
ಆಶಂಕರ್ ಎನ್. ಪರಂಗಿ
ಬೆಂಗಳೂರು(ಜು.26): ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಈವರೆಗೆ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದ್ದು, ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ಶೇ.19 ಅಧಿಕ ಮಳೆ ಸುರಿದಿದೆ. ಆರಂಭದಲ್ಲಿ ಅಷ್ಟಾಗಿ ಮಳೆ ಆಗದಿದ್ದರೂ ಹವಾಮಾನ ವೈಪರೀತ್ಯದಿಂದ ಕಳೆದ ಜೂನ್ ಮತ್ತು ಜುಲೈ ಮೂರನೇ ವಾರದಲ್ಲಿ ಸತತ ಒಂದು ವಾರ ಕಾಲ ಮಳೆ ಆಗಿದೆ.
ಮುಂಗಾರಿನ (ಜೂ.1-ಜು.19ರವರೆಗೆ) ಅವಧಿಯಲ್ಲಿ ರಾಜ್ಯದಲ್ಲಿ 484 ಮಿ.ಮೀ.ವಾಡಿಕೆ ಮಳೆ ಆಗಬೇಕು. ಇದೀಗ ಆ ವಾಡಿಕೆಗಿಂತ ಹೆಚ್ಚು, ಅಂದರೆ 578 ಮಿ.ಮೀ.(ಶೇ.19) ಮಳೆ ಬಿದ್ದಿದೆ. ಅದರಲ್ಲೂ ಕರಾವಳಿ, ಮಲೆನಾಡು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರದಿ ಪ್ರಕಾರ, ಕಳೆದ ವರ್ಷ 2020ರ ಇದೇ ಅವಧಿಯಲ್ಲಿ ವಾಡಿಕೆ 373ಮಿ.ಮೀ.ನಷ್ಟೇ (375ಮಿ.ಮೀ.) ಮಳೆ ಆಗಿದ್ದರಿಂದ ಕೊರತೆ ಕಾಣಲಿಲ್ಲ. 2019ರಲ್ಲಿ ಇದೇ ವೇಳೆ ಮಳೆ ಅಭಾವ ಎದುರಾಗಿತ್ತು. ವಾಡಿಕೆ 505ಮಿ.ಮೀ.ನಷ್ಟು ಮಳೆ ಬಾರದೇ ಕೇವಲ 373 ಮಿ.ಮೀ. ಸುರಿದು ಶೇ.26ರಷ್ಟು ಮಳೆ ಕೊರತೆಯಾಗಿತ್ತು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಆರಂಭವಾದ ಜೂನ್ ಮೊದಲೆರಡು ವಾರ ರಾಜ್ಯಕ್ಕೆ ಅಷ್ಟಾಗಿ ಮಳೆ ಬರಲಿಲ್ಲ, ಆದರೆ ನಂತರ ಮಳೆ ಅಬ್ಬರ ಜೋರಾಗಿತ್ತು. ಅದೇ ರೀತಿ ಜುಲೈ ಮೊದಲೆರಡು ವಾರದ ಬಾರದ ಮಳೆ ಇದೀಗ ಮೂರನೇ ವಾರದಲ್ಲಿ ಸುರಿದಿದೆ. ಒಂದು ವೇಳೆ ಇದೇ ರೀತಿ ವಾತಾವರಣ ಮುಂಬರುವ ಆಗಸ್ಟ್‌ನಲ್ಲೂ ಮುಂದುವರಿದರೆ ಈ ವರ್ಷ ಸುಮಾರು ಶೇ.55ರಷ್ಟು ಅತ್ಯಧಿಕ ಮಳೆ ನಿರೀಕ್ಷಿಸಬಹುದು ಎನ್ನಲಾಗಿದೆ. ಹಿಂದಿನ ವರ್ಷ 2020ರಲ್ಲಿ ಒಟ್ಟು ಮುಂಗಾರು ಅವಧಿಯಲ್ಲಿ ವಾಡಿಕೆ 840ಮಿ.ಮೀ.ಗಿಂತಲೂ 1063.9ಮಿ.ಮೀ. ಮಳೆ ಸುರಿದಿತ್ತು, ಅಂದರೆ ಶೇ.27ರಷ್ಟು ಹೆಚ್ಚು ಮಳೆ ಆಗಿತ್ತು.
ರಾಜ್ಯದಲ್ಲಿ ತಗ್ಗಿದ ವರುಣನ ಅಬ್ಬರ: ಈ ಭಾಗದಲ್ಲಿ ಇನ್ನೂ 2 ದಿನ ಮಳೆ
ಆಗಸ್ಟಲ್ಲಿ ಮಳೆ ಕೊರತೆ?
ಪ್ರತಿ ವರ್ಷ ವರುಣ ಮುಂಗಾರು ಆರಂಭದಲ್ಲಿ ಅಷ್ಟಾಗಿ ಬೀಳದೆ ಆಗಸ್ಟ್‌ನಲ್ಲಿ ತುಸು ಹೆಚ್ಚಾಗಿ ಆರ್ಭಟಿಸುವುದು ರೂಢಿ. 2020ರಲ್ಲಿ ಸಹ ಆರಂಭದಲ್ಲಿ ಮಳೆ ಬಾರದೇ ಆಗಸ್ಟ್ ಮೊದಲ ವಾರ ಧಾರಕಾರ ಸುರಿದು ಮೊದಲೆರಡು ತಿಂಗಳು ಉಂಟಾಗಿದ್ದ ಕೊರತೆ ನೀಗಿಸಿತ್ತು. ಇದೀಗ 2021ರ ಜು.20ರ ಹೊತ್ತಿಗಾಗಲೇ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲಾದರೂ ಕೂಡ ಆಗಸ್ಟ್‌ನಲ್ಲಿ ಮಳೆ ಕೊರತೆ ಆಗಬಹುದು ಎಂದು ಅಂದಾಜಿಸಲಾಗಿದೆ. ಆಗಸ್ಟ್‌ನಲ್ಲಿ ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಸ್ಟ್ರಫ್, ಸುಳಿಗಾಳಿ ತೀವ್ರತೆ ಇನ್ನಿತರ ಬದಲಾವಣೆಗಳು ಅಷ್ಟಾಗಿ ಕಂಡು ಬರುವುದಿಲ್ಲ ಎಂಬ ಮುನ್ಸೂಚನೆ ಇದೆ. ಇದು ನಿಜವಾದಲ್ಲಿ ಈ ಭಾರಿ ಕೇವಲ ವಾಡಿಕೆಯಷ್ಟುಇಲ್ಲವೇ ಅದಕ್ಕಿಂತಲೂ ಕಡಿಮೆ ಮಳೆ ಆಗುವ ನಿರೀಕ್ಷೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಮುಂದಿನ ನಾಲ್ಕು ವಾರ ಹವಾಮಾನದಲ್ಲಿ ಅಷ್ಟಾಗಿ ಬದಲಾವಣೆಗಳು ಕಂಡು ಬರುವುದಿಲ್ಲ ಎಂಬ ಮುನ್ಸೂಚನೆ ಇದೆ. ಹೀಗಾಗಿ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಮಳೆ ಕಡಿಮೆಯಾಗಬಹುದು. ಸಮುದ್ರಮಟ್ಟದಲ್ಲಿ ಏನಾದರೂ ಅಕಾಲಿಕ ವೈಪರೀತ್ಯಗಳು ಉಂಟಾದರೆ ರಾಜ್ಯದ ಈವರೆಗೆ ಬಿದ್ದ ಮಳೆ ಅಂಕಿ ಅಂಶಗಳ ಪ್ರಕಾರ (ಶೇ.55) ಅಧಿಕ ಮಳೆ ಸುರಿಯಬಹುದು ಎಂದು ಕೆಎಸ್‌ಎನ್‌ಡಿಎಂಸಿ ಮಾಜಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಮಿ.ಮೀ.ಗಳಲ್ಲಿ ಮಳೆ ಪಟ್ಟಿ...(ಜೂ.1-ಜು.19ರ ಅವಧಿ)
ವರ್ಷ..ವಾಡಿಕೆ.. ಬಿದ್ದಮಳೆ.. ಏರಿಳಿಕೆ (%)
2019...505...373...-26
2020...373....375...0
2021...484..578..+19
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ