ಚಾಮರಾಜನಗರ ದುರಂತ ಸಂತ್ರಸ್ತರಿಗೆ ತಲಾ 2 ಲಕ್ಷ ಪರಿಹಾರ: ರಾಜ್ಯ ಸರ್ಕಾರ

By Kannadaprabha News  |  First Published May 21, 2021, 11:09 AM IST

* ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ 
* ಪರಿಹಾರದ ಮೊತ್ತ ತಕ್ಷಣವೇ ಮೃತರ ಕುಟುಂಬಗಳಿಗೆ ವಿತರಿಸಲಿ
* ವಿಚಾರಣೆ ಮೇ 25ಕ್ಕೆ ಮುಂದೂಡಿದ ಕೋರ್ಟ್‌
 


ಬೆಂಗಳೂರು(ಮೇ.21): ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 24 ಕೊರೋನಾ ಸೋಂಕಿತರ ಕುಟುಂಬಗಳಿಗೆ ತಲಾ 2 ಲಕ್ಷ ರು.ಗಳ ಪರಿಹಾರ ನೀಡಲು ತೀರ್ಮಾನಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠ ಗುರುವಾರ ಅರ್ಜಿ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಮೃತಪಟ್ಟ ಎಲ್ಲ 24 ಸೋಂಕಿತರ ಕುಟುಂಬಗಳಿಗೂ ಸರ್ಕಾರ ತಲಾ 2 ಲಕ್ಷ ರು. ಪರಿಹಾರ ಘೋಷಿಸಿದೆ ಎಂದು ತಿಳಿಸಿದರು. ನಿವೃತ್ತ ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲಗೌಡ ನೇತೃತ್ವದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ನೀಡಿರುವ ವರದಿಯಲ್ಲಿ ಆಮ್ಲಜನಕ ಕೊರತೆಯಿಂದ ಒಟ್ಟು 37 ಜನ ಮೃತಪಟ್ಟಿದ್ದಾರೆಂದು ಹೇಳಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಎಂದರು.

Tap to resize

Latest Videos

undefined

ಆಕ್ಸಿಜನ್ ಇಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವು

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಪ್ರತಿಕ್ರಿಯಿಸಿ, ಸದ್ಯ ಸರ್ಕಾರ ಘೋಷಿಸಿರುವ ತಲಾ 2 ಲಕ್ಷ ರು. ಪರಿಹಾರದ ಮೊತ್ತವನ್ನು ತಕ್ಷಣವೇ ಮೃತರ ಕುಟುಂಬಗಳಿಗೆ ವಿತರಿಸಲಿ. ದುರಂತದಲ್ಲಿ 24 ಜನ ಮೃತಪಟ್ಟಿದ್ದಾರೆಯೇ ಅಥವಾ ಅದಕ್ಕೂ ಹೆಚ್ಚಿದೆಯೇ, ಮೃತರ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಪರಿಹಾರ ಸಮರ್ಪಕವಾಗಿದೆಯೇ ಎಂಬ ಬಗ್ಗೆ ಮುಂದೆ ವಿಚಾರಣೆ ನಡೆಸಿ ನಿರ್ಧರಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!