Asianet Suvarna News Asianet Suvarna News

ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಆಮೆಗತಿಯಲ್ಲಿ ಭೂ ಸ್ವಾಧೀನ!

ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲ್ವೆ ಮಾರ್ಗವು 201.47 ಕಿ.ಮೀ. ಇರಲಿದ್ದು, ಈ ನೇರ ಮಾರ್ಗದಿಂದ ತುಮಕೂರು-ದಾವಣಗೆರೆ ನಡುವಿನ ದೂರವನ್ನು 53.71 ಕಿಮೀ. ಕಡಿಮೆಗೊಳಿಸಲಿದೆ. ಆದರೆ ಈಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 

Land Acquisition process very slow for Tumkur Davanagere Direct Railway Project
Author
Chitradurga, First Published Jun 24, 2020, 4:10 PM IST

ಚಿತ್ರದುರ್ಗ(ಜೂ.24): ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವಿನ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದ್ದು ಎಂಟು ತಿಂಗಳ ಹಿಂದೆ ಹೇಗಿತ್ತೋ ಈಗಲೂ ಅದೇ ಯಥಾಸ್ಥಿತಿ ಕಾಯ್ದುಕೊಂಡು ಬರಲಾಗಿದೆ. ಭೂ ಸ್ವಾಧೀನ ಪ್ರಸ್ತಾಪ ಕೇವಲ ಮೀಟಿಂಗ್‌ಗಳಲ್ಲಿ ಮಾತ್ರ ಕಳೆದುಹೋಗುತ್ತಿದೆ ಎಂಬ ಸಂಗತಿ ಮಂಗಳವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಸಮಿತಿ ಸಭೆ ಮತ್ತೊಮ್ಮೆ ಸಾಬೀತುಪಡಿಸಿತು.

ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ತಾಲೂಕಿನಲ್ಲಿ ಬರುವ 46.58 ಕಿಮೀ ಮಾರ್ಗಕ್ಕೆ 25 ಗ್ರಾಮಗಳ 444.12 ಎಕರೆ ಭೂ-ಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಭೂ-ಸ್ವಾಧೀನ ಕಾಯ್ದೆ 2013ರನ್ವಯ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲ್ವೆ ಮಾರ್ಗವು 201.47 ಕಿ.ಮೀ. ಇರಲಿದ್ದು, ಈ ನೇರ ಮಾರ್ಗದಿಂದ ತುಮಕೂರು-ದಾವಣಗೆರೆ ನಡುವಿನ ದೂರವನ್ನು 53.71 ಕಿಮೀ. ಕಡಿಮೆಗೊಳಿಸಲಿದೆ. ಚಿತ್ರದುರ್ಗ ತಾಲೂಕಿನಲ್ಲಿ 25 ಗ್ರಾಮಗಳ ಪೈಕಿ ಡಿ.ಎಸ್‌.ಹಳ್ಳಿ ಗ್ರಾಮದಿಂದ ಹಂಪನೂರು ಗ್ರಾಮದವರೆಗೆ ಒಟ್ಟು 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾಗಬೇಕಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ ಜೂ.11ರಂದು ಎಲ್ಲ ಗ್ರಾಮಗಳಲ್ಲಿ ಪುನರ್‌ ವ್ಯವಸ್ಥೆ ಮತ್ತು ಪುನರ್‌ ನಿರ್ಮಾಣ ಗ್ರಾಮಸಭೆಗಳನ್ನು ನಡೆಸಿ, ಬಾಧಿತರಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ಯೋಜನಾ ವೆಚ್ಚ 286.57 ಕೋಟಿ ರು.ಗಳಾಗಿದ್ದು ಭೂಸ್ವಾಧೀನ ಶೀಘ್ರ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆಯನ್ನು ಈ ವರ್ಷಾಂತ್ಯದೊಳಗೆ ಹೊರಡಿಸಾಗುವುದು ಎಂದು ಹೇಳಿದರು.

ಚೀನಾಗೆ ಭಾರೀ ಮುಖಭಂಗ, ಭಾರತಕ್ಕೆ ರಷ್ಯಾದ S-400!

ಉದ್ದೇಶಿತ ನೂತನ ರೈಲ್ವೆ ಮಾರ್ಗದಲ್ಲಿ ಚಿತ್ರದುರ್ಗ ತಾಲೂಕಿನಲ್ಲಿ ದೊಡ್ಡಸಿದ್ದವ್ವನಹಳ್ಳಿ, ಸಿರಿಗೆರೆ, ಭರಮಸಾಗರ, ಚಿತ್ರದುರ್ಗ ಸೇರಿ 4 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ಯೋಜನೆಯಡಿ ತಾಲೂಕಿನಲ್ಲಿ ಶೇ. 50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ 9 ಕುಟುಂಬಗಳನ್ನು ಈಗಾಗಲೇ ಗುರುತಿಸಿದ್ದು, ಅವರಿಗೆ ನಿಯಮಾನುಸಾರ ಹೆಚ್ಚುವರಿ 5ಲಕ್ಷ ರು. ಪರಿಹಾರ ದೊರೆಯಲಿದೆ. ಅಲ್ಲದೆ ಮನೆ, ತೋಟ ಮತ್ತಿತರ ಆಸ್ತಿ-ಪಾಸ್ತಿ ಕಳೆದುಕೊಳ್ಳುವವರಿಗೂ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.

ದುರ್ಗದಲ್ಲಿ ಹೊಸ ನಿಲ್ದಾಣ ಬೇಕು:

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ಶೇ.50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವವರಿಗೆ ಹೆಚ್ಚುವರಿ ಪರಿಹಾರವಾಗಿ 5 ಲಕ್ಷ ರು. ನೀಡಲಾಗುತ್ತಿದ್ದು, ಇದು 7 ವರ್ಷಗಳ ಹಳೆಯ ನಿಯಮವಾಗಿದೆ. ಈ ಮೊತ್ತ ಹೆಚ್ಚಿಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೆ, ಚಿತ್ರದುರ್ಗ ನಗರದಲ್ಲಿ ಈಗಿರುವ ರೈಲ್ವೆ ನಿಲ್ದಾಣದ ಜೊತೆಗೆ ತುರುವನೂರು ಮಾರ್ಗದಲ್ಲಿ ಇನ್ನೊಂದು ರೈಲ್ವೆ ನಿಲ್ದಾಣ ಕಂಟೋನ್ಮೆಂಟ್‌ ನಿರ್ಮಿಸುವುದು ಅಗತ್ಯವಿದೆ. ರೈಲ್ವೆ ಯೋಜನೆಯಲ್ಲಿ ಇದನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಈಗಾಗಲೇ ವಿಳಂಬವಾಗಿದ್ದು, ಆದಷ್ಟು ತ್ವರಿತಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಶೇ.90ಕ್ಕೂ ಹೆಚ್ಚು ಭೂಮಿ ಕಳೆದುಕೊಂಡು, ಉಳಿಯುವ ಅಲ್ಪ ಪ್ರಮಾಣದ ಭೂಮಿಯಲ್ಲಿ ರೈತರು ಏನನ್ನೂ ಮಾಡಲು ಆಗುವುದಿಲ್ಲ. ಹೀಗಾಗಿ, ರೈಲ್ವೆಯ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು, ಅಂತಹ ರೈತರಿಗೆ ಪೂರ್ಣ ಸ್ವಾಧೀನವೆಂದು ಪರಿಗಣಿಸಿ ಪರಿಹಾರ ಮೊತ್ತವನ್ನು ನೀಡಬೇಕು. ಅಗತ್ಯಬಿದ್ದಲ್ಲಿ, ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಯೋಜನೆಯಡಿ ತಾಲೂಕಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ 2018ರ ನವೆಂಬರ್‌ ತಿಂಗಳಲ್ಲಿ 11(1) ಅಧಿಸೂಚನೆ ಪ್ರಕಟಗೊಂಡಿದೆ. ಕೋವಿಡ್‌ ರೋಗ ಭೀತಿಯಿಂದಾಗಿ ಪ್ರಕ್ರಿಯೆ ವಿಳಂಬವಾಗಿದ್ದು, ಸೆಪ್ಟಂಬರ್ ವರೆಗೆ ಕಾಲ ವಿಸ್ತರಣೆಗೆ ಅನುಮತಿ ದೊರೆತಿದೆ ಎಂದು ತಿಳಿಸಿದರು.

65 ಕುಟುಂಬಗಳು ಬಾಧಿತ

ಉಪವಿಭಾಗಾಧಿಕಾರಿ ಪ್ರಸನ್ನ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಡಿ.ಎಸ್‌.ಹಳ್ಳಿ ಗ್ರಾಮದಲ್ಲಿ 65 ಕುಟುಂಬಗಳು ಬಾಧಿತವಾಗಲಿವೆ. ಅದೇ ರೀತಿ ಹಂಪನೂರು-31, ಚೀಳಂಗಿ-10, ಜಟ್ಲಹಳ್ಳಿ-11, ಕೊಳಹಾಳ್‌-12, ಸಾದರಹಳ್ಳಿ-11, ಮಾರಗಟ್ಟ-25, ಚಿಕ್ಕಪುರ-12, ಈಚಲನಾಗೇನಹಳ್ಳಿ-20, ಕೆಳಗೋಟೆ-14, ಸಿದ್ದಾಪುರ-30, ಬಳ್ಳೆಕಟ್ಟೆ-21, ವಿಜಾಪುರ-24, ಲಕ್ಷ್ಮೇಸಾಗರ-28, ಹಿರೇಬೆನ್ನೂರು-10, ಚಿಕ್ಕಬೆನ್ನೂರು-12 ಸೇರಿ ಒಟ್ಟಾರೆ 25 ಗ್ರಾಮಗಳ 389 ಕುಟುಂಬಗಳು ಬಾಧಿತವಾಗಲಿವೆ. ಗ್ರಾಮ ಸಭೆಗಳನ್ನು ನಡೆಸಿ, ಬಾಧಿತ ಕುಟುಂಬಗಳಿಂದ ಆಕ್ಷೇಪಣೆಗಳ ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ನೈರುತ್ಯ ರೈಲ್ವೆ ಇಲಾಖೆಯ ಭೂ ಕೋರಿಕೆ ವಿಭಾಗದ ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ ಶಶಿಧರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ವೇಣುಗೋಪಾಲ್‌ ಉಪಸ್ಥಿತರಿದ್ದರು.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios