
ಬೆಂಗಳೂರು(ಜೂ.03): ರಾಜ್ಯದ ಗೃಹ ಬಳಕೆದಾರರಿಗೆ ಗರಿಷ್ಠ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹ ಜ್ಯೋತಿ’ ಯೋಜನೆ ಜುಲೈ 1ರಿಂದ ಬಳಕೆಯಾಗುವ ವಿದ್ಯುತ್‌ಗೆ ಅನ್ವಯವಾಗಲಿದ್ದು, ಹೀಗಾಗಿ ನಿಗದಿತ ಪ್ರಮಾಣದ ವಿದ್ಯುತ್ ಬಳಕೆದಾರರು ಆ.1ರಿಂದ ವಿದ್ಯುತ್ ಬಿಲ್ ಪಾವತಿಸುವ ಅವಶ್ಯಕತೆಯಿಲ್ಲ. ಆದರೆ, ಜುಲೈ 1ರವರೆಗೆ ಬಳಕೆ ಮಾಡಿರುವ ವಿದ್ಯುತ್‌ನ ಯಾವುದೇ ಶುಲ್ಕ (ಬಿಲ್) ಪಾವತಿ ಬಾಕಿ ಇಟ್ಟುಕೊಳ್ಳಬಾರದು. ಈ ಬಾಕಿ ಪಾವತಿಗೆ 3 ತಿಂಗಳ ಗಡುವು ವಿಧಿಸಿ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತದೆ. ಇದನ್ನು ಸರ್ಕಾರ ಭರಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಿದ್ದಾರೆ.
ಷರತ್ತುಗಳೇನು?:
ಯೋಜನೆಗೆ ಷರತ್ತೂ ಇದೆ. ಗರಿಷ್ಠ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರೂ, ಫಲಾನುಭವಿಗಳ ವಿದ್ಯುತ್ ಬಳಕೆಯ ಹಿಂದಿನ 12 ತಿಂಗಳ ಸರಾಸರಿಯನ್ನು ಲೆಕ್ಕಹಾಕಿ ಅದಕ್ಕೆ ಶೇಕಡಾ 10 ರಷ್ಟುಹೆಚ್ಚುವರಿ ಯುನಿಟ್‌ಗಳನ್ನು ಕೂಡಿ ಅಷ್ಟುಬಳಕೆವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುವುದು. ಉದಾಹರಣೆಗೆ, ಒಂದು ಮನೆಯ ವಿದ್ಯುತ್ ಬಿಲ…ನ 12 ತಿಂಗಳ ಸರಾಸರಿ ಬಳಕೆ 100 ಯುನಿಟ್ ಆಗಿದ್ದರೆ ಹೆಚ್ಚುವರಿ 10 ಯುನಿಟ್ (ಶೇ.10) ಸೇರಿಸಿ ಪ್ರತಿ ತಿಂಗಳು 110 ಯುನಿಟ್ ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡಲಾಗುವುದು.
ಪಂಚ ಗ್ಯಾರಂಟಿ ಘೋಷಿಸಿದ ಕೈ ಸರ್ಕಾರ, ಏನೇನು ಷರತ್ತು..?: ಹೇಗಿದೆ “ಮೇಷ್ಟ್ರು” ರಾಮಯ್ಯನ ಐದು ಪಕ್ಕಾ ಲೆಕ್ಕ..?
ಅದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಹೆಚ್ಚುವರಿ ಬಳಕೆಗೆ ತಕ್ಕಂತೆ ಶುಲ್ಕ ಪಾವತಿಸಬೇಕು. ಉದಾ: 110 ಯುನಿಟ್ ಉಚಿತ ವಿದ್ಯುತ್‌ಗೆ ಅರ್ಹತೆ ಹೊಂದಿರುವವರು 130 ಯುನಿಟ್ ಬಳಸಿದರೆ ಹೆಚ್ಚುವರಿ 20 ಯುನಿಟ್‌ನ ಶುಲ್ಕ ತೆರಬೇಕಾಗುತ್ತದೆ. ಇನ್ನು 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕು ಎಂದು ಹೇಳಲಾಗಿದೆ.
ಬಾಡಿಗೆದಾರರಿಗೂ ಉಚಿತ ವಿದ್ಯುತ್!:
ಇನ್ನು ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್ ಸೌಲಭ್ಯ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಬಾಡಿಗೆ ಮನೆಗಳ ವಿದ್ಯುತ್ ಸಂಪರ್ಕದ ಮೀಟರ್ (ಆರ್.ಆರ್. ನಂಬರ್) ಮನೆ ಮಾಲೀಕರ ಹೆಸರಿನಲ್ಲಿರುತ್ತದೆ. ಅದನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟನೆ ದೊರಕಿಲ್ಲ. ಆದರೆ, ಬಾಡಿಗೆ ಮನೆಗಳಲ್ಲಿರುವವರಿಗೂ ಗೃಹ ಜ್ಯೋತಿ ಖಚಿತ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ