25 ಸಾರಿಗೆ ನೌಕರರು ಸಸ್ಪೆಂಡ್‌ : FIR ದಾಖಲು

By Sujatha NRFirst Published Dec 19, 2020, 8:04 AM IST
Highlights

ಎಫ್‌ಐಆರ್‌ ದಾಖಲಾದ ಒಟ್ಟು 25 ಸಾರಿಗೆ ನೌಕರರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ನಡೆದ ಪ್ರತಿಭಟನೆ ವೇಳೆ  ನಡೆದ ಗಲಭೆಯ ಹಿನ್ನೆಲೆ ಕ್ರಮ ತೆಗೆದುಕೊಳ್ಳಲಾಗಿದೆ

ಬೆಂಗಳೂರು (ಡಿ.19):  ಮುಷ್ಕರದ ಸಮಯದಲ್ಲಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಮಾಡಿದ, ಬಸ್ಸುಗಳನ್ನು ಜಖಂಗೊಳಿಸಿದ ಹಾಗೂ ಎಫ್‌ಐಆರ್‌ ದಾಖಲಾದ ಒಟ್ಟು 25 ನೌಕರರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಇನ್ನು ನಾಲ್ಕು ದಿನಗಳ ಕಾಲ ನಡೆದ ಮುಷ್ಕರದ ವೇಳೆ ಕರ್ತವ್ಯಕ್ಕೆ ಗೈರುಹಾಜರಾದ ಸಾರಿಗೆ ನೌಕರರ ವೇತನ ಕಡಿತ ಸಂಬಂಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾಲ್ಕು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ವೇತನ ಕಡಿತದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಕೆಎಸ್‌ಆರ್‌ಟಿಸಿಯ 13, ಬಿಎಂಟಿಸಿಯ 3 ಹಾಗೂ ಈಶಾನ್ಯ ಸಾರಿಗೆಯ 9 ಮಂದಿ ನೌಕರರು ಸೇರಿ ಒಟ್ಟು 25 ನೌಕರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ವಾಯವ್ಯ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಮುಷ್ಕರ ನಿರತ ನೌಕರರ ವಿರುದ್ಧ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ನಾಲ್ಕು ರಸ್ತೆ ಸಾರಿಗೆ ನಿಗಮಗಳು ಸ್ಪಷ್ಟನೆ ನೀಡಿವೆ.

ಸಾರಿಗೆ ಮುಷ್ಕರ ಅಂತ್ಯವಾಗಲು ನಿಜವಾದ ಕಾರಣ ಏನು? ಆ ಒಂದು ಬೇಡಿಕೆ! ...

ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ನಾಲ್ಕು ದಿನಗಳ ಕಾಲ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದ ನೌಕರರ ವೇತನ ಕಡಿತ ಹಾಗೂ ಅಮಾನತು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಸುದ್ದಿಗಳು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಅಂತೆಯೆ ವಿರೋಧ ಪಕ್ಷ ಕಾಂಗ್ರೆಸ್‌ ಈ ಸಂಬಂಧ ಟ್ವೀಟ್‌ ಮಾಡಿದ್ದು, ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟಿಸಿದ ಸಾರಿಗೆ ನಿಗಮಗಳ ಇನ್ನೂರು ನೌಕರರನ್ನು ಸರ್ಕಾರ ದ್ವೇಷದಿಂದ ಅಮಾನತು ಮಾಡಿದೆ. ನ್ಯಾಯ ಕೇಳಿದವರನ್ನು ಅಮಾನತುಗೊಳಿಸಿ ಉತ್ತರನ ಪೌರುಷ ತೋರಿದೆ ಎಂದು ಆಕ್ರೋಶ ವ್ಯಕ್ತಡಿಸಿತ್ತು. ಇದರ ಬೆನ್ನಲ್ಲೇ ಸಾರಿಗೆ ನಿಗಮಗಳು ಸ್ಪಷ್ಟನೆ ನೀಡಿವೆ.

click me!