ಇನ್ಮುಂದೆ ಪ್ರತಿ ಮನೆಗೆ 200 ಕಸ ಶುಲ್ಕ?: ದುಡ್ಡು ಕಟ್ಟದಿದ್ರೆ ತ್ಯಾಜ್ಯ ಸಂಗ್ರಹ ಸ್ಥಗಿತ

By Kannadaprabha NewsFirst Published Jun 12, 2020, 8:10 AM IST
Highlights

ಖಾಲಿ ನಿವೇಶನಕ್ಕೂ ಚದರ ಅಡಿಗೆ 20 ಪೈಸೆ ಶುಲ್ಕ| ಅಧಿಸೂಚನೆಗೆ ಬಿಬಿಎಂಪಿ ಸಿದ್ಧತೆ| ಮುಂದಿನ ತಿಂಗಳಿಂದ ಜಾರಿ?| ತ್ಯಾಜ್ಯ ಶುಲ್ಕ ವಸೂಲಿಗೆ ವ್ಯಾಪಕ ವಿರೋಧ| ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು|

ಬೆಂಗಳೂರು(ಜೂ.12): ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ-2020ರ ಅನ್ವಯ ನಗರದ ಪ್ರತಿ ಮನೆಯಿಂದ ತಿಂಗಳಿಗೆ 200 ಶುಲ್ಕ ಸಂಗ್ರಹಿಸುವ ಕುರಿತು ಶೀಘ್ರದಲ್ಲಿಯೇ ಬಿಬಿಎಂಪಿ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜುಲೈನಿಂದ ಜಾರಿಯಾಗುವ ಸಾಧ್ಯತೆಯಿದೆ.

ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ನೀತಿಯಂತೆ ಪ್ರತಿ ಮನೆಗೆ ಬಿಬಿಎಂಪಿ ಮಾಸಿಕವಾಗಿ 200 ಶುಲ್ಕ ವಿಧಿಸಬಹುದು. ಜತೆಗೆ ವಾಣಿಜ್ಯ ತ್ಯಾಜ್ಯ ಉತ್ಪಾದಕರಾದ ಹೋಟೆಲ್‌, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್‌ ಮಾಲ್‌ ಸೇರಿದಂತೆ ಮೊದಲಾದ ಕಡೆ ಪ್ರತಿ ದಿನ ಉತ್ಪಾದನೆ ಆಗುವ ತ್ಯಾಜ್ಯದ ಆಧಾರದ ಮೇಲೆ ದರ ನಿಗದಿ ಪಡಿಸಲಾಗಿದೆ. 5 ರಿಂದ 100 ಕೆ.ಜಿ ವರೆಗೆ 500 ರಿಂದ 14 ಸಾವಿರ ಮಾಸಿಕ ಶುಲ್ಕ ನಿಗದಿ ಮಾಡಲು ಅವಕಾಶವಿದೆ. ಈ ಕುರಿತು ಬಿಬಿಎಂಪಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾಹಿತಿ ಪ್ರಕಾರ ಜುಲೈನಿಂದ ಅನ್ವಯವಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿಯ ಮೂಲಗಳು ತಿಳಿಸಿವೆ.

ಬೆಂಗಳೂರು: ಅರ್ಧಕರ್ಧ ನಗರಕ್ಕೆ ವ್ಯಾಪಿಸಿದ ಮಹಾಮಾರಿ ಕೊರೋನಾ..!

ನಿಯಮ ಪ್ರಕಾರ ಶುಲ್ಕ:

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಬಿಬಿಎಂಪಿ ಸಹ ವಾರ್ಷಿಕವಾಗಿ ಸುಮಾರು 800 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಹಾಗಾಗಿ, ಕಸ ಸಂಗ್ರಹಿಸುವುದಕ್ಕೆ ಶುಲ್ಕ ವಿಧಿಸುವುದು ಅನಿವಾರ್ಯ. ಜಲಮಂಡಳಿಯ ನೀರಿನ ಶುಲ್ಕ ಸಂಗ್ರಹಿಸುವ ಮಾದರಿಯಲ್ಲಿ ಕಸದ ಮಾಸಿಕ ಶುಲ್ಕ ಸಂಗ್ರಹಿಸಲಾಗುವುದು. ಹೇಗೆ ಮತ್ತು ಯಾರು ಈ ಶುಲ್ಕ ಸಂಗ್ರಹಿಸಬೇಕು. ಶುಲ್ಕ ಪಾವತಿಸದವರಿಗೆ ದಂಡ ಅಥವಾ ಕ್ರಮ ಏನು ಎಂಬುದರ ಬಗ್ಗೆ ಮೇಯರ್‌, ಆಯುಕ್ತರು ಶೀಘ್ರದಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ನೀರಿನ ಬಿಲ್‌ ಹಾಗೂ ವಿದ್ಯುತ್‌ ಬಿಲ್‌ ಪಾವತಿ ಮಾಡದಿದ್ದರೆ ಹೇಗೆ ಸಂಪರ್ಕ ಕಡಿತ ಮಾಡಲಾಗುತ್ತದೋ ಅದೇ ರೀತಿ ಕಸದ ಮಾಸಿಕ ಶುಲ್ಕ ಪಾವತಿ ಮಾಡದವರ ಮನೆಯಿಂದ ಕಸ ಸಂಗ್ರಹ ಸ್ಥಗಿತಗೊಳ್ಳಲಿದೆ. ಖಾಲಿ ನಿವೇಶನಕ್ಕೂ ಪ್ರತಿ ಚದರ ಅಡಿಗೆ 20 ಪೈಸೆಯಂತೆ ಶುಲ್ಕ ವಿಧಿಸುವ ಅವಕಾಶವಿದೆ ಎಂದು ವಿಶೇಷ ಆಯುಕ್ತರು ಹೇಳಿದರು.

ಭಾರೀ ವಿರೋಧ

ತ್ಯಾಜ್ಯ ಶುಲ್ಕ ವಸೂಲಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್‌ ನಗರ ಘಟಕದ ಕಾರ್ಯಕರ್ತರು ಗುರುವಾರ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಜತೆಗೆ ತ್ಯಾಜ್ಯ ಸಂಗ್ರಹಕ್ಕೆ ಮಾಸಿಕ ಶುಲ್ಕ ವಿಧಿಸದಂತೆ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಶುಲ್ಕ ಯಾರಿಗೆ ಎಷ್ಟು?

ತ್ಯಾಜ್ಯಉತ್ಪಾದಕ ವರ್ಗ ಶುಲ್ಕ 
ಗೃಹ (ಎಲ್ಲ ಮನೆಗಳು) 200
ವಾಣಿಜ್ಯ ತ್ಯಾಜ್ಯ ಉತ್ಪಾದಕರಿಗೆ?
ತ್ಯಾಜ್ಯಉತ್ಪಾದಕ ವರ್ಗ ಶುಲ್ಕ (ಮಾಸಿಕ .)
ದಿನಕ್ಕೆ 5 ಕೆ.ಜಿ.ಗಿಂತ ಕಡಿಮೆ ಕಸ ಉತ್ಪಾದಕರಿಗೆ 500
ದಿನಕ್ಕೆ 5 ರಿಂದ 10 ಕೆ.ಜಿ ಕಸ ಉತ್ಪಾದಕರಿಗೆ 1,400
ದಿನಕ್ಕೆ 11 ರಿಂದ 25 ಕೆ.ಜಿ ಕಸ ಉತ್ಪಾದಕರಿಗೆ 3,500
ದಿನಕ್ಕೆ 26 ರಿಂದ 50 ಕೆ.ಜಿ ಕಸ ಉತ್ಪಾದಕರಿಗೆ 7,000
ದಿನಕ್ಕೆ 100 ಮತ್ತು ಅದಕ್ಕಿಂತ ಹೆಚ್ಚಿನ ಕಸ ಉತ್ಪಾದಕರಿಗೆ 14,000
 

click me!