೆರಪಿ ಪಡೆಯುವವರ ಸಂಖ್ಯೆ ಶೇ.15ರಷ್ಟು(10 ಸಾವಿರ), ಬ್ರಾಚ್ಯೋಥೆರಪಿ ಪಡೆಯುವವರ ಸಂಖ್ಯೆ ಶೇ.60ರಷ್ಟು(1,100) ತಗ್ಗಿದೆ. ಇದರಿಂದ ಕ್ಯಾನ್ಸರ್ ಗುಣಮುಖ ಪ್ರಮಾಣ ತಗ್ಗಿ, ಶೀಘ್ರ ಸಾವಿಗೆ ಕಾರಣವಾಗಲಿದೆ ಎನ್ನುತ್ತಾರೆ ವೈದ್ಯರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಈಗ ಹೊಸ ಸಮಸ್ಯೆ... ನಾಲಿಗೆಯಲ್ಲಿ ಬೆಳೆತಿದೆ ಕೂದಲು
ಕಳೆದ ಎರಡು ವರ್ಷಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಗಳ ನೋಂದಣಿ ಕಡಿಮೆಯಾಗಿವೆ ಎಂದರೆ ಕ್ಯಾನ್ಸರ್ ತಗ್ಗಿದೆ ಎಂದಲ್ಲ. ಕೊರೋನಾ ಕಾರಣದಿಂದ ಹಲವರು ರೋಗ ಪತ್ತೆಗೆ, ಚಿಕಿತ್ಸೆಗೆ ಮುಂದಾಗಿಲ್ಲ. ಪ್ರಸ್ತುತ ತಡವಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಗುಣಮುಖ ಪ್ರಮಾಣ ತಗ್ಗಿ, ಸಾವು ಕೂಡ ಹೆಚ್ಚಲಿದೆ.-ಡಾ.ಸಿ.ರಾಮಚಂದ್ರ, ನಿರ್ದೇಶಕರು, ಕಿದ್ವಾಯಿ ಗಂಥಿ ಸಂಸ್ಥೆ
ಕಿದ್ವಾಯಿ ಆಸ್ಪತ್ರೆ ರೋಗಿಗಳ ನೋಂದಣಿ - 2019 - 2020 - 2021
ಹೊಸ ರೋಗಿಗಳ ನೋಂದಣಿ - 19764 - 13973 - 17235
ಫಾಲೋ ಅಪ್ ರೋಗಿಗಳು - 3.48 ಲಕ್ಷ - 2.5 ಲಕ್ಷ - 3 ಲಕ್ಷ
ಶಸ್ತ್ರಚಿಕಿತ್ಸೆಗಳು - 5164 - 2972 - 4224
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ