ದಾವಣಗೆರೆ: 24ನೇ ವೀರಶೈವ ಲಿಂಗಾಯತ ಅಧಿವೇಶನ; ಮಹಾಸಭಾ ಮಂಡಿಸಿದ 8 ನಿರ್ಣಯಗಳು ಇಲ್ಲಿವೆ

By Kannadaprabha NewsFirst Published Dec 24, 2023, 7:55 PM IST
Highlights

ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ 8 ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ. ಮಹಾಸಭಾದಲ್ಲಿ ಮಂಡಿಸಲಾದ 8 ನಿರ್ಣಗಳು ಇಲ್ಲಿವೆ.

ದಾವಣಗೆರೆ (ಡಿ.24): ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ 8 ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ. 

ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಎಂಟು ನಿರ್ಣಯ ಮಂಡನೆ ಮಾಡಿದರು. ಎಂಟು ನಿರ್ಣಯಗಳಲ್ಲಿ ಎಲ್ಲ ಲಿಂಗಾಯತರು ಧರ್ಮದ ಕಾಲಂನಲ್ಲಿ ವೀರಶೈವ ಎಂದು ಬರೆಸಬೇಕು ಎನ್ನುವ ನಿರ್ಣಯವು ಸೇರಿದೆ.

Latest Videos

24ನೇ ಮಹಾ ಅಧಿವೇಶನದಲ್ಲಿ ತೆಗೆದುಕೊಂಡ 8 ನಿರ್ಣಯಗಳು!

 * ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ ಮಹಾಸಭೆ ಹಾಗೂ ನಮ್ಮ ಸಮಾಜ ಸದಾ ಕಟಿಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ, ಪ್ರಯತ್ನಗಳಿಗೆ ಈ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡುತ್ತದೆ ಎಂದು ಈ ಮಹಾಧಿವೇಶನವು ಪುನರುಚ್ಚರಿಸುತ್ತದೆ.

ರಾಯಚೂರು: ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ್ ಕಿಡಿ

* ಮಹಾನ್ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಜಗಜ್ಯೋತಿ ಬಸವೇಶ್ವರರ ಚಿಂತನೆ, ಅನುಭಾವ ಸಾರ್ವಕಾಲಿಕವಾಗಿದ್ದು, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವತತ್ವ ಪರಿಪಾಲನೆ ಪರಮಾನ್ನವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಎಂದು ಮಹಾಧಿವೇಶನ ಒತ್ತಾಯಿಸುತ್ತದೆ.

* ವೀರಶೈವ-ಲಿಂಗಾಯಿತ ಸಮುದಾಯದಲ್ಲಿ ಲಕ್ಷಾಂತರ ಮಂದಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿದ್ದಾರೆ. ಹೀಗಾಗಿ ವೀರಶೈವ–ಲಿಂಗಾಯತರನ್ನು ಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಭಾರತ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಅಂಗೀಕರಿಸಬೇಕು ಎಂದು ಈ ಮಹಾಧಿವೇಶನ ಒತ್ತಾಯಿಸುತ್ತದೆ.

* ಪ್ರಸ್ತುತ ಚರ್ಚೆಯ ವಸ್ತುವಾಗಿರುವ ಜಾತಿ ಜನಗಣತಿ ಸುಮಾರು 8 ವರ್ಷಗಳಷ್ಟು ಹಳೆಯದಾಗಿದ್ದು, ಅಧಿಕೃತವಾಗಿ ಅಂಗೀಕಾರವಾಗುವ ಮೊದಲೇ ಅದರಲ್ಲಿನ ಅಂಶಗಳು ಸೋರಿಕೆಯಾಗಿವೆ. ಈ ನಿಟ್ಟಿನಲ್ಲಿ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೆ, ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಳಗೊಂಡಂತೆ ವಾಸ್ತವಿಕತೆಯ ಮತ್ತು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು ಎಂದು ಈ ಮಹಾಧಿವೇಶನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ.

* ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿಯ ವೇಳೆ ನಮ್ಮ ಸಮಾಜದ ಬಾಂಧವರು ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸಬಾರದು. ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಈ ಮಹಾಧಿವೇಶನ ಮನವಿ ಮಾಡಲು ನಿರ್ಣಯ ಮಾಡಿರುತ್ತದೆ.

ಹಿಂದಿನ ಜಾತಿಗಣತಿ ವ್ಯವಸ್ಥಿತವಾಗಿ ನಡೆದಿಲ್ಲ; ಹೊಸದಾಗಿ ಸಮೀಕ್ಷೆ ಆಗಬೇಕು: ಬಿಎಸ್ ಯಡಿಯೂರಪ್ಪ

* ಎಲ್ಲ ರೈತರಿಗೆ ಅನುಕೂಲ ಆಗುವಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಈ ಮಹಾಧಿವೇಶನವು ಸರ್ಕಾರವನ್ನು ಒತ್ತಾಯಿಸುತ್ತದೆ.

* ನಮ್ಮ ಸಮುದಾಯದಿಂದ ಮೊದಲ ಸಿಎಂ ಎಸ್ ನಿಜಲಿಂಗಪ್ಪನವರು ನಮ್ಮ ಸಮುದಾಯದ ಹೆಮ್ಮೆ. ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ಅವರ ನಿವಾಸವನ್ನು ಸರ್ಕಾರ ಖರೀದಿಸಿ ಸ್ಮಾರಕ ನಿರ್ಮಾಣ ಮಾಡಬೇಕು. ಅದನ್ನು 2024ರ ಆಗಸ್ಟ್ 8ರ ಪುಣ್ಯ ಸ್ಮರಣೆಯ ದಿನದೊಳಗೆ ಪೂರ್ಣಗೊಳಿಸಬೇಕು ಎಂದು ಮಹಾಧಿವೇಶನ ಒತ್ತಾಯಿಸುತ್ತದೆ.

* ಮಹಾಸಭಾದ 24ನೇ ಮಹಾಧಿವೇಶನಕ್ಕೆ ಸಹಕರಿಸಿದ ಎಲ್ಲರಿಗೂ ಈ ಮಹಾಧಿವೇಶನ ತನ್ನ ಕೃತಜ್ಞತೆಯನ್ನು ಸಮರ್ಪಿಸುವ ನಿರ್ಣಯ ಅಂಗೀಕರಿಸುತ್ತದೆ.

click me!