ಸರ್ಕಾರಿ ಶಾಲೆಗೆ 'ಅಡಿಕೆ'ಯೇ ಬಂಡವಾಳ! ಅನುದಾನಕ್ಕಾಗಿ ಕೈಚಾಚದೆ, ಸ್ವಾವಲಂಬಿಯಾದ ಈ ಸ್ಕೂಲ್ ರಾಜ್ಯಕ್ಕೇ ಮಾಡೆಲ್!

Published : Apr 06, 2026, 08:55 PM IST
Chikkamagaluru School

ಸಾರಾಂಶ

ಚಿಕ್ಕಮಗಳೂರಿನ ಶ್ರೀನಿವಾಸಪುರ ಗ್ರಾಮದ ಸರ್ಕಾರಿ ಶಾಲೆಯೊಂದು ಮುಚ್ಚುವ ಹಂತ ತಲುಪಿತ್ತು. ಆದರೆ, ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಶಾಲಾ ಜಾಗದಲ್ಲಿ ಅಡಿಕೆ ತೋಟ ನಿರ್ಮಿಸಿ, ಅದರಿಂದ ಬರುವ ಆದಾಯದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಿ, ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಸ್ಪೂರ್ತಿ ಕಥೆ ತಿಳಿಯಲು ಓದಿ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಏ.06): ಇಂದು ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಅಭಾವ ಮತ್ತು ಮಕ್ಕಳ ದಾಖಲಾತಿ ಕುಸಿತದಿಂದಾಗಿ ಬೀಗ ಹಾಕುವ ಸ್ಥಿತಿಗೆ ತಲುಪಿವೆ. ಆದರೆ, ಕಾಫಿನಾಡು ಚಿಕ್ಕಮಗಳೂರಿನ ಒಂದು ಪುಟ್ಟ ಗ್ರಾಮದ ಶಾಲೆ ಮಾತ್ರ ಈ ಎಲ್ಲಾ ಸವಾಲುಗಳನ್ನು ಮೀರಿ ನಿಂತಿದೆ. ‘ಸರ್ಕಾರದ ಅನುದಾನ ಬರಲಿ"’ ಎಂದು ಕಾಯುವ ಬದಲು, ತನ್ನ ಕಾಲ ಮೇಲೆ ತಾನು ನಿಲ್ಲುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಈಗ ಹೊಸ ಚೈತನ್ಯ!

ಚಿಕ್ಕಮಗಳೂರು ತಾಲೂಕಿನ ಶ್ರೀನಿವಾಸಪುರ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯೇ ಈ ಸಾಧನೆಯ ಹರಿಕಾರ. ಕೇವಲ 30 ಮನೆಗಳಿರುವ ಈ ಪುಟ್ಟ ಗ್ರಾಮದ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಕೇವಲ 30 ಮಕ್ಕಳು ಓದುತ್ತಿದ್ದಾರೆ. ಒಂದೊಮ್ಮೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಆದರೆ, ಈ ಶಾಲೆಯ ಮುಖ್ಯ ಶಿಕ್ಷಕ ಚಂದ್ರೇಗೌಡ ಮತ್ತು ಸಹ ಶಿಕ್ಷಕಿ ಲಾವಣ್ಯ ಅವರು ಈ ಶಾಲೆಯ ಭವಿಷ್ಯವನ್ನೇ ಬದಲಿಸುವ ಪಣ ತೊಟ್ಟರು.

ಶಾಲೆಗಿದೆ 'ಅಡಿಕೆ' ಆಸರೆ: ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ!

ಶಾಲೆಯ ಅಭಿವೃದ್ಧಿಗೆ ಕೇವಲ ದಾನಿಗಳನ್ನೇ ನಂಬುವ ಬದಲು, ಶಾಶ್ವತ ಆದಾಯದ ಮೂಲವಿರಲಿ ಎಂದು ಶಿಕ್ಷಕರು ಮತ್ತು ಗ್ರಾಮಸ್ಥರು ನಿರ್ಧರಿಸಿದರು. ಶಾಲೆಯ ಮುಂಭಾಗದಲ್ಲಿದ್ದ ಒಂದು ಎಕರೆ ಗ್ರಾಮ ಠಾಣಾ ಜಾಗವನ್ನು ಶಾಲೆಯ ಖಾತೆಗೆ ವರ್ಗಾಯಿಸಿಕೊಂಡರು. ಅಲ್ಲಿ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಅರ್ಧ ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಹಾಗೂ ಉಳಿದ ಅರ್ಧ ಎಕರೆಯಲ್ಲಿ ಸುಮಾರು 312 ಅಡಿಕೆ ಗಿಡಗಳನ್ನು ಮತ್ತು ನಾಲ್ಕು ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ.

ನೀರಿಗಾಗಿ ಹೋರಾಟ, ಈಗ ಫಲ ನೀಡಲು ಸಿದ್ಧ:

ಅಡಿಕೆ ತೋಟಕ್ಕೆ ನೀರುಣಿಸಲು ಮೊದಲು 500 ಅಡಿ ಬೋರ್ ಕೊರೆಸಿದರೂ ನೀರು ಸಿಗಲಿಲ್ಲ. ಆದರೆ ಧೃತಿಗೆಡದ ಶಿಕ್ಷಕರು ಅಂದೇ ಸಂಜೆ ಮತ್ತೊಂದು ಬೋರ್ ಕೊರೆಸಿದರು. 150 ಅಡಿಯಲ್ಲಿ ನೀರು ಲಭ್ಯವಾಯಿತು. ಇಂದು ಆ ಅಡಿಕೆ ತೋಟ ನಳನಳಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಾರ್ಷಿಕವಾಗಿ 3 ರಿಂದ 4 ಲಕ್ಷ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಮಕ್ಕಳಿಗೆ ವಿಮಾನ ಪ್ರವಾಸದ ಕನಸು!

  • ಈ ತೋಟದಿಂದ ಬರುವ ಆದಾಯವನ್ನು ಕೇವಲ ಶಾಲೆಯ ಕಟ್ಟಡ ದುರಸ್ತಿಗೆ ಮಾತ್ರವಲ್ಲದೆ, ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸಲು ಯೋಜನೆ ರೂಪಿಸಲಾಗಿದೆ.
  • ಸ್ಮಾರ್ಟ್ ಕ್ಲಾಸ್ ಆರಂಭ: ಆಧುನಿಕ ಉಪಕರಣಗಳ ಮೂಲಕ ಗುಣಮಟ್ಟದ ಶಿಕ್ಷಣ.
  • ಪೂರ್ವ ಪ್ರಾಥಮಿಕ ಶಿಕ್ಷಣ: ಎಲ್ ಕೆ ಜಿ (LKG) ಮತ್ತು ಯು ಕೆ ಜಿ (UKG) ತರಗತಿಗಳನ್ನು ಆರಂಭಿಸಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದು.
  • ವಿಮಾನ ಪ್ರವಾಸ: ಈ ಶಾಲೆಯ ಮಕ್ಕಳನ್ನು ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಬೇಕು ಎಂಬುದು ಶಿಕ್ಷಕರ ವಿಶಿಷ್ಟ ಕನಸಾಗಿದೆ.

ಗ್ರಾಮಸ್ಥರ ಬೆಂಬಲವೇ ಶಕ್ತಿ:

ಈ ಮಹತ್ವಾಕಾಂಕ್ಷಿ ಕಾರ್ಯದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಹಾಗೂ ಗ್ರಾಮಸ್ಥರು ಶಿಕ್ಷಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸರ್ಕಾರಿ ಶಾಲೆ ಎಂದರೆ ನಿರ್ಲಕ್ಷ್ಯ ಎನ್ನುವ ಕಾಲದಲ್ಲಿ, ದೃಷ್ಟಿಕೋನ ಬದಲಾದರೆ ಎಂತಹ ಕ್ರಾಂತಿ ಮಾಡಬಹುದು ಎಂಬುದಕ್ಕೆ ಶ್ರೀನಿವಾಸಪುರ ಶಾಲೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಹೊರಟಿರುವ ಈ ತಂಡದ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಮಾದರಿಯು ರಾಜ್ಯದ ಇತರ ಶಾಲೆಗಳಿಗೂ ಪ್ರೇರಣೆಯಾಗಲಿ ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಂಗ್ರೆಸ್‌ನಿಂದ ಉತ್ತರ-ದಕ್ಷಿಣ ಭಾರತ ವಿಭಜನೆ ತಂತ್ರ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ ಜೋಶಿ ಆಕ್ರೋಶ!
Breaking: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ; ಮುಂದಿನ ರಿಸಲ್ಟ್ ದಿನಾಂಕ ನಾಳೆ ಸಂಜೆ ಘೋಷಣೆ!