
ಬೆಂಗಳೂರು (ಜೂ.26): ಒಂದು ವ್ಯಕ್ತಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಈ ದೇಶದ ಸಂವಿಧಾನವನ್ನು ಧೂಳಿಪಟ ಮಾಡಿ ದೇಶದ ಜನತೆಯ ಹಕ್ಕು ಕಿತ್ತುಕೊಂಡಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಮಂಥನದ ವತಿಯಿಂದ ಬುಧವಾರ ಆರ್.ವಿ.ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರುಮುದ್ರಿತ ‘ಭುಗಿಲು’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 50 ವರ್ಷಗಳ ಹಿಂದೆ ಈ ದೇಶದಲ್ಲಿ ಒಂದು ವ್ಯಕ್ತಿ ತನ್ನ ಸ್ಥಾನ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಿಸಿದರು. ಈ ಮೂಲಕ ದೇಶದ ಜನರ ಹಕ್ಕು ಕಿತ್ತುಕೊಂಡಿದ್ದರು ಎಂದರು.
ಈ ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾನಿ, ಅಟಲ್ ಬಿಹಾರಿ ವಾಜಪೇಯಿ, ಮಧು ದಂಡಾವತೆ ಸೇರಿದಂತೆ ಕೆಲ ನಾಯಕರು ಪಾರ್ಲಿಮೆಂಟರಿ ಸಮಿತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿದ್ದರು. ಈ ನಾಯಕರನ್ನೆಲ್ಲಾ ತಡರಾತ್ರಿ ಬಂಧಿಸಿ ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಹಾಕಿದರು. ಈ ಘಟನೆಯನ್ನು ನಾನು ಸಹ ನೋಡಿದ್ದೆ. ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಲಕ್ಷಾಂತರ ಮುಖಂಡರನ್ನು ಜೈಲಿಗೆ ಹಾಕಿದ್ದರು ಎಂದು ತುರ್ತು ಪರಿಸ್ಥಿತಿ ಘಟನೆಯನ್ನು ಮೆಲುಕು ಹಾಕಿದರು.
ಪ್ರಮುಖವಾಗಿ ಆರ್‌ಎಸ್‌ಎಸ್‌ನ ಲಕ್ಷಾಂತರ ಕಾರ್ಯಕರ್ತರು, ಮುಖಂಡರು, ಸೋಷಿಯಲಿಸ್ಟ್ ಪಾರ್ಟಿ ಮುಖಂಡರು, ಟ್ರೇಡ್ ಯೂನಿಯನ್ ಮುಖಂಡರು, ಹಲವು ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಹಲವರನ್ನು ಜೈಲಿಗೆ ಹಾಕಿದರು. ಈ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನುಚ್ಚು ನೂರು ಮಾಡಿದ್ದರು ಎಂದು ತುರ್ತು ಪರಿಸ್ಥಿತಿಯ ಕರಾಳತೆ ಕುರಿತು ಮಾತನಾಡಿದರು.
ಈ ಪುಸ್ತಕದಲ್ಲಿ 50 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಅಚ್ಚುಕಟ್ಟಾಗಿ ತಂದಿದ್ದಾರೆ. ಇಂದಿನ ಪ್ರಧಾನ ಮಂತ್ರಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯುವ ಮುಖಂಡರಾಗಿ ಹೋರಾಟ ನಡೆಸಿದ್ದರು. ಅಲ್ಲಿಂದ ಅವರ ನಾಯಕತ್ವಕ್ಕೆ ಆ ಹೋರಾಟ ಶಕ್ತಿ ತುಂಬಿತು ಎಂಬುದರ ಬಗ್ಗೆ ಪುಸ್ತಕ ತಂದಿದ್ದಾರೆ. ಅದಕ್ಕಾಗಿ ರಾಷ್ಟ್ರೋಸ್ಥಾನ ಸಂಸ್ಥೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ನಾವು ಮುಸ್ಲಿಂ ಆಕ್ರಮಣ ಕ್ರಿಶ್ಚಿಯನ್ ಆಕ್ರಮಣ ಸಹಿಸಿದ್ದೆವು. ವಿರೋಧಿಸಿದ್ದೆವು. ಕಾಂಗ್ರೆಸ್ ಹಂತ ಹಂತವಾಗಿ ನಮಗೆ ಮೋಸಮಾಡಿತು. 1971ರಲ್ಲಿ ಬಾಂಗ್ಲಾ ವಿಮೋಚನೆ ಇಂದಿರಾಗಾಂಧಿಗೆ ಒಳ್ಳೆಯ ಅವಕಾಶವನ್ನು ನೀಡಿತು. ಆಕೆ ತುತ್ತ ತುದಿಗೇರಿದ್ದರು. ನಾನು ದೇಶಕ್ಕಿಂತ ದೊಡ್ಡವರು ಎನ್ನುವ ಭಾವನೆ ತಲೆಗೇರಿತು. ಅಲಹಾಬಾದ್ ಕೋರ್ಟ್ ಕೊಟ್ಟ ತೀರ್ಪನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಾಗ ತನ್ನ ಕುರ್ಚಿ ಹೋಗುವ ಭಯದಿಂದ ಮಧ್ಯರಾತ್ರಿ ತುರ್ತುಪರಿಸ್ಥಿತಿ ಹೇರಿದರು. ದೇಶಕ್ಕೆ ತೊಂದರೆ ಆದಾಗ ತುರ್ತುಪರಿಸ್ಥಿತಿ ಹೇರುವುದು ತಪ್ಪಲ್ಲ. ಆದರೆ ಕುರ್ಚಿ ಹೋಗುವ ಭಯದಲ್ಲಿ ತುರ್ತುಪರಿಸ್ಥಿತಿ ಹೇರಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷ ಎಂ.ಪಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ