
ಬೆಂಗಳೂರು (ಫೆ.26): ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯಿಂದ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನು ಮುಂದೆ ದಲಿತ ಉದ್ಯಮಿಗಳಿಗೆ ನಿಯಮಾನುಸಾರವಾಗಿ ಶೇಕಡ 24.1ರಷ್ಟು ಜಾಗವನ್ನು ಮೀಸಲಿಡಲಾಗುವುದು. ಈ ವಿಚಾರದಲ್ಲಿ ನಿಯಮಗಳ ಉಲ್ಲಂಘನೆಗೆ ಅವಕಾಶ ಕೊಡುವುದಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸನ್ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು. ನಿಯೋಗವು ಸಚಿವರ ಬಳಿ ಮಾತನಾಡಿ, 'ಕೆಐಎಡಿಬಿ ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಗಳಿಗೆ ನಿಯಮಾನುಸಾರ ಶೇಕಡ 24.1ರಷ್ಟು ಜಾಗವನ್ನು ಮೀಸಲಿಡಬೇಕು. ಆದರೆ ವಾಸ್ತವದಲ್ಲಿ ಇದು ಶೇ.16ರಷ್ಟು ಮಾತ್ರ ಜಾರಿಯಲ್ಲಿದೆ. ವಿಶೇಷವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ 12 ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ 653 ಎಕರೆ ಜಾಗ ಕೊಡುವುದು ಬಾಕಿ ಇದೆ ಎಂದು ಶ್ರೀನಿವಾಸ ಅವರು ಸಚಿವರ ಗಮನಕ್ಕೆ ತಂದರು.
ಕರ್ನಾಟಕ ಪೊಲೀಸರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ; ಸಿಕ್ಕೇ ಬಿಡ್ತು ಅಂತರ ಜಿಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್!
ಇದಕ್ಕೆ ಸ್ಪಂದಿಸಿದ ಸಚಿವರು, 'ಈಗಾಗಲೇ ಉದ್ದಿಮೆಗಳು ನೆಲೆಯೂರಿರುವ ಕೈಗಾರಿಕಾ ಪ್ರದೇಶಗಳಲ್ಲಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ, ಅಕ್ಕಪಕ್ಕದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ಶೇಕಡ 24.1ರಷ್ಟು ಜಾಗವನ್ನು ಮೀಸಲಿಡಲಾಗುವುದು. ಈ ವಿಷಯದಲ್ಲಿ ಸರಕಾರದ ಬದ್ಧತೆಯ ಬಗ್ಗೆ ಅನುಮಾನ ಬೇಡ. ಅಧಿಕಾರಿಗಳಿಗೆ ಈ ಬಗ್ಗೆ ತಕ್ಷಣವೇ ಸೂಚನೆ ಕೊಡಲಾಗುವುದು. ಜತೆಗೆ ನಿಮ್ಮ ಸಂಘದ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸಲಾಗುವುದು' ಎಂದು ಆಶ್ವಾಸನೆ ನೀಡಿದರು.
ದಲಿತ ಉದ್ಯಮಿಗಳಿಗೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಅನ್ಯಾಯವಾಗಿಲ್ಲ. ಹಿಂದಿನ ಸರಕಾರಗಳ ಅವಧಿಯಲ್ಲಿ ಈ ಸಮಸ್ಯೆ ಉಂಟಾಗಿದೆ. ನಮ್ಮ ಸರಕಾರವು ದಲಿತರ ಪರವಾಗಿದೆ. ಇದಕ್ಕೆ ತಕ್ಕಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ; ಪ್ರತಿವರ್ಷ 148 ಮಹಿಳೆಯರ ಮೇಲೆ ಅತ್ಯಾಚಾರ, 2,630 ಮಂದಿಗೆ ಕಿರುಕುಳ
ಈ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ