ಕೊರೋನಾ ರಣಕೇಕೆ: ರಾಜ್ಯದಲ್ಲಿ ಒಂದೇ ದಿನ 216 ಕೇಸ್, ಹೊರರಾಜ್ಯದವರ ಪಾಲು 196!

By Kannadaprabha NewsFirst Published May 24, 2020, 7:10 AM IST
Highlights

ರಾಜ್ಯದಲ್ಲಿ ಕೊರೋನಾ ರಣಕೇಕೆ!| ನಿನ್ನೆ 216 ಕೇಸ್‌, ಹೊರರಾಜ್ಯದವರ ಪಾಲು 196| ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ದ್ವಿಶತಕ| ಒಟ್ಟಾರೆ ಸೋಂಕಿತರ ಸಂಖ್ಯೆ 2000 ಸನಿಹಕ್ಕೆ| ಬೆಂಗಳೂರು, ದಕ್ಷಿಣ ಕನ್ನಡದಲ್ಲಿ ಇಬ್ಬರ ಸಾವು| ಕರುನಾಡಿಗೆ ನೆರೆರಾಜ್ಯಗಳಿಂದ ‘ಮಹಾ’ ಕಂಟಕ| ಯಾದಗಿರಿಯಲ್ಲಿ ನಿನ್ನೆ 72 ಕೇಸ್‌| ಎಲ್ಲವೂ ಮಹಾರಾಷ್ಟ್ರ ನಂಟು

ಬೆಂಗಳೂರು(ಮೇ.24): ರಾಜ್ಯದಲ್ಲಿ ಕೊರೋನಾ ಸೋಂಕಿನ ಮಹಾ ಉಬ್ಬರ ಆರಂಭವಾಗಿದ್ದು, ಶನಿವಾರ ಒಂದೇ ದಿನ ಸೋಂಕು ದ್ವಿಶತಕದ ಗಡಿ ದಾಟಿದೆ. ಒಂದೇ ದಿನ 216 ಪ್ರಕರಣ ದಾಖಲಾಗಿದ್ದು, ಇದು ಇದುವರೆಗಿನ ಏಕದಿನದ ದಾಖಲೆಯೂ ಆಗಿದೆ.

ಈ ಉಬ್ಬರದ ಪರಿಣಾಮ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,959ಕ್ಕೆ ಏರಿಕೆಯಾಗಿದ್ದು, ಎರಡು ಸಾವಿರದ ಅಂಚು ತಲುಪಿದೆ. ಸೋಂಕಿತರ ಪೈಕಿ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ.

36 ತಾಸು ಕರ್ನಾಟಕ ಫುಲ್ ಲಾಕ್‌: ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

ಶನಿವಾರ ವರದಿಯಾದ 216 ಪ್ರಕರಣಗಳಲ್ಲಿ 196 (ಶೇ.90.74 ರಷ್ಟು) ಸೋಂಕಿತರು ಅನ್ಯರಾಜ್ಯದಿಂದ ಬಂದವರಾಗಿದ್ದು, ಅದರಲ್ಲೂ 187 (ಶೇ.86ರಷ್ಟು) ಪ್ರಕರಣಗಳು ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಪಸಾಗಿರುವವರಲ್ಲಿ ದೃಢಪಟ್ಟಿವೆ. ಉಳಿದಂತೆ ಸ್ಥಳೀಯವಾಗಿ 20 ಮಂದಿಗೆ ಮಾತ್ರ ಸೋಂಕು ಹರಡಿದೆ. ಒಟ್ಟು ಸೋಂಕಿತರಲ್ಲಿ 4 ತಿಂಗಳ ಮಗುವಿನಿಂದ ಹಿಡಿದು 15 ವರ್ಷದೊಳಗಿನ 44 ಮಂದಿ ಇದ್ದಾರೆ.

216 ಪ್ರಕರಣಗಳ ಪೈಕಿ ಯಾದಗಿರಿಯಲ್ಲಿ 72, ರಾಯಚೂರು 40, ಮಂಡ್ಯ 28, ಚಿಕ್ಕಬಳ್ಳಾಪುರ 26, ಗದಗ 15, ಧಾರವಾಡ 5, ಬೆಂಗಳೂರು ನಗರ ಹಾಗೂ ಹಾಸನದಲ್ಲಿ ತಲಾ 4, ಬೀದರ್‌, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕೋಲಾರ ತಲಾ 3, ಉತ್ತರ ಕನ್ನಡ 2, ಕಲಬುರಗಿ, ಬೆಳಗಾವಿ ಜಿಲ್ಲೆಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.

ಮಹಾರಾಷ್ಟ್ರ ಹೊರತುಪಡಿಸಿ ಗುಜರಾತ್‌, ದೆಹಲಿ, ತಮಿಳುನಾಡಿನಿಂದ ತಲಾ 2, ಆಂಧ್ರಪ್ರದೇಶ ಹಾಗೂ ರಾಜಸ್ಥಾನದಿಂದ ಆಗಮಿಸಿರುವವರಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಸ್ಥಳೀಯವಾಗಿ ವರದಿಯಾಗಿರುವ 20 ಪ್ರಕರಣಗಳಲ್ಲಿ ಗದಗದಲ್ಲಿ 913ನೇ ಸೋಂಕಿತ ವೃದ್ಧನಿಂದ 9 ಮಂದಿಗೆ ಸೋಂಕು ಹರಡಿದೆ. ಐಎಲ್‌ಐ ಹಿನ್ನೆಲೆ ಹೊಂದಿರುವ 3 ಮಂದಿ, ಸಾರಿ ಹಿನ್ನೆಲೆಯ 1, ಚೆನ್ನೈನಿಂದ ಆಗಮಿಸಿದ್ದ 1587ನೇ ಸೋಂಕಿತನಿಂದ ಕೋಲಾರದಲ್ಲಿ ಇಬ್ಬರಿಗೆ, ದಾವಣಗೆರೆಯ 1251ನೇ ಸೋಂಕಿತನಿಂದ ಇಬ್ಬರಿಗೆ ಸೋಂಕು ಹರಡಿದ್ದು, ಉಳಿದ ಮೂರು ಪ್ರಕರಣಗಳ ಸೋಂಕು ಹಿನ್ನೆಲೆಯ ತನಿಖೆ ಪ್ರಗತಿಯಲ್ಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಸೋಂಕಿತರ ಸಾವು:

1959 ಪ್ರಕರಣಗಳಲ್ಲಿ ಶನಿವಾರ ಬಿಡುಗಡೆಯಾದ 11 ಮಂದಿ ಸೇರಿ 608 ಮಂದಿ ಗುಣಮುಖರಾಗಿದ್ದಾರೆ. 1,307 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 13 ಮಂದಿ ಐಸಿಯುನಲ್ಲಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ 32 ವರ್ಷದ ಸೋಂಕಿತ ಮೃತಪಟ್ಟಿದ್ದು, ದಕ್ಷಿಣ ಕನ್ನಡದಲ್ಲಿ ಮತ್ತೊಬ್ಬ 55 ವರ್ಷದ ವ್ಯಕ್ತಿ ಸೋಂಕಿತ ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಕೊರೋನಾ ಲಸಿಕೆ ಮೊದಲ ಪ್ರಯೋಗ ಯಶಸ್ವಿ!

ಎಲ್ಲವೂ ಮಹಾರಾಷ್ಟ್ರ ನಂಟು

ಯಾದಗಿರಿಯಲ್ಲಿ ಶನಿವಾರ ಬರೋಬ್ಬರಿ 72 ಮಂದಿಗೆ ಸೋಂಕು ದೃಢಪಟ್ಟಿದೆ. 72 ಮಂದಿಯೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಪಸಾಗಿರುವವರೇ ಆಗಿದ್ದು, ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಬಳಿಕ ಯಾದಗಿರಿಯಲ್ಲಿ ಮಹಾ ಸೋಂಕು ಸ್ಫೋಟಗೊಂಡಿದೆ. ಉಳಿದಂತೆ ರಾಯಚೂರಿನಲ್ಲಿ ವರದಿಯಾಗಿರುವ 40 ಪ್ರಕರಣದಲ್ಲಿ 38 ಪ್ರಕರಣ ಮಹಾರಾಷ್ಟ್ರದಿಂದ ವಾಪಸಾಗಿರುವವರಲ್ಲೇ ವರದಿಯಾಗಿದೆ. ಉಳಿದಂತೆ ಮಂಡ್ಯದ 28 ಹಾಗೂ ಚಿಕ್ಕಬಳ್ಳಾಪುರದ 26 ಸೋಂಕು ಪ್ರಕರಣಗಳೂ ಸಹ ಮಹಾರಾಷ್ಟ್ರದಿಂದಲೇ ಆಮದಾಗಿದ್ದು, ರಾಜ್ಯಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

- ಶನಿವಾರ ನಡೆಸಿದ ಕೊರೋನಾ ಸೋಂಕು ಪರೀಕ್ಷೆ - 9,670

- ನೆಗೆಟಿವ್‌ ವರದಿ - 9,039

- ಒಟ್ಟು ಇಲ್ಲಿಯವರೆಗಿನ ಸಾವು- 44

- ನಿನ್ನೆ ಪಾಸಿಟಿವ್‌ - 216

- ವರದಿಗಾಗಿ ನಿರೀಕ್ಷೆ - 415

- ಕ್ವಾರಂಟೈನ್‌ನಲ್ಲಿರುವವರು - 25,667

- ದೋಹಾ, ಜಕಾರ್ತ, ಮಾಲೆ, ಕೌಲಾಲಂಪುರದಿಂದ ಶನಿವಾರ ಬೆಂಗಳೂರಿಗೆ ಬಂದವರು - 442

click me!